ಪೂರ್ಣಗೊಳ್ಳದ ಶ್ರೀರಾಮಮಂದಿರ ಉದ್ಘಾಟನೆ ಸರಿಯಲ್ಲ: ವಿ.ಎಸ್.ಉಗ್ರಪ್ಪ

By Kannadaprabha NewsFirst Published Jan 14, 2024, 10:23 PM IST
Highlights

ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳ ಸ್ವಾಮೀಜಿಗಳಲ್ಲಿ ಇಬ್ಬರು ಸ್ವಾಮೀಜಿಗಳು ಹಿಂದು ಧರ್ಮದ ಪ್ರಕಾರ ದೇವಸ್ಥಾನದ ಕಟ್ಟಡದ ಕಾರ್ಯ ಪೂರ್ಣಗೊಳ್ಳದೆ ಉದ್ಘಾಟಿಸಬಾರದು ಎಂದು ಹೇಳಿದ್ದಾರೆ. 
 

ಬಳ್ಳಾರಿ (ಜ.14): ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳ ಸ್ವಾಮೀಜಿಗಳಲ್ಲಿ ಇಬ್ಬರು ಸ್ವಾಮೀಜಿಗಳು ಹಿಂದು ಧರ್ಮದ ಪ್ರಕಾರ ದೇವಸ್ಥಾನದ ಕಟ್ಟಡದ ಕಾರ್ಯ ಪೂರ್ಣಗೊಳ್ಳದೆ ಉದ್ಘಾಟಿಸಬಾರದು ಎಂದು ಹೇಳಿದ್ದಾರೆ. ಆದರೆ, ಬಿಜೆಪಿಗರು ಹಿಂದುತ್ವ, ರಾಮನ ಆದರ್ಶದ ವಿರುದ್ಧ ಹೋಗುತ್ತಿದ್ದಾರೆ. ಅಧಿಕಾರಕ್ಕಾಗಿ ರಾಮಜಪ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಪೂರ್ಣಗೊಳ್ಳದೆ ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ. ಇದು ಬಿಜೆಪಿಗರಿಂದ ಆಗುತ್ತಿರುವ ಹಿಂದು ವಿರೋಧಿ ನೀತಿ. ಜಾತಿ, ಧರ್ಮದ ಹೆಸರಿನಲ್ಲಿ ವೈಭವೀಕರಣ ಸರಿಯಲ್ಲ. ಬಿಜೆಪಿಗರಿಗೆ ರಾವಣನ ಪ್ರವೃತ್ತಿ ಇದೆ. ಅಧಿಕಾರ ಮೋಹದಿಂದಕ್ಕಾಗಿ ರಾಮಮಂದಿರ ಉದ್ಘಾಟಿಸುತ್ತಿದ್ದಾರೆ ಎಂದು ದೂರಿದರು.

ಶ್ರೀರಾಮಚಂದ್ರ ಕೊಟ್ಟ ಮಾತನ್ನು ತಪ್ಪುತ್ತಿರಲಿಲ್ಲ. ಅದೇ ರೀತಿ ಕಾಂಗ್ರೆಸ್ ಸಹ ಮಾತು ತಪ್ಪದೆ ನಡೆದುಕೊಳ್ಳುವ ಪಕ್ಷವಾಗಿದೆ. ಚುನಾವಣೆ ಮುನ್ನ ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ, ಜನಪರ ಆಡಳಿತ ನೀಡುತ್ತಿದ್ದೇವೆ. ಆದರೆ, ಬಿಜೆಪಿಯವರು ಬರೀ ಸುಳ್ಳುಗಳನ್ನು ಹೇಳಿಕೊಂಡೇ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪರಿಹಾರ ಕೈಗೊಳ್ಳದಿದ್ದರೆ ಶಿಸ್ತು ಕ್ರಮ: ಸಂಸದ ಡಿ.ಕೆ.ಸುರೇಶ್

ರಾಜ್ಯದಲ್ಲಿ ಬರ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಬರ ಅಧ್ಯಯನ ತಂಡ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಆದರೆ, ಈವರೆಗೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಬಡವರ ಪರ ಯಾವುದೇ ನಿಲುವುಗಳಿಲ್ಲ. ಬರೀ ಅಧಿಕಾರಕ್ಕಾಗಿ ಬಿಜೆಪಿ ಕಸರತ್ತು ನಡೆಸುತ್ತದೆಯೇ ವಿನಾ, ದೀನ, ದಲಿತರು, ಅಶಕ್ತರ ಪರವಾಗಿ ನಿಲ್ಲುವುದಿಲ್ಲ. ಕಾಂಗ್ರೆಸ್ ಮಾತ್ರ ಜನಮಖಿಯಾಗಿ ಯೋಚಿಸಿ, ಕೆಲಸ ಮಾಡುತ್ತದೆ ಎಂದರು. ಪಕ್ಷದ ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.

click me!