ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ಹೆಚ್ಚಳ: ಸಚಿವ ಪರಮೇಶ್ವರ್‌ ಕಳವಳ

Published : Jul 12, 2023, 08:19 AM IST
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ಹೆಚ್ಚಳ: ಸಚಿವ ಪರಮೇಶ್ವರ್‌ ಕಳವಳ

ಸಾರಾಂಶ

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳಿಂದ 132 ಮಂದಿ ಸಾವನ್ನಪ್ಪಿರುವ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದ್ದು, ‘ರಸ್ತೆ ನಿರ್ಮಾಣದಲ್ಲಿನ ನ್ಯೂನತೆಗಳಿಂದಲೇ ಹೆಚ್ಚು ಅಪಘಾತಗಳು ನಡೆಯುತ್ತಿವೆ.

ವಿಧಾನಸಭೆ (ಜು.12): ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತಗಳಿಂದ 132 ಮಂದಿ ಸಾವನ್ನಪ್ಪಿರುವ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆದಿದ್ದು, ‘ರಸ್ತೆ ನಿರ್ಮಾಣದಲ್ಲಿನ ನ್ಯೂನತೆಗಳಿಂದಲೇ ಹೆಚ್ಚು ಅಪಘಾತಗಳು ನಡೆಯುತ್ತಿವೆ. ಈ ಬಗ್ಗೆ ಸೂಕ್ತ ಕ್ರಮಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗುವುದು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸುರೇಶ್‌ಕುಮಾರ್‌, ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ 132 ಸಾವಾಗಿವೆ. ಮಂಡ್ಯ 65, ರಾಮನಗರ 53 ಹಾಗೂ ಮೈಸೂರು ವ್ಯಾಪ್ತಿಯಲ್ಲಿ 4 ಸಾವಾಗಿವೆ. ಈ ಸಾವುಗಳ ತಡೆಗೆ ರಾಜ್ಯ ಸರ್ಕಾರದ ಕ್ರಮವೇನು? ಎಂದು ಪ್ರಶ್ನಿಸಿದರು. ಜತೆಗೆ ರಸ್ತೆಯಲ್ಲಿ ಸೂಚನಾ ಫಲಕಗಳ ಕೊರತೆ ಸೇರಿದಂತೆ ಹಲವು ನ್ಯೂನತೆ ಇದೆ ಎಂದೂ ಹೇಳಿದರು.

ಜೈನಮುನಿ ಹತ್ಯೆ ಕೇಸ್‌: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ರಾಜ್ಯ ಸರ್ಕಾರ ನಕಾರ

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಜಿ.ಪರಮೇಶ್ವರ್‌, ನಮ್ಮ ಇಲಾಖೆ ಮಾಹಿತಿ ಪ್ರಕಾರ ಈ ಹೆದ್ದಾರಿಯಲ್ಲಿ 100 ಮಂದಿ ಸಾವನ್ನಪ್ಪಿದ್ದು, 335 ಮಂದಿಗೆ ಗಂಭೀರ ಗಾಯಗಳಾಗಿವೆ. ಮಾರ್ಚ್‌ನಲ್ಲಿ 19 ಸಾವು, 42 ಗಂಭೀರ ಗಾಯ, ಏಪ್ರಿಲ್‌ನಲ್ಲಿ 23 ಸಾವು, 83 ಮಂದಿಗೆ ಗಾಯ, ಮೇ ತಿಂಗಳಲ್ಲಿ 29 ಸಾವು, 93 ಮಂದಿಗೆ ಗಾಯ, ಜೂನ್‌ನಲ್ಲಿ 28 ಸಾವು, 96 ಮಂದಿಗೆ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಈ ಅಂಕಿ-ಅಂಶಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.

ಇನ್ನು ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್‌ಕುಮಾರ್‌ ಅವರಿಗೆ ಸ್ಥಳ ಪರಿಶೀಲನೆಗೆ ಸೂಚಿಸಲಾಗಿತ್ತು. ಈ ವೇಳೆ ಹೆದ್ದಾರಿ ಪ್ರಾಧಿಕಾರದವರು ಹೈವೇ ಪ್ಯಾಟ್ರೋಲಿಂಗ್‌ ವಾಹನಗಳನ್ನು ಹೆಚ್ಚು ಮಾಡಬೇಕು. ವೇಗ ನಿಯಂತ್ರಣ, ತಿರುವು, ಕಿರಿದಾದ ರಸ್ತೆಗಳ ಬಗ್ಗೆ ಸೂಚನಾ ಫಲಕ ಹಾಕಬೇಕು. ವಾಹನಗಳು ಪಥ ಶಿಸ್ತು ಪಾಲಿಸುತ್ತಿಲ್ಲ. ಇನ್ನು ಪಾದಚಾರಿಗಳು ರಸ್ತೆ ಪ್ರವೇಶಿಸದಂತೆ ಬೇಲಿ ಸೂಕ್ತವಾಗಿ ಅಳವಡಿಸಿಲ್ಲ. ಹಲವೆಡೆ ಬೀದಿ ದೀಪ ವ್ಯವಸ್ಥೆಯಿಲ್ಲ ಎಂದು ತಿಳಿದುಬಂದಿದೆ. ಈ ಎಲ್ಲಾ ಅಂಶಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರುತ್ತೇವೆ ಎಂದರು.

ಸೂಚನಾ ಫಲಕ ಇಲ್ಲದ ಕಾರಣ ವೇಗವಾಗಿ ಸಾಗುವ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಜತೆಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಎನ್‌ಎಚ್‌ಎಐಗೆ ಪತ್ರ ಬರೆದು ಸುರಕ್ಷತಾ ಆಡಿಟ್‌ ನಡೆಸುವಂತೆ ಕೋರಿದ್ದಾರೆ. ರಸ್ತೆಯಲ್ಲಿರುವ ನ್ಯೂನತೆ ಹಾಗೂ ಅವ್ಯವಸ್ಥೆಗಳಿಂದಲೇ ಅಪಘಾತಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ಸರಿಪಡಿಸಿದರೆ ಅಪಘಾತಗಳು ಕಡಿಮೆಯಾಗಬಹುದು ಎಂದು ಪರಮೇಶ್ವರ್‌ ತಿಳಿಸಿದರು.

ಯುವ ಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ನಡೆಯಲು ಪೊಲೀಸ್‌ ನಿರ್ಲಕ್ಷ್ಯವೇ ಕಾರಣ: ಬೊಮ್ಮಾಯಿ ಆಕ್ರೋಶ

‘ಹೈವೇನಲ್ಲಿ ಹೊರ ಹೋಗದ ನೀರು’: ಜೆಡಿಎಸ್‌ ಸದಸ್ಯ ಜಿ.ಟಿ.ದೇವೇಗೌಡ, ರಸ್ತೆಯಲ್ಲಿ ನೀರು ಹೊರಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಸೂಕ್ತವಾಗಿ ನಡೆಸಿಲ್ಲ. ಹೀಗಾಗಿ ಮಳೆಯಲ್ಲಿ ವಾಹನಗಳು ಸ್ಕಿಡ್‌ ಆಗಿ ಅಪಘಾತಗಳು ನಡೆಯುತ್ತಿವೆ. ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ