ಯುವ ಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ನಡೆಯಲು ಪೊಲೀಸ್‌ ನಿರ್ಲಕ್ಷ್ಯವೇ ಕಾರಣ: ಬೊಮ್ಮಾಯಿ ಆಕ್ರೋಶ

ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ಪ್ರಕರಣ ಸೋಮವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾಪಗೊಂಡಿದ್ದು, ಈ ಘಟನೆ ನಡೆಯಲು ಪೊಲಿಸ್‌ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. 

Police negligence is the reason for killing of youth brigade worker Says Basavaraj Bommai gvd

ವಿಧಾನಮಂಡಲ (ಜು.12): ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತನ ಹತ್ಯೆ ಪ್ರಕರಣ ಸೋಮವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾಪಗೊಂಡಿದ್ದು, ಈ ಘಟನೆ ನಡೆಯಲು ಪೊಲಿಸ್‌ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದ ವಿಷಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನಾವಳಿ, ಆರೋಪಿಗಳ ಬಂಧನದ ಬಗ್ಗೆ ಸುದೀರ್ಘವಾಗಿ ಉತ್ತರಿಸಿದರು. ಇದೇ ವಿಷಯ ಕುರಿತು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಆದರೆ ಸಭಾಪತಿ ಬಸವರಾಜ ಹೊರಟ್ಟಿ, ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯದ ಮೇಲೆ ಚರ್ಚೆಗೆ ಅವಕಾಶ ಇರುವುದಿಲ್ಲ. ಬೇರೆ ನಿಯಮಾವಳಿ ಅಡಿ ಪ್ರಸ್ತಾವನೆ ಸಲ್ಲಿಸಿದರೆ ಚರ್ಚಿಸಲು ಅವಕಾಶ ನೀಡುವುದಾಗಿ ತಿಳಿಸಿದರು.

ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಬಿಜೆಪಿ ಹೋರಾಟ: ಬೊಮ್ಮಾಯಿ ಘೋಷಣೆ

ಬೈಕ್‌ ನಿಲುಗಡೆ ಸಂಬಂಧ ಕೊಲೆ: ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಘಟನೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಿ, ನಿರ್ಲಕ್ಷ್ಯ ವಹಿಸಿದ್ದು ನಿಜವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಘಟನೆಯ ಬಗ್ಗೆ ಪೊಲೀಸ್‌ ತನಿಖೆಯ ವಿವರನ್ನು ನೀಡಿದ ಅವರು, ಟಿ. ನರಸೀಪುರದ ಗುಂಜನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜುಲೈ 8ರಂದು ನಡೆದ ಹನುಮ ಜಯಂತಿ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಬೈಕ್‌ ನಿಲುಗಡೆಗೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. 

ಈ ವೇಳೆ ಬೈಕ್‌ ಚಾಲಕರಾದ ಮಣಿಕಂಠ ಮತ್ತು ಸಂದೇಶ್‌ ಎಂಬಿಬ್ಬರು ರಾಮಾನುಜಂ ಮತ್ತು ವೇಣುಗೋಪಾಲ ನಾಯಕ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಇದೇ ವಿಚಾರವಾಗಿ ಮರುದಿನ ಶ್ರೀರಾಂಪುರದ ಮಣಿಕಂಠ, ಸಂದೇಶ್‌, ಅನಿಲ, ಶಂಕರ ಎಂಬುವವರು ರಾಮಾನುಜಂ ಮತ್ತು ವೇಣುಗೋಪಾಲ ನಾಯಕ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಅಲ್ಲಿಗೆ ಬಂದಿದ್ದು, ಎರಡೂ ಗುಂಪುಗಳನ್ನು ಅಲ್ಲಿಂದ ಕಳುಹಿಸಿದ್ದಾರೆ ಎಂದು ಹೇಳಿದರು. ನಂತರ ರಾತ್ರಿ 8.15ಕ್ಕೆ ಯುವ ಬ್ರಿಗೇಡ್‌ ಸಂಘಟನೆ ಕಾರ್ಯಕರ್ತನಾಗಿದ್ದ ವೇಣುಗೋಪಾಲ ನಾಯಕ್‌ಗೆ ಕರೆ ಮಾಡಿದ್ದ ಮಣಿಕಂಠ ‘ಮಾತನಾಡುವುದಿದೆ’ ಎಂದು ಕರೆಸಿಕೊಂಡಿದ್ದಾನೆ. 

ಆಗ ಮಣಿಕಂಠ ಸೇರಿದಂತೆ ಆತನ ಗೆಳೆಯರಾದ ಅನಿಲ್‌, ಮಂಜು, ಶಂಕರ, ಹ್ಯಾರಿಸ್‌, ಸಂದೇಶ್‌ ಎಂಬುವವರು ವೇಣುಗೋಪಾಲ್‌ ನಾಯಕ್‌ ಮೇಲೆ ಬಾಟಲಿ, ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಕೊನೆಗೆ ವೇಣುಗೋಪಾಲ ಸ್ನೇಹಿತ ರಾಮಾನುಜಂ ಮತ್ತಿತರರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರೊಳಗೆ ಆತ ಮೃತಪಟ್ಟಿದ್ದಾನೆ ಎಂದು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದ್ದು, ಮಣಿಕಂಠ ಮತ್ತು ಸಂದೇಶ್‌ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ವಿವರಿಸಿದರು.

ಆಗ ಮಧ್ಯಪ್ರವೇಶಿಸಿದ ಬಸವರಾಜ ಬೊಮ್ಮಾಯಿ, ವೇಣುಗೋಪಾಲ ಸಾವಿಗೆ ಪೊಲೀಸರು ಹಾಗೂ ಸ್ಥಳೀಯ ತಾಲೂಕು ಆಡಳಿತದ ನಿರ್ಲಕ್ಷ್ಯವೇ ಕಾರಣ. ಹನುಮ ಜಯಂತಿಯ ಮರುದಿನ ವೇಣುಗೋಪಾಲ ಮತ್ತು ಸ್ನೇಹಿತನ ಮೇಲೆ ಆರೋಪಿಗಳು ಹಲ್ಲೆ ನಡೆಸಿರುವುದು ತಿಳಿದಿದ್ದರೂ, ಎರಡೂ ಗುಂಪುಗಳನ್ನು ಕರೆದು ಎಚ್ಚರಿಕೆ ನೀಡುವಲ್ಲಿ ಪೊಲೀಸರು ಹಾಗೂ ಸ್ಥಳೀಯ ತಾಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ. ಈ ಕಾರಣದಿಂದಲೇ ಕೊಲೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪೊಲೀಸರ ನಿರ್ಲಕ್ಷ್ಯ ನಿಜವಾಗಿದ್ದರೆ ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಬಿಜೆಪಿ ಸರ್ಕಾರವನ್ನು ದ್ವೇಷಿಸುವ ರಿವರ್ಸ್‌ಗೇರ್‌ ಬಜೆಟ್‌: ಬೊಮ್ಮಾಯಿ

25 ಲಕ್ಷ ರು. ಪರಿಹಾರಕ್ಕೆ ಬಿಜೆಪಿ ಆಗ್ರಹ: ವಿಧಾನ ಪರಿಷತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಮೃತರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡುವಂತೆ ಒತ್ತಾಯಿಸಿದರು. ಹೊಸ ಸರ್ಕಾರ ಬರುತ್ತಿದ್ದಂತೆ ಬೆಳಗಾವಿಯಲ್ಲಿ ಜೈನ ಮುನಿಯ ಹತ್ಯೆ ಈಗ ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ಮೈಸೂರಿನಲ್ಲಿ ವೇಣುಗೋಪಾಲ್‌ ಕೊಲೆಯಾಗಿರುವುದು ಜನರನ್ನು ಆತಂಕಕ್ಕೆ ಈಡು ಮಾಡಿದೆ.ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಆದರೆ, ಚರ್ಚೆಗೆ ಅವಕಾಶ ನೀಡದ ಸಭಾಪತಿ ಬೇರೆ ನಿಯಮಾವಳಿಯಡಿ ವಿಷಯ ಪ್ರಸ್ತಾಪಿಸಿ ಎಂದು ತಿಳಿಸಿ ವಿಷಯಕ್ಕೆ ತೆರೆ ಎಳೆದರು.

Latest Videos
Follow Us:
Download App:
  • android
  • ios