ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಸಾಗರ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಗೆದ್ದಿದ್ದಾರೆ. ಪಕ್ಷದ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಅವರ ಬೇಡಿಕೆ, ಸ್ಥಳೀಯ ಹಲವು ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಪಕ್ಷದ ಹೈಕಮಾಂಡ್ ಬೇಳೂರಿಗೆ ಟಿಕೆಟ್ ನೀಡಿದೆ. ಇದರಿಂದ ಸಾಗರ ಕ್ಷೇತ್ರದಲ್ಲಿ ರೋಚಕ ಹಣಾಹಣಿ ನಡೆಯುವ ಎಲ್ಲ ಲಕ್ಷಣಗಳು ಕಾಣುತ್ತಿದೆ.
ರಾಜೇಶ ಭಡ್ತಿ
ಸಾಗರ (ಮಾ.26) : ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಸಾಗರ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು(Beluru gopalakrishna) ಗೆದ್ದಿದ್ದಾರೆ. ಪಕ್ಷದ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಅವರ ಬೇಡಿಕೆ, ಸ್ಥಳೀಯ ಹಲವು ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಪಕ್ಷದ ಹೈಕಮಾಂಡ್ ಬೇಳೂರಿಗೆ ಟಿಕೆಟ್ ನೀಡಿದೆ. ಇದರಿಂದ ಸಾಗರ ಕ್ಷೇತ್ರದಲ್ಲಿ ರೋಚಕ ಹಣಾಹಣಿ ನಡೆಯುವ ಎಲ್ಲ ಲಕ್ಷಣಗಳು ಕಾಣುತ್ತಿದೆ.
ಮುಂದಿನ ನಡೆ ಏನು?:
ಚುನಾವಣೆಗೆ ಹಲವು ತಿಂಗಳುಗಳ ಮುಂಚೆಯೇ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಜಿಪಂ ಮಾಜಿ ಸದಸ್ಯರಾದ ಕಲಗೋಡು ರತ್ನಾಕರ ಹಾಗೂ ಹೊನಗೋಡು ರತ್ನಾಕರ ಇವರೆಲ್ಲ ತಾವು ಕಾಂಗ್ರೆಸ್ಸಿನ ಪ್ರಬಲ ಆಕಾಂಕ್ಷಿಗಳು ಎಂದಿದ್ದರು. ಒಮ್ಮೆ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಸ್ಪರ್ಧಿಸದಿದ್ದರೆ ಪಕ್ಷವು ತಮಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಹಕ್ರೆ ಅವರು ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ತಮ್ಮ ಉಮೇದುವಾರಿಕೆ ಇಂಗಿತವನ್ನು ವ್ಯಕ್ತಪಡಿಸಿ, ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈಗ ಹೈಕಮಾಂಡ್ ಬೇಳೂರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಇವರೆಲ್ಲರ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗ: 7ರಲ್ಲಿ 3 ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ
ಕಳೆದ ಒಂದಷ್ಟುದಿನದಿಂದ ಗೋಪಾಲಕೃಷ್ಣ ಬೇಳೂರು ಕಾಂಗ್ರೆಸ್ ಪಕ್ಷದಿಂದ ತಮಗೇ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಕ್ಷೇತ್ರಾದ್ಯಂತ ಸಂಚರಿಸಿ ಜನರೊಂದಿಗೆ ಬೆರೆತು, ತಾನೇ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದರು. ಆದರೆ ಕಳೆದ ಸೋಮವಾರ ಹಿರಿಯರಾದ ಕಾಗೋಡು ತಿಮ್ಮಪ್ಪ, ಡಾ.ರಾಜನಂದಿನಿ, ಪಕ್ಷದ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್, ಕಲಗೋಡು ರತ್ನಾಕರ, ಹೊನಗೋಡು ರತ್ನಾಕರ್, ಮಲ್ಲಿಕಾರ್ಜುನ ಹಕ್ರೆ ಮೊದಲಾದವರ ತಂಡ ಬೆಂಗಳೂರಿಗೆ ತೆರಳಿತ್ತು. ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ ಕಾಗೋಡು ತಿಮ್ಮಪ್ಪನವರು, ಸಾಗರ ಕ್ಷೇತ್ರದಿಂದ ತಮ್ಮ ಪುತ್ರಿ ರಾಜನಂದಿನಿ ಅವರಿಗೇ ಟಿಕೆಟ್ ಕೊಡಿ ಎಂದು ಒತ್ತಾಯಿಸಿದ್ದರು. ಇಲ್ಲದಿದ್ದರೆ ಈ ತಂಡದಲ್ಲಿರುವ ಯಾರಿಗಾದರೂ ಟಿಕೆಟ್ ಕೊಡಿ, ಯಾವುದೇ ಕಾರಣಕ್ಕೂ ಬೇಳೂರಿಗೆ ಟಿಕೆಟ್ ಕೊಡಬೇಡಿ ಎಂದು ಆಗ್ರಹಿಸಿದ್ದರು.
ಈ ಹಿಂದೆ ಬೇಳೂರು ಅವರು ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದ ಕಾಲದಲ್ಲಿ ಕಾಂಗ್ರೆಸ್ಸಿಗರಿಗೆ ಸಾಕಷ್ಟುಕಿರುಕುಳ ಕೊಟ್ಟಿದ್ದಾರೆ. ದೈಹಿಕ ಹಲ್ಲೆ ಮಾಡಿಸಿದ ಉದಾಹರಣೆಗಳೂ ಇವೆ. ಈಗಾಗಲೇ ನಾಲ್ಕು ಬಾರಿ ಪಕ್ಷಾಂತರ ಮಾಡಿದ ದಾಖಲೆಯಿದೆ. ಮುಂದೆ ಇಲ್ಲೇ ಇರುತ್ತಾರೆ ಎನ್ನುವ ಭರವಸೆಯೂ ಇಲ್ಲ. ಒಂದುವೇಳೆ ಕಾಂಗ್ರೆಸ್‌ನಿಂದ ಗೆದ್ದರೂ ಪಕ್ಷಕ್ಕೇ ಮುಳ್ಳಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರಿಗೆ ಟಿಕೆಟ್ ಕೊಡಬೇಡಿ ಎಂದು ವರಿಷ್ಠರಿಗೆ ವಸ್ತುಸ್ಥಿತಿಯನ್ನು ವಿವರಿಸಿದ್ದರು. ಇದೆಲ್ಲವನ್ನೂ ಮೀರಿ ಬೇಳೂರಿಗೆ ಟಿಕೆಟ್ ಕೊಟ್ಟರೆ, ನಾವೆಲ್ಲ ಸೇರಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಕೂಡ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈಗ ಪಕ್ಷವು ಬೇಳೂರಿಗೆ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿರುವುದು ಪಕ್ಷದಲ್ಲಿ ಆಂತರಿಕ ಬೇಗುದಿಗೆ ಕಾರಣವಾಗುವ ಲಕ್ಷಣಗಳು ಕಾಣುತ್ತಿದೆ.
Shivamogga: ನನ್ನೆದುರು ಕಣಕ್ಕಿಳಿಸಲು ಕಾಂಗ್ರೆಸ್ಗೆ ಅಭ್ಯರ್ಥಿಯೇ ಇಲ್ಲ: ಜ್ಞಾನೇಂದ್ರ...
ಏನಾದರೂ ಮಾಡಿ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು ಅಧಿಕಾರ ಪಡೆಯಲೇಬೇಕೆನ್ನುವ ತಮ್ಮ ನಿಲುವಿಗೆ ಬದ್ಧರಾಗಿರುವ ಡಿಕೆಶಿ, ಸಿದ್ದರಾಮಯ್ಯ ಮೊದಲಾದವರು ಇಂಥ ಗಟ್ಟಿತೀರ್ಮಾನಕ್ಕೆ ಅಂಟಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೊತೆಯಲ್ಲಿ ಕಾಂಗ್ರೆಸ್ ಬೇರು ಗಟ್ಟಿಯಾಗಿರುವ ಸಾಗರ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿರುವ ಬೇಳೂರು ಗೆಲ್ಲಬಹುದು ಎನ್ನುವುದು ಹೈ ಕಮಾಂಡ್‌ಗಿರುವ ವಿಶ್ವಾಸ. ಮುಂದೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಘೋಷಣೆ ಮಾಡಿರುವ ಕಾಂಗ್ರೆಸ್ ನಡೆಯಿಂದ ಸಾಗರ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಪಡೆದುಕೊಂಡಿರುವುದಂತೂ ಸತ್ಯ.