ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಜಿಲ್ಲೆ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ಖಚಿತಗೊಂಡಿದ್ದು, ಮತ್ತೊಬ್ಬ ಹಾಲಿ ಶಾಸಕರನ್ನು ಪಟ್ಟಿಯಲ್ಲಿ ಪರಿಗಣಿಸದೇ ಇರುವುದು ಅವರ ಕಾರ್ಯಕರ್ತರು, ಬೆಂಬಲಿಗರಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ರಾಮಕೃಷ್ಣ ದಾಸರಿ
ರಾಯಚೂರು ಮಾ.26) : ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಜಿಲ್ಲೆ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ಖಚಿತಗೊಂಡಿದ್ದು, ಮತ್ತೊಬ್ಬ ಹಾಲಿ ಶಾಸಕರನ್ನು ಪಟ್ಟಿಯಲ್ಲಿ ಪರಿಗಣಿಸದೇ ಇರುವುದು ಅವರ ಕಾರ್ಯಕರ್ತರು, ಬೆಂಬಲಿಗರಲ್ಲಿ ಅಸಮಾಧಾನವನ್ನುಂಟು ಮಾಡಿದೆ.
ಜಿಲ್ಲೆ ಏಳು ವಿಧಾನಸಭಾ ಕ್ಷೇತ್ರ(Raichur assembly constitueny)ಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಶಾಸಕ(Congress MLAs)ರಿದ್ದಾರೆ. ಅವರಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್(Basanagowda daddal), ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ(R Basanagowda turvihal) ಅವರಿಗೆ ಪಕ್ಷ ಟಿಕೆಟ್ ಘೋಷಿಸಿದ್ದು, ಲಿಂಗಸುಗೂರು ಶಾಸಕ ಡಿ.ಎಸ್. ಹುಲಗೇರಿ(DS huageri) ಅವರ ಹೆಸರನ್ನು ಕೈಬಿಟ್ಟಿರುವುದು ಹಲವಾರು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್‌ನ ಬಸನಗೌಡರಿಗೆ ತಿರುಗೇಟು ನೀಡುವುದೇ ಬಿಜೆಪಿ?: ರೆಡ್ಡಿ ಪಕ್ಷದಿಂದ ಎದುರಾಗಿದೆ ಮತ ವಿಭಜನೆಯ ಭೀತಿ
ನಡೆಯದ ಷಡ್ಯಂತ್ರ:
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರಿಗೆ ಟಿಕೆಟ್ ತಪ್ಪಿಸಲು ಖುದ್ದು ಕಾಂಗ್ರೆಸ್‌ನ ನಾಯಕರ ಸಾಕಷ್ಟುಪ್ರಯತ್ನಿಸಿದರು ಸಹ ಅವರ ಷಡ್ಯಂತ್ರವು ಫಲಿಸಲಿಲ್ಲ. ಬಸನಗೌಡ ದದ್ದಲ್ ಸ್ಥಳೀಯರಲ್ಲ, ಬಿಜೆಪಿ ಕದತಟ್ಟಿಬಂದಿದ್ದಾರೆ ಎಂದು ಕೈ ಮುಖಂಡರೇ ಆರೋಪಿಸಿದ್ದರು. ಅಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಹಾಲಿ ಶಾಸಕರಿದ್ದರು ಸಹ ತಾವು ಸೇವಾಕಾಂಕ್ಷಿ ಎಂದು ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದ ಕೆ. ಚಂದ್ರಶೇಖರ ನಾಯಕ ಇಡಪನೂರು ಅವರ ಇಂಗಿತವನ್ನು ತಳ್ಳಿ ಹಾಕಿರುವ ಪಕ್ಷ ಕೊನೆಗೆ ಹಾಲಿ ಶಾಸಕ ದದ್ದಲ್ ಅವರಿಗೆ ಟಿಕೆಟ್ ಘೋಷಿಸಿದೆ.
ಆಯ್ಕೆ ಸವಾಲು:
ಮೊದಲ ಪಟ್ಟಿಯಲ್ಲಿ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸವಾಲು ಸವಾಲಾಗಿಯೇ ಉಳಿದಿದೆ. ರಾಯಚೂರು ನಗರ ಕ್ಷೇತ್ರದಲ್ಲಿ 17 ಜನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮಾನ್ವಿ, ಲಿಂಗಸುಗೂರಿನಲ್ಲಿ ತಲಾ 4 ಜನರು ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಸಿಂಧನೂರಿನಲ್ಲಿ ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ ಹಾಗೂ ಕೆ. ಕರಿಯಪ್ಪ ಅವರ ನಡುವೆ ಟಿಕೆಟ್ ಪೈಪೋಟಿ ಸಾಗಿದೆ. ಲಿಂಗಸುಗೂರಿನಲ್ಲಿ ಹಾಲಿ ಶಾಸಕ ಡಿ.ಎಸ್. ಹುಲಗೇರಿ ಅವರಿಗೆ ಟಿಕೆಟ್ ಅನುಮಾನ ಎನ್ನುವ ಕಾರ್ಮೋಡವು ಕವಿದಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿದ ಐದು ಕ್ಷೇತ್ರಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಯ ಸವಾಲಾಗಿ ಮಾರ್ಪಟ್ಟಿದೆ.
ರಾಯಚೂರಿನ ಸಿಂಧನೂರು ಕ್ಷೇತ್ರದಲ್ಲಿ ಅರ್ಥವಾಗದ ರಾಜಕಾರಣ, ಕೆಆರ್‌ಪಿಪಿ ಟಫ್ ಫೈಟ್!
ಕ್ಷೇತ್ರದಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಿ, ಷಡ್ಯಂತ್ರ ರೂಪಿಸಿ ಟಿಕೆಟ್ ಕೈ ತಪ್ಪಿಸಲು ಹಲವಾರು ಪ್ರಯತ್ನಗಳನ್ನು ನಡೆಸಿದರು ಸಹ ಕಾಂಗ್ರೆಸ್ ಹೈಕಮಾಂಡ್ ಯಾವುದಕ್ಕೂ ಸೊಪ್ಪು ಹಾಕದೇ ನನ್ನ ಕೆಲಸ, ಸಂಘಟನೆಯನ್ನು ಗುರುತಿಸಿ ಟಿಕೆಟ್ ಘೋಷಿಸಿದೆ. ಅದೇ ವಿಶ್ವಾಸದೊಂದಿಗೆ ಚುನಾವಣೆಯನ್ನು ಎದುರಿಸಲಾಗುವುದು
-ಬಸನಗೌಡ ದದ್ದಲ್, ಗ್ರಾಮೀಣ ಶಾಸಕರು ರಾಯಚೂರು
ಸೇವಾಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಸಂಘಟನೆ ನಡೆಸಿ, ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದೆ, ಆದರೆ ಪಕ್ಷ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಿದೆ. ಇಷ್ಟರಲ್ಲಿಯೇ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು
-ಕೆ. ಚಂದ್ರಶೇಖರ ನಾಯಕ ಇಡಪನೂರು, ಕಾಂಗ್ರೆಸ್ ಮುಖಂಡ