ಒಂದೇ ಹಂತದಲ್ಲಿ 73 ಸಾವಿರ ಎಕರೆ ಭೂಮಿ ಭೂಸ್ವಾಧೀನಕ್ಕೆ ಕ್ರಮ, ಮಹದಾಯಿ ಯೋಜನೆ ಒಪ್ಪಿಗೆ ನೀಡುವಂತೆ ಕೇಂದ್ರ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮೇಲೆ ಒತ್ತಡ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸುವರ್ಣ ವಿಧಾನಸಭೆ (ಡಿ.20): ಉತ್ತರ ಕರ್ನಾಟಕ ಭಾಗದ ಮತ್ತಷ್ಟು ಅಭಿವೃದ್ಧಿಗೆ ಡಾ। ಗೋವಿಂದರಾವ್ ನೇತೃತ್ವದ ಸಮಿತಿ ನೀಡಲಿರುವ ವರದಿಯ ಶಿಫಾರಸು ಅನುಷ್ಠಾನ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ ಒಂದೇ ಹಂತದಲ್ಲಿ 73 ಸಾವಿರ ಎಕರೆ ಭೂಮಿ ಭೂಸ್ವಾಧೀನಕ್ಕೆ ಕ್ರಮ, ಮಹದಾಯಿ ಯೋಜನೆ ಒಪ್ಪಿಗೆ ನೀಡುವಂತೆ ಕೇಂದ್ರ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮೇಲೆ ಒತ್ತಡ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ದಿ ಕುರಿತು ನಡೆದ ಚರ್ಚೆಗೆ ಸುದೀರ್ಘವಾಗಿ ಉತ್ತರಿಸಿದ ಅವರು, ಡಾ। ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ಕಳೆದ ಎಂಟು ವರ್ಷಗಳಿಂದ ₹17,850 ಕೋಟಿ ಖರ್ಚು ಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಇದೇ ಸದನದಲ್ಲಿ ತಾವು ಎಂಟು ಭರವಸೆಗಳನ್ನು ನೀಡಿದ್ದೆವು. ನಂಜುಂಡಪ್ಪ ವರದಿಯಲ್ಲಿ ಉತ್ತರ ಕರ್ನಾಟಕ ಭಾಗದ 59 ತಾಲೂಕು ಮತ್ತು ದಕ್ಷಿಣ ಕರ್ನಾಟಕ ಭಾಗದ 55 ತಾಲೂಕುಗಳನ್ನು ಅತ್ಯಂತ ಹಿಂದುಳಿದ ಪ್ರದೇಶಗಳೆಂದು ಗುರುತಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಈ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲು ಹೇಳಿತ್ತು.
undefined
ಸಿ ಮತ್ತು ಡಿ ಭೂಮಿ ಹಕ್ಕುಪತ್ರಕ್ಕಾಗಿ ಮಡಿಕೇರಿಯಲ್ಲಿ ಬೀದಿಗಿಳಿದ ಸಾವಿರಾರು ರೈತರು
ಅದರಂತೆ ಎರಡೂ ಭಾಗದ ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 2007-08 ರಿಂದ 2023-24 ರವರೆಗೆ ಉತ್ತರ ಕರ್ನಾಟಕಕ್ಕೆ ₹35 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ನಂಜುಂಡಪ್ಪ ವರದಿ ಹೇಳಿದ್ದ ₹31 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಈ ಪೈಕಿ ಉತ್ತರ ಕರ್ನಾಟಕದ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಿಗೆ ₹17,850 ಕೋಟಿ (ರೆಗ್ಯುಲರ್ ಅನುದಾನಗಳನ್ನು ಹೊರತುಪಡಿಸಿ) ವರದಿಯ ಅಡಿಯಲ್ಲಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಪ್ರದೇಶಾಭಿವೃದ್ಧಿ ಮಂಡಳಿ: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನ 371(ಜೆ) ಪರಿಚ್ಚೇದದ ಮೂಲಕ ವಿಶೇಷ ಸ್ಥಾನಮಾನ ನೀಡಿದ್ದರಿಂದ ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಸ್ಥಾಪಿಸಿತು. ಈ ಮಂಡಳಿ ಮೂಲಕ 2013-14 ರಿಂದ ಇದುವರೆಗೆ ₹19,878 ಕೋಟಿ ಬಜೆಟ್‌ನಲ್ಲಿ ಒದಗಿಸಲಾಗಿದೆ. ₹13,229 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ಇದುವರೆಗೆ ₹11,500 ಕೋಟಿ ಖರ್ಚು ಮಾಡಲಾಗಿದೆ. ಒಟ್ಟಾರೆ 35,885 ಕಾಮಗಾರಿ ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿ ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ಮಂಡಳಿಗೆ 2024-25ನೇ ಸಾಲಿನ ಆಯವ್ಯಯದಲ್ಲಿ ₹5,000 ಕೋಟಿ ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಈಗಾಗಲೇ ₹3100 ಕೋಟಿಗಳಿಗೂ ಹೆಚ್ಚು ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಆರ್ಥಿಕ ವರ್ಷಾಂತ್ಯದ ವೇಳೆಗೆ ನೀಡಲಾಗುವುದು ಎಂದರು.
ನಾಡಿದ್ದು ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟನೆ: ಕೆ.ಕೆ.ಆರ್.ಡಿ.ಬಿಯಿಂದ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ₹262.20 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದ್ದು, ಡಿ.22ಕ್ಕೆ ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗುವುದು ಮುಖ್ಯಮಂತ್ರಿಗಳು ತಿಳಿಸಿದರು. ಕಲಬುರಗಿಯಲ್ಲಿ ₹221.52 ಕೋಟಿ ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ ₹90 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ₹72 ಕೋಟಿ ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ ₹75 ಕೋಟಿ ಅನುದಾನ ನೀಡಲು ನಿರ್ಧರಿಸಲಾಗಿದೆ.
ನಮ್ಮ ಸರ್ಕಾರ ಬಂದಾಗ ಕಾಂಗ್ರೆಸ್‌ಗೆ ಸಿ.ಟಿ.ರವಿಯವರ ಲೆಕ್ಕವನ್ನು ಚುಪ್ತ ಮಾಡಲಾಗುತ್ತದೆ: ಕೆ.ಜಿ.ಬೋಪಯ್ಯ
ಪ್ರಗತಿಯಲ್ಲಿರುವ ₹162.80 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ಶೀಘ್ರ ಸಾರ್ವಜನಿಕರಿಗೆ ಬಳಕೆಗೆ ಬರಲಿದೆ. ₹30.14 ಕೋಟಿ ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ ಮತ್ತು ₹15.57 ಕೋಟಿ ವೆಚ್ಚದಲ್ಲಿ 30 ಹಾಸಿಗೆ ಸಾಮರ್ಥ್ಯದ ಸುಟ್ಟ ಗಾಯಗಳ ಘಟಕಕ್ಕೆ ಇತ್ತೀಚೆಗೆ ಅಡಿಗಲ್ಲು ಹಾಕಲಾಗಿದೆ. ಒಟ್ಟಾರೆ ಈ ಭಾಗದಲ್ಲಿ ವೈದ್ಯಕೀಯ ಸೇವೆಗಾಗಿ 2013-14 ರಿಂದ 2023-24ರ ವರೆಗೆ ಸುಮಾರು ₹915.50 ಕೋಟಿ ಅನುದಾನ ಒದಗಿಸಿದೆ ಎಂದು ವಿವರಿಸಿದರು. ಕಲ್ಯಾಣ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಇತರೆ ಭಾಗದಲ್ಲಿ ಶೇ.8ರಷ್ಟು ಸ್ಥಾನಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ 2013-14 ರಿಂದ 2023-24ರ ವರೆಗೆ ₹4,352 ಕೋಟಿ ಖರ್ಚು ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.