ಜೈನಮುನಿ ಹತ್ಯೆ ಕೇಸ್‌: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ರಾಜ್ಯ ಸರ್ಕಾರ ನಕಾರ

ಬೆಳಗಾವಿಯ ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಸರ್ಕಾರ ಒಪ್ಪದೇ ಇರುವುದನ್ನು ಪ್ರತಿಭಟಿಸಿ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು.

Jainamuni murder Case BJP demands CBI probe state govt refuses gvd

ವಿಧಾನಮಂಡಲ (ಜು.12): ಬೆಳಗಾವಿಯ ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಸರ್ಕಾರ ಒಪ್ಪದೇ ಇರುವುದನ್ನು ಪ್ರತಿಭಟಿಸಿ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರವಾದ ವಾಗ್ವಾದ, ಗದ್ದಲ, ಕೋಲಾಹಲಕಾರಿ ವಾತಾವರಣ ಉಂಟಾದ ಪರಿಣಾಮ ಉಭಯ ಸದನಗಳು ಬುಧವಾರಕ್ಕೆ ಮುಂದೂಡಿಕೆ ಕಂಡವು.

ಜೈನ ಮುನಿಗಳ ಹತ್ಯೆ ಸಂಬಂಧ ಉಭಯ ಸದನಗಳಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು, ಇದೊಂದು ಪೂರ್ವ ನಿಯೋಜಿತ ಹತ್ಯೆಯಾಗಿದೆ. ಪೊಲೀಸರ ಮೇಲೆ ಒತ್ತಡ ಹೇರಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆದ್ದರಿಂದ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಆದರೆ ಪ್ರಕರಣದ ತನಿಖೆಯನ್ನು ರಾಜ್ಯದ ಪೊಲೀಸರು ಮಾಡಲಿದ್ದಾರೆ, ಸಿಬಿಐ ತನಿಖೆ ಅಗತ್ಯವಿಲ್ಲ ಎಂಬ ಗೃಹ ಸಚಿವರ ಸಮರ್ಥನೆ ವಿರೋಧಿಸಿ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದಾಗ ಪೀಠಾಧ್ಯಕ್ಷರು ಸದನವನ್ನು ಬುಧವಾರಕ್ಕೆ ಮುಂದೂಡಿದರು.

ಯುವ ಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ನಡೆಯಲು ಪೊಲೀಸ್‌ ನಿರ್ಲಕ್ಷ್ಯವೇ ಕಾರಣ: ಬೊಮ್ಮಾಯಿ ಆಕ್ರೋಶ

ಹಣಕಾಸು ವಿಷಯಕ್ಕೆ ಹತ್ಯೆ: ಜೈನಮುನಿ ಹತ್ಯೆ ಪ್ರಕರಣದ ತನಿಖೆ ಕುರಿತಂತೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಜೈನ ಮುನಿಗಳು ಜುಲೈ 5ರಂದು ರಾತ್ರಿ 10 ಗಂಟೆಯಿಂದ ಕಾಣೆಯಾಗಿದ್ದು, ಆ ಕುರಿತು ಅವರು ಸ್ಥಾಪಿಸಿದ್ದ ಕಾಮಕುಮಾರ ನಂದಿ ಚಾರಿಟೇಬಲ್‌ ವೆಲ್‌ಫೇರ್‌ ಸೊಸೈಟಿಯ ಅಧ್ಯಕ್ಷ ಹಾಗೂ ಜೈನ ಮುನಿಗಳ ಸಹೋದರನ ಪುತ್ರ ಡಾ.ಭೀಮಪ್ಪಾ ಉಗಾರೆ ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರಿನ ಮೇರೆಗೆ ತನಿಖೆ ನಡೆಸಿದ್ದ ಪೊಲೀಸರು, ನಾರಾಯಣ ಬಸಪ್ಪ ಮಾಳಿ ಹಾಗೂ ಹಸನಸಾಬ್‌ ಮಕ್ಬುಲ್‌ ಎಂಬಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಎಂದು ತಿಳಿಸಿದರು.

ಈ ವೇಳೆ ಜೈನ ಮುನಿಗಳು ನಾರಾಯಣ ಎಂಬಾತನಿಗೆ 6 ಲಕ್ಷ ಹಣ ನೀಡಿದ್ದು, ಅದನ್ನು ವಾಪಸು ನೀಡುವಂತೆ ಒತ್ತಡ ಹಾಕಿದ್ದರು. ಆ ಹಿನ್ನೆಲೆಯಲ್ಲಿ ಹಸನಸಾಬ್‌ ಮಕ್ಬುಲ್‌ ಜತೆಗೂಡಿ ಕಾಮಕುಮಾರ ಮುನಿಗಳನ್ನು ನಾರಾಯಣ ಹತ್ಯೆ ಮಾಡಿದ್ದಾನೆ. ಮೃತ ದೇಹವನ್ನು ತುಂಡರಿಸಿ ರಾಯಬಾಗ ತಾಲೂಕಿನ ಖಟಕಭಾವಿ ಗ್ರಾಮದಲ್ಲಿನ ಆರೋಪಿ ನಾರಾಯಣನ ಜಮೀನಿನಲ್ಲಿ ನಿಷ್ಕಿ್ರಯಗೊಂಡಿದ್ದ ಕೊಳವೆಬಾವಿಗೆ ಎಸೆಯಲಾಗಿದೆ. ಇದನ್ನು ಬಂಧಿತರು ಒಪ್ಪಿಕೊಂಡಿದ್ದಾರೆ. ದೂರು ಮತ್ತು ಎಫ್‌ಐಆರ್‌ ದಾಖಲಾದ 7 ಗಂಟೆಯೊಳಗೆ ಚಿಕ್ಕೋಡಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣವನ್ನು ಭೇದಿಸಿದ್ದಾರೆ. ಆದರೂ ಉಳಿದ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಳೆದ ಒಂದೂವರೆ ತಿಂಗಳ ಹಿಂದಿನವರೆಗೆ ರಾಜ್ಯ ಪೊಲೀಸರ ಮೇಲೆ ಬಿಜೆಪಿಯವರಿಗೆ ಸಾಕಷ್ಟುವಿಶ್ವಾಸವಿತ್ತು. ಆದರೆ ಈಗ ಪೊಲೀಸರ ಮೇಲೆ ವಿಶ್ವಾಸವಿಲ್ಲದಂತಾಗಿರುವುದು ವಿಪರ್ಯಾಸ. ಪ್ರಕರಣವನ್ನು ರಾಜ್ಯ ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದು, ಸಿಬಿಐಗೆ ಕೊಡುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಅದರಿಂದ ತೃಪ್ತರಾಗದ ಬಿಜೆಪಿ ಶಾಸಕರು, ಪ್ರಕರಣವನ್ನು ಸಿಬಿಐಗೆ ಕೊಡುವಂತೆ ಆಗ್ರಹಿಸಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಜೈನ ಮುನಿಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸುವಂತಹದ್ದು. 

ಎಲೆಕ್ಟ್ರಿಕ್‌ ಶಾಕ್‌ ನೀಡಿ ಕೊಲೆ ಮಾಡಿ, ನಂತರ ಮೃತದೇಹವನ್ನು 9 ತುಂಡುಗಳಾಗಿ ಕತ್ತರಿಸಿ ಕೊಳವೆಬಾವಿಗೆ ಎಸೆಯಲಾಗಿದೆ. ಇದನ್ನು ಗಮನಿಸಿದರೆ ಎಲ್ಲವೂ ಪೂರ್ವನಿಯೋಜಿತವಾಗಿ ನಡೆದಂತಿದೆ ಎಂದು ಆರೋಪಿಸಿದರು. ಬಿಜೆಪಿಯ ಆರಗ ಜ್ಞಾನೇಂದ್ರ ಮಾತನಾಡಿ, ಪೊಲೀಸರ ಮೇಲೆ ಒತ್ತಡ ಹೇರಿ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಜೈನ ಮುನಿಗಳ ಕೊಲೆ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ ಎಂದರು. ಇದರಿಂದ ಸಿಟ್ಟಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಅವಧಿಯಲ್ಲೂ ಪೊಲೀಸರ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಿರೇ ಎಂದು ಪ್ರಶ್ನಿಸಿದರು. 

ಜತೆಗೆ ಎಲ್ಲದಕ್ಕೂ ಒಂದಿಲ್ಲೊಂದು ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ. ನಮ್ಮ ಪೊಲೀಸರು ಸಮರ್ಥರಾಗಿದ್ದಾರೆ. ಸಿಬಿಐ ತನಿಖೆಗೆ ವಹಿಸುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು. ಆಗ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಪರಿಸ್ಥಿತಿ ಹತೋಟಿಗೆ ಬರದ ಹಿನ್ನೆಲೆಯಲ್ಲಿ ಸ್ಪೀಕರ್‌ ಯು.ಟಿ. ಖಾದರ್‌ ಸದನವನ್ನು 10 ನಿಮಿಷಗಳ ಮುಂದೂಡಿದರು. ಸದನ ಮತ್ತೆ ಸಮಾವೇಶಗೊಂಡಾಗಲೂ ಬಿಜೆಪಿ ಶಾಸಕರು ಧರಣಿ ಹಿಂಪಡೆಯದ ಕಾರಣ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಪರಿಷತ್‌ನಲ್ಲೂ ಗದ್ದಲ: ಜೈನ ಮುನಿ ಕೊಲೆ ಪ್ರಕರಣದ ಹಿಂದೆ ಐಸಿಸ್‌ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆಯಿದೆ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಬಿಜೆಪಿ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಸ್ವಾಮಿ, ತೇಜಸ್ವಿನಿಗೌಡ, ನವೀನ್‌, ಕೇಶವಪ್ರಸಾದ್‌, ರವಿಕುಮಾರ್‌ ಮಾತನಾಡಿ, ರಾಜ್ಯ ಪೊಲೀಸರ ಸಾಮರ್ಥ್ಯದ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ. ಜೈನ ಮುನಿಯ ಬರ್ಬರ ಕೊಲೆ ಪ್ರಕರಣಕ್ಕೆ ದೇಶ-ವಿದೇಶಗಳಲ್ಲಿ ಖಂಡನೆ ವ್ಯಕ್ತವಾಗಿದೆ. 

ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ಮಲತಾಯಿ ಧೋರಣೆ: ಸಿಎಂ ಸಿದ್ದರಾಮಯ್ಯ

ಜೈನ ಮುನಿಯನ್ನು 9 ತುಂಡು ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದು ಐಸಿಸ್‌ ಉಗ್ರ ಸಂಘಟನೆ ಮಾದರಿಯ ಕೃತ್ಯದಂತಿದೆ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಆದರೆ ಸಿಬಿಐ ತನಿಖೆಗೆ ಸರ್ಕಾರ ಒಪ್ಪಲಿಲ್ಲ, ರಾಜ್ಯ ಪೊಲೀಸರು ದಕ್ಷರಿದ್ದು ಅವರಿಂದ ತನಿಖೆ ಮಾಡಿಸಲಾಗುವುದು ಎಂದು ಗೃಹ ಸಚಿವರ ಸ್ಪಷ್ಟವಾಗಿ ಹೇಳಿದರು. ಇದರಿಂದ ಬಿಜೆಪಿ ಸದಸ್ಯರು ಪೀಠದ ಮುಂದೆ ಧರಣಿ ಮಾಡಲು ಆರಂಭಿಸುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿಸದನವನ್ನು ಮುಂದೂಡಿದರು.

Latest Videos
Follow Us:
Download App:
  • android
  • ios