Assembly election: ಆಪ್‌ ಪುನಾರಚನೆ: ಪೃಥ್ವಿರೆಡ್ಡಿ ಮತ್ತೆ ರಾಜ್ಯಾಧ್ಯಕ್ಷ

By Kannadaprabha NewsFirst Published Jan 24, 2023, 1:56 AM IST
Highlights
  • ಆಪ್‌ ಪುನಾರಚನೆ: ಪೃಥ್ವಿರೆಡ್ಡಿ ಮತ್ತೆ ರಾಜ್ಯಾಧ್ಯಕ್ಷ
  •  ಮುಖ್ಯಮಂತ್ರಿ ಚಂದ್ರುಗೆ ಪ್ರಚಾರ ಸಮಿತಿ
  • ಭಾಸ್ಕರ್‌ ರಾವ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ
  • ಮಾಧ್ಯಮ ಜವಾಬ್ದಾರಿ ಬ್ರಿಜೇಶ್‌ ಕಾಳಪ್ಪಗೆ
  • ಚುನಾವಣೆಗೆ ಕೇಜ್ರಿವಾಲ್‌ ಪಕ್ಷದ ತಯಾರಿ

ಬೆಂಗಳೂರು (ಜ.24) : ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಆಮ್‌ ಆದ್ಮಿ ಪಕ್ಷವು (ಆಪ್‌) ರಾಜ್ಯ ಘಟಕವನ್ನು ಪುನರ್‌ರಚಿಸಿದ್ದು, ರಾಜ್ಯಾಧ್ಯಕ್ಷರನ್ನಾಗಿ ಪೃಥ್ವಿರೆಡ್ಡಿ ಅವರನ್ನೇ ಮುಂದುವರೆಸಿದೆ.

ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಕರ್ನಾಟಕ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ(Dileep pande) ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ನೂತನ ಘಟಕ ಮತ್ತು ಎಲ್ಲ ಜಿಲ್ಲೆಗಳ ಪದಾಧಿಕಾರಿಗಳ ಪಟ್ಟಿಪ್ರಕಟಿಸಿದರು.

ಆಪ್‌ ಗೆದ್ದರೆ ಸರ್ಕಾರಿ ಸೌಲಭ್ಯ ಮನೆ ಬಾಗಿಲಿಗೆ

ನೂತನ ಘಟಕದಲ್ಲಿ ಐವರು ಕಾರ್ಯಾಧ್ಯಕ್ಷರು, 10 ಮಂದಿ ಉಪಾಧ್ಯಕ್ಷರು, 20 ಮಂದಿ ಕಾರ್ಯದರ್ಶಿಗಳು ಹಾಗೂ 31 ಮಂದಿ ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ನೂತನ ಕಾರ್ಯಾಧ್ಯಕ್ಷರಾಗಿ ಬಿ.ಟಿ.ನಾಗಣ್ಣ, ಮೋಹನ್‌ ದಾಸರಿ, ರವಿಚಂದ್ರ ನೆರಬೆಂಚಿ, ಶಿವರಾಯಪ್ಪ ಜೋಗಿನ್‌ ಹಾಗೂ ಜಾಫರ್‌ ಮೊಯಿನುದ್ದೀನ್‌, ಪ್ರಧಾನ ಕಾರ್ಯದರ್ಶಿಯಾಗಿ ಸಂಚಿತ್‌ ಸಹಾನಿ, ಖಜಾಂಚಿಯಾಗಿ ಜೆ.ಹರಿಹರನ್‌ ಅವರನ್ನು ನೇಮಿಸಲಾಗಿದೆ.

ಪ್ರಚಾರ ಮತ್ತು ಜನಸಂಪರ್ಕ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು, ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಭಾಸ್ಕರ್‌ ರಾವ್‌ ಹಾಗೂ ಮಾಧ್ಯಮ ಮತ್ತು ಸಂವಹನಾ ಉಸ್ತುವಾರಿಯಾಗಿ ಬ್ರಿಜೇಶ್‌ ಕಾಳಪ್ಪ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ಬಳಿಕ ಮಾತನಾಡಿದ ದಿಲೀಪ್‌ ಪಾಂಡೆ, ಇದು ಪದಾಧಿಕಾರಿಗಳ ಮೊದಲ ಪಟ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟುಪಟ್ಟಿಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದರು.

ಕಳೆದ ವಾರ ಕರ್ನಾಟಕದಲ್ಲಿ ಪಕ್ಷದ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿತ್ತು. ಗ್ರಾಮ ಸಂಪರ್ಕ ಅಭಿಯಾನದಿಂದಾಗಿ (ಜಿಎಸ್‌ಎ) ಪಕ್ಷಕ್ಕೆ ಕನ್ನಡಿಗರಿಂದ ಅಭೂತಪೂರ್ವ ಬೆಂಬಲ ದೊರೆತಿದ್ದು, ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಹಾಗೂ ರಾಜಕೀಯ ಹೋರಾಟಗಾರರು ಸಿಕ್ಕಿದ್ದಾರೆ. ಇದರ ಪರಿಣಾಮವಾಗಿ, ನಾವು ಕರ್ನಾಟಕದ ಎಲ್ಲ ಜಿಲ್ಲೆಗಳು ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡದಾಗಿ ಬೆಳೆದಿದ್ದೇವೆ. ಇವರುಗಳು ಎಲ್ಲ ಮೂರು ಸಾಂಪ್ರದಾಯಿಕ ಪಕ್ಷಗಳಿಂದ ಮೋಸ ಹೋಗಿರುವವರು ಹಾಗೂ ಬಿಜೆಪಿಯ 40% ಸರ್ಕಾರಿಂದ ಬೇಸತ್ತಿರುವವರಾಗಿದ್ದಾರೆ ಎಂದು ಹೇಳಿದರು.

ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಹಲವು ಆಕಾಂಕ್ಷಿಗಳು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಿಕ್ಕಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ. ಫೆಬ್ರವರಿ ಮಧ್ಯ ಭಾಗದೊಳಗೆ ಜಿಲ್ಲೆಗಳ ಹಾಗೂ ಸರ್ಕಲ್‌ಗಳ ಸಂಘಟನಾ ರಚನೆಯನ್ನು ಘೋಷಿಸುತ್ತೇವೆ. ಅದೇ ವೇಳೆಗೆ ಪಕ್ಷವು ಕರ್ನಾಟಕದ ಎಲ್ಲ 58,000 ಬೂತ್‌ಗಳನ್ನು ತಲುಪಲಿದೆ. ಬೇರೆ ಪಕ್ಷಗಳ ಸಂಘಟನೆಗಳಲ್ಲಿದ್ದು, ಅವರನ್ನು ನಂಬಿ ಮೋಸ ಹೋಗಿರುವ ಉತ್ತಮ ವ್ಯಕ್ತಿಗಳು ರಾಜ್ಯದಲ್ಲಿ ಬದಲಾವಣೆ ತರಲು ನಮ್ಮೊಂದಿಗೆ ಕೈಜೋಡಿಸಬಹುದು ಎಂದು ಆಹ್ವಾನ ನೀಡಿದರು.

ಕೇಜ್ರಿವಾಲ್ ಆಪ್‌ಗೆ ಮತ್ತೊಂದು ಸಂಕಷ್ಟ, ಸಚಿವರು 7 ಕೋಟಿ ರೂಪಾಯಿ ಲಂಚ ಪಡೆದ ಆರೋಪ

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಉಸ್ತುವಾರಿ ದಾಮೋದರನ್‌, ರಾಜ್ಯ ಸಂಘಟನಾ ಸಹ ಉಸ್ತುವಾರಿ ಉಪೇಂದ್ರ ಗಾವಂಕರ್‌, ಮಾಧ್ಯಮ ಮತ್ತು ಸಂವಹನಾ ವಿಭಾಗದ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ, ಮಾಧ್ಯಮ ಉಸ್ತುವಾರಿ ಜಗದೀಶ್‌ ವಿ. ಸದಂ ಮತ್ತಿತರರು ಹಾಜರಿದ್ದರು.

click me!