ದೇಶದಲ್ಲಿ ಲೋಕಸಭಾ ಚುನಾವಣೆ ವೇಳೆ ಇಡಿ, ಐಟಿ ಹಾಗೂ ಮಾಧ್ಯಮಗಳು ಎಲ್ಲವೂ ಏಕಪಕ್ಷೀಯವಾಗಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದರು.
ನವದೆಹಲಿ (ಮಾ.21): ದೇಶದಲ್ಲಿ ಮಾಧ್ಯಮಗಳು, ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಆದಾಯ ತೆರಿಗೆ (ಐಟಿ) ಸೇರಿದಂತೆ ಎಲ್ಲವೂ ಏಕಪಕ್ಷಿಯವಾಗಿವೆ. ಬಿಜೆಪಿ ಚುನಾವಣಾ ಬಾಂಡ್ ಮೂಲಕ ಶೇ.56 ಬಾಂಡ್ ಪಡೆದಿದೆ. ಆದರೆ, ಕಾಂಗ್ರೆಸ್ ಶೇ.11 ಪಡೆದಿದೆ. ಈಗ ಲಭ್ಯವಿರುವ ಹಣವನ್ನು ಉಪಯೋಗಿಸಲೂ ಆಗದಂತೆ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು.
ನವದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 18ನೇ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಎಲ್ಲರೂ ಚುನಾವಣೆಯಲ್ಲಿ ಭಾಗಿಯಾಗಲು ಜನರು ಉಸ್ತುಕರಾಗಿದ್ದಾರೆ. ಚುನಾವಣೆ ಪಾರದರ್ಶಕ ವಾಗಿರೋ ತುಂಬಾ ಮುಖ್ಯವಾಗಿದೆ. ಎಲ್ಲಾ ಪಕ್ಷಗಳಿಗೆ ಸಮಾನತೆಯಲ್ಲಿ ಅವಕಾಶ ನೀಡಬೇಕು. ಅಧಿಕಾರವಿರುವ ಸರ್ಕಾರಕ್ಕೆ ಏಕಪಕ್ಷಿಯ ಅವಕಾಶ ಸಿಗಬಾರದು. ಮಾಧ್ಯಮ, ಇಡಿ, ಐಟಿ ಸೇರಿದಂತೆ ಎಲ್ಲವು ಏಕಪಕ್ಷಿಯವಾಗಿದೆ ಎಂದು ಕಿಡಿಕಾರಿದರು.
ನಮಗೆ ಒಂದು ರೈಲ್ವೆ ಟಿಕೆಟ್ ಖರೀದಿಸಲೂ ಹಣವಿಲ್ಲ; ಎಲ್ಲ ಅಕೌಂಟ್ ಫ್ರೀಜ್ ಆಗಿವೆ: ರಾಹುಲ್ ಗಾಂಧಿ
ಸುಪ್ರಿಂಕೋರ್ಟ್ ನಿಂದ ಚುನಾವಣಾ ಬಾಂಡ್ ಮೇಲೆ ನಿಯಂತ್ರಣ ಹಾಕಿದ ಮೇಲೆ ಅದು ಬಹಿರಂಗವಾಗಿದೆ. ಸುಪ್ರಿಂಕೋರ್ಟ್ ಚುನಾವಣಾ ಬಾಂಡ್ ನ್ನ ಅಕ್ರಮ ಮತ್ತು ಕಾನೂನುಬಾಹಿರ ಎಂದಿದೆ. ಇದರಿಂದ ಸಾವಿರಾರು ಕೋಟಿ ಹಣ ವರ್ಗಾವಣೆ ಆಗಿದೆ. ಆದರೆ, ನಮ್ಮ ಖಾತೆಗಳನ್ನ ಫ್ರೀಜ್ ಮಾಡಲಾಗಿದೆ. ಈ ಮೂಲಕ ನಮಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಚುನಾವಣೆ ನಡೆಸಲು ಸಾಧ್ಯವಾಗದ ರೀತಿ ಮಾಡಲಾಗುತ್ತಿದೆ. ಬಿಜೆಪಿ ಚುನಾವಣಾ ಬಾಂಡ್ ಮೂಲಕ ಶೇ.56 ಬಾಂಡ್ ಪಡೆದಿದೆ. ಕಾಂಗ್ರೆಸ್ ಕೇವಲ ಶೇ.11 ಪಡೆದಿದೆ. ಇದರ ಜೊತೆಗೆ ಬಿಜೆಪಿಗೆ ಸಾವಿರಾರು ಕೋಟಿ ಹಣ ನೇರವಾಗಿ ಬಂದಿದೆ. ಈ ಬಗ್ಗೆ ಯಾವ ದಾಖಲೆಗಳು ಇಲ್ಲ ಎಂದು ಆರೋಪಿಸಿದರು.
ದೇಶದೆಲ್ಲೆಡೆ ಬಿಜೆಪಿ ನಾಯಕರು ಚುನಾವಣಾ ಪ್ರಚಾರ ಕಾರ್ಯಕ್ಕೆ ಹೋದರೆ ಜಾಹೀರಾತುಗಳು ರಾಜಾಜಿಸುತ್ತಿವೆ. ಒಂದೇ ಸಭೆಗೆ ಐದಾರು ವಿಮಾನಗಳು ಹೋಗುತ್ತವೆ. ಇದನ್ನು ನೋಡಿದ್ರೆ ಎಷ್ಟು ಹಣ ಖರ್ಚು ಆಗಿದೆ ಎನ್ನೋದು ಗೊತ್ತಾಗುತ್ತದೆ. ಅವರ ಖರ್ಚನ್ನು ನೋಡಿದರೆ, ವಿಪಕ್ಷಗಳು ಶೇ.10 ರಷ್ಟು ಖರ್ಚು ಮಾಡಲ್ಲ. ನಾವು ಕೋರ್ಟ್ ಗೆ ಮನವಿ ಮಾಡುತ್ತೇವೆ. ರಾಜಕೀಯ ಪಕ್ಷಗಳು ಯಾವುದೇ ತೆರಿಗೆ ನೀಡೋದಿಲ್ಲ. ಆದರೆ ಕಾಂಗ್ರೆಸ್ ಗೆ ಮಾತ್ರ ಐಟಿ ಅದನ್ನ ಅನ್ವಯ ಮಾಡುತ್ತಿದೆ. ಬಿಜೆಪಿ ಸಹ ಯಾವುದೇ ತೆರಿಗೆ ನೀಡಿಲ್ಲ. ಹಾಗಾಗಿ ಈ ವಿಚಾರವನ್ನ ಸುಪ್ರಿಂಕೋರ್ಟ್ ಗಂಭಿರವಾಗಿ ಪರಿಗಣಿಸಬೇಕು. ಆ ಮೂಲಕ ನಿಷ್ಪಕ್ಷಪಾತವಾಗಿ ಚುನಾವಣೆ ಮಾಡಲು ಅವಕಾಶ ಮಾಡಿಕೊಡಬೇಕು. ಪಾರದರ್ಶಕ ಚುನಾವಣೆ ನಡೆಯಬೇಕಾದ್ರೆ ಕಾಂಗ್ರೆಸ್ ಪಕ್ಷದ ಖಾತೆಗಳಲ್ಲಿನ ಹಣ ಬಳಕೆ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ನಮ್ಮ ಖಾತೆಯಲ್ಲಿನ ಹಣ ಫ್ರೀಜ್ ಮಾಡಿ, ಕಾಂಗ್ರೆಸ್ ಕುಗ್ಗಿಸಲು ಯತ್ನಿಸುತ್ತಿದೆ : ಸೋನಿಯಾ ಗಾಂಧಿ ಆರೋಪ
ಕಾಂಗ್ರೆಸ್ ನಾಯಕ ಅಜೆಯ್ ಮಾಕೇನ್ ಮಾತನಾಡಿ, ಸೀತರಾಮನ್ ಕೇಸರಿ ಸಮಯದ ನೋಟಿಸ್ ಈಗ ನೀಡಲಾಗುತ್ತಿದೆ. ಹೀಗೆಯೇ ಆದರೆ ಗಾಂಧಿ ಕಾಲದ ವಿಚಾರದಲ್ಲಿ ನೋಟಿಸ್ ನೀಡಬಹುದು. 30-40 ವರ್ಷಗಳ ಹಿಂದಿನ ವಿಷಯಗಳಿಗೆ ನೋಟಿಸ್ ನೀಡಲಾಗುತ್ತದೆ. ಅದು ಚುನಾವಣೆ ಸಂದರ್ಭದಲ್ಲಿ ನೋಟಿಸ್ ನೀಡಿ ಅಕೌಂಟ್ ಫ್ರೀಜ್ ಮಾಡಲಾಗಿದೆ. ಯಾವ ಪಕ್ಷವೂ ಆದಾಯ ತೆರಿಗೆ ಕಟ್ಟುವುದಿಲ್ಲ. ಆದರೆ ಕಾಂಗ್ರೆಸ್‌ಗೆ ಮಾತ್ರ ಯಾಕೆ ನೋಟಿಸ್ ನೀಡಲಾಗುತ್ತಿದೆ. 14.40 ಲಕ್ಷ ರೂ.ತೆರಿಗೆ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಕಾಂಗ್ರೆಸ್ ಮೇಲೆ 210 ಕೋಟಿ ರೂ. ದಂಡ ಹಾಕಿದ್ದಾರೆ. ಇದು ಯಾವ ರೀತಿಯ ಪ್ರಜಾಪ್ರಭುತ್ವ ಎಂದು ವಾಗ್ದಾಳಿ ನಡೆಸಿದರು.