5 ಲಕ್ಷ ಸ್ತ್ರೀಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿ ಸಾಲ 3ರಿಂದ 5 ಲಕ್ಷಕ್ಕೇರಿಕೆ, 20 ಲಕ್ಷ ರೈತರಿಗೆ ಬಡ್ಡಿರಹಿತ ಸಾಲ ಪ್ರಸಕ್ತ 5ರಿಂದ 20 ಲಕ್ಷಕ್ಕೆ ಏರಿಕೆ.
ಕೋಲಾರ/ಚಿಕ್ಕಬಳ್ಳಾಪುರ(ಜ.24): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಮತಬೇಟೆಗೆ ಮುಂದಾಗಿರುವ ಕಾಂಗ್ರೆಸ್, ಮತದಾರರ ಓಲೈಕೆ ಹಿನ್ನೆಲೆಯಲ್ಲಿ ಭರವಸೆಗಳ ಘೋಷಣೆಯನ್ನು ಮುಂದುವರಿಸಿದೆ. ಅಧಿಕಾರಕ್ಕೆ ಬಂದರೆ ರಾಜ್ಯದ ಸಹಕಾರಿ ಸಂಘಗಳಲ್ಲಿ ಹೆಣ್ಣು ಮಕ್ಕಳು ಈಗಾಗಲೇ ತೆಗೆದುಕೊಂಡಿರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡುತ್ತೇವೆ. ಜೊತೆಗೆ, ಶೂನ್ಯ ಬಡ್ಡಿದರದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಈಗ ನೀಡುತ್ತಿರುವ 3 ಲಕ್ಷ ರು.ಗಳ ಸಾಲದ ಪ್ರಮಾಣವನ್ನು 5 ಲಕ್ಷಕ್ಕೆ ಹಾಗೂ ರೈತರಿಗೆ ಈಗ ನೀಡುತ್ತಿರುವ 5 ಲಕ್ಷ ರು.ಗಳ ಸಾಲದ ಪ್ರಮಾಣವನ್ನು 20 ಲಕ್ಷದವರೆಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದೆ. ಅಲ್ಲದೆ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ 10 ಸಾವಿರ ಕೋಟಿ ರು.ಮೀಸಲಿಡುತ್ತೇವೆ ಎಂದು ವಾಗ್ದಾನ ಮಾಡಿದೆ.
‘ಪ್ರಜಾಧ್ವನಿ’ ಬಸ್ ಯಾತ್ರೆ ಮೂಲಕ ಭರ್ಜರಿ ಪ್ರಚಾರ ರಾರಯಲಿ ನಡೆಸುತ್ತಿರುವ ಕಾಂಗ್ರೆಸ್, ಈಗಾಗಲೇ ಮೂರು ಭರವಸೆಗಳನ್ನು ಘೋಷಿಸಿದ್ದು, ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರು. ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ನೀಡುವುದಾಗಿ ತಿಳಿಸಿದ್ದು, ಮತದಾರರ ಮನಗೆಲ್ಲುವ ಕಾರ್ಯ ನಡೆಸಿದೆ.
ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದು ಸ್ಪರ್ಧಿಸಲ್ಲ: ಬಿಎಸ್‌ವೈ ಹೊಸ ಬಾಂಬ್!
ಕೋಲಾರ ಹಾಗೂ ಚಿಕ್ಕಬಳ್ಳಾಪುರಗಳಲ್ಲಿ ಸೋಮವಾರ ನಡೆದ ‘ಪ್ರಜಾಧ್ವನಿ’ ಬಸ್‌ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದರೆ ‘ಸ್ತ್ರೀಶಕ್ತಿ ಸಾಲಮನ್ನಾ’ ಯೋಜನೆಯನ್ನು ಜಾರಿಗೊಳಿಸುತ್ತೇವೆ. ಅಲ್ಲದೆ, ಶೂನ್ಯಬಡ್ಡಿದರದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹಾಗೂ ರೈತರಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು 5 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸುತ್ತೇವೆ ಎಂದರು. ಜೊತೆಗೆ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ ಎಂದರು. ಅಲ್ಲದೆ, ಒಂದು ವರ್ಷದಲ್ಲಿ ಎತ್ತಿನಹೊಳೆ, ಕೆ.ಸಿ.ವ್ಯಾಲಿಯ ಮೂರನೇ ಹಂತದ ಯೋಜನೆ ಜಾರಿಗೊಳಿಸಿ, ಅವಿಭಜಿತ ಕೋಲಾರ ಜಿಲ್ಲೆಗೆ ನೀರು ಪೂರೈಸುವ ಭರವಸೆ ನೀಡಿದರು.
ಮೋದಿ ವಿರುದ್ಧ ಮತ್ತೆ ವಾಗ್ದಾಳಿ:
ಇದೇ ವೇಳೆ, ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಬಿಜೆಪಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಭೀತಿ ಪ್ರಾರಂಭವಾಗಿದೆ. ಅವರಿಗೆ ಮೋದಿಯವರೇ ಬಂಡವಾಳವಾಗಿದ್ದಾರೆ. ಹಾಗಾಗಿ, ಮೋದಿಯನ್ನು ವಾರಕ್ಕೊಮ್ಮೆ ಕರೆಸಲು ಪ್ರಾರಂಭಿಸಿದ್ದಾರೆ. ಮೋದಿ ಮತ್ತು ಅಮಿತ್ ಶಾ ರಾಜ್ಯಕ್ಕೆ ನೂರು ಬಾರಿ ಬಂದು ಕ್ಯಾಂಪ್ ಮಾಡಿದರೂ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಇದು ಸೂರ್ಯ, ಚಂದ್ರರಿರುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಇಂತಹ ಭ್ರಷ್ಟಸರ್ಕಾರವನ್ನು ಹಿಂದೆದೂ ನಾನು ನೋಡಿಲ್ಲ. ಒಂದೂವರೆ ವರ್ಷದ ಹಿಂದೆಯೇ ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ ಪ್ರತಿ ಗುತ್ತಿಗೆಗೂ 40% ಕಮಿಷನ್ ಕೊಡಬೇಕು ಎಂದು ಆರೋಪಿಸಿ, ಮೋದಿಗೆ ಪತ್ರ ಬರೆದರು. ಈವರೆಗೆ ತನಿಖೆ ನಡೆದಿಲ್ಲ. ಇದು ಭ್ರಷ್ಟಾಚಾರಕ್ಕೆ ಮೋದಿಯವರ ಸಮ್ಮತಿ ಎಂದು ಅರ್ಥೈಸಬೇಕಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಸಭಾಧ್ಯಕ್ಷರು ಅವಕಾಶವನ್ನೇ ನೀಡಲಿಲ್ಲ. ನಾನು ಇಂತಹ ಸ್ಪೀಕರ್‌ರನ್ನು ನನ್ನ ರಾಜಕೀಯದಲ್ಲಿ ಕಂಡೆ ಇಲ್ಲ ಎಂದು ಆರೋಪಿಸಿದರು.
Assembly election: ನಮ್ಮಲ್ಲಿ ಭಿನ್ನಮತ ಇಲ್ಲ, ಒಗ್ಗಟ್ಟಾಗಿದ್ದೇವೆ: ಮುಂದಿನ ಸರ್ಕಾರ ನಮ್ಮದೇ: ಡಿಕೆಶಿ
‘ನಾನು ಈವರೆಗೆ 13 ಬಜೆಟ್ ಮಂಡಿಸಿದ್ದೇನೆ. ಆದರೆ, ಯಾವುದೇ ಬಿಲ್‌ಗಳಿಗೆ ಒಂದು ನಯಾ ಪೈಸೆ ಲಂಚ ಪಡೆದಿಲ್ಲ. ನಾನು ಲಂಚ ಪಡೆದಿರುವುದನ್ನು ರುಜುವಾತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ಭರವಸೆ ಮಳೆ
- ಈಗಾಗಲೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಮಾಸಿಕ .2000 ರು., ಬಿಪಿಎಲ್ ಕುಟುಂಬಕ್ಕೆ ಮಾಸಿಕ 10 ಕೆ.ಜಿ. ಅಕ್ಕಿ ಘೋಷಿಸಿರುವ ಕಾಂಗ್ರೆಸ್
- ಇದೀಗ ಸಹಕಾರಿ ಸಂಘಗಳಲ್ಲಿ ಹೆಣ್ಣುಮಕ್ಕಳ ಸಾಲ ಸಂಪೂರ್ಣ ಮನ್ನಾ, ಸ್ತ್ರೀಶಕ್ತಿ ಹಾಗೂ ರೈತರ ಶೂನ್ಯ ಬಡ್ಡಿ ಸಾಲ ಮೊತ್ತ ಏರಿಕೆ. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಜೆಟ್‌ನಲ್ಲಿ 10000 ಕೋಟಿ ರು.
- ಅಧಿಕಾರಕ್ಕೆ ಬಂದ ಮೇಲೆ 1 ವರ್ಷದಲ್ಲಿ ಎತ್ತಿನಹೊಳೆ, ಕೆ.ಸಿ.ವ್ಯಾಲಿ 3ನೇ ಹಂತದ ಯೋಜನೆಗಳನ್ನು ಪೂರ್ಣಗೊಳಿಸಿ ಅವಿಭಜಿತ ಕೋಲಾರ ಜಿಲ್ಲೆಗೆ ನೀರು ಪೂರೈಸುವ ಕುರಿತೂ ಭರವಸೆ.