ವಾಗ್ದಾನ ಪೂರೈಸದಿದ್ದರೆ ಜೆಡಿಎಸ್‌ ಪಕ್ಷ ವಿಸರ್ಜನೆ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published Oct 9, 2022, 11:40 AM IST
Highlights

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ವತಂತ್ರ ಅಧಿಕಾರ ನೀಡಿದರೆ ಮುಂದಿನ ಐದು ವರ್ಷದ ಅವಧಿಯಲ್ಲಿ ಪ್ರಸ್ತುತ ಇರುವ ಸಮಸ್ಯೆಗಳಿಗೆ ಪರಿಹಾರ, ಉತ್ತಮ ಶಿಕ್ಷಣ, ಆರೋಗ್ಯ, ಬಡವರಿಗೆ ಮತ್ತು ದೀನ ದಲಿತರಿಗೆ ಸ್ವಾವಲಂಬಿ ಬದುಕು ಕಲ್ಪಿಸಲಾಗುವುದು. 

ಬೆಂಗಳೂರು (ಅ.09): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ವತಂತ್ರ ಅಧಿಕಾರ ನೀಡಿದರೆ ಮುಂದಿನ ಐದು ವರ್ಷದ ಅವಧಿಯಲ್ಲಿ ಪ್ರಸ್ತುತ ಇರುವ ಸಮಸ್ಯೆಗಳಿಗೆ ಪರಿಹಾರ, ಉತ್ತಮ ಶಿಕ್ಷಣ, ಆರೋಗ್ಯ, ಬಡವರಿಗೆ ಮತ್ತು ದೀನ ದಲಿತರಿಗೆ ಸ್ವಾವಲಂಬಿ ಬದುಕು ಕಲ್ಪಿಸಲಾಗುವುದು. ಒಂದು ವೇಳೆ ನೀಡಿರುವ ವಾಗ್ದಾನ ಪೂರೈಸದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಪಥ ಮಾಡಿದ್ದಾರೆ.

ಶನಿವಾರ ಬಸವನಗುಡಿ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜನತಾಮಿತ್ರ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ನೀಡಿ ಅವುಗಳು ನಡೆಸಿರುವ ಕೆಟ್ಟಆಡಳಿತವನ್ನು ಗಮನಿಸಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸಲು ಜೆಡಿಎಸ್‌ ಮೇಲೆ ವಿಶ್ವಾಸ ಇಟ್ಟು ಜನತೆ ಆಶೀರ್ವದಿಸಿದರೆ ಮುಂದಿನ ಐದು ವರ್ಷದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಅನಾಹುತಗಳನ್ನು ಸರಿಪಡಿಸುತ್ತೇವೆ. ಸ್ವಂತ ಸೂರು, ಪ್ರತಿ ಕುಟುಂಬಕ್ಕೂ ಉದ್ಯೋಗ ಕಲ್ಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ: ರಾಜ್ಯ ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ, ಎಚ್‌ಡಿಕೆ

ಜೆಡಿಎಸ್‌ಗೆ ಅಧಿಕಾರ ನೀಡುವಂತೆ ಕೇಳುತ್ತಿರುವುದು 40 ಪರ್ಸೆಂಟ್‌ಗಾಗಿ ಅಲ್ಲ, ಜನತೆ ನೆಮ್ಮದಿಯ ಬದುಕು ನೀಡಲು ಮತ್ತು ಕನ್ನಡಿಗರ ಸ್ವಾಭಿಮಾನಿ ಎತ್ತಿಹಿಡಿಯಲು ಅಧಿಕಾರ ನೀಡುವಂತೆ ಮನವಿ ಮಾಡುತ್ತಿದ್ದೇನೆ. ಮಧ್ಯಪ್ರದೇಶದಲ್ಲಿನ ಚಂಬಲ್‌ ಕಣಿವೆ ದರೋಡೆಕೋರರು ವಿಧಾನಸೌಧದಲ್ಲಿ ಸೇರಿದ್ದಾರೆ. ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಓಡಿಸಬೇಕು ಎಂದರು. ಜಾತಿ ಜಾತಿಗಳ ನಡುವೆ ಸಂಘರ್ಷ ಮೂಡಿಸಲು ಎರಡು ರಾಷ್ಟ್ರೀಯ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ಗುಜರಾತ್‌ನ ಬಂದರ್‌ನಿಂದ ಡ್ರಗ್ಸ್‌ ಪೂರೈಕೆಯಾಗುತ್ತಿದೆ. ಡ್ರಗ್ಸ್‌ ಪೂರೈಕೆ ಮಾಡಿ ಯುವಜನಾಂಗವನ್ನು ತಪ್ಪು ಹಾದಿಗೆ ತಳ್ಳಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ರಾಜಕೀಯ ತೆವಲಿಗಾಗಿ ಇದೆಲ್ಲಾ ಮಾಡುತ್ತಿವೆ ಎಂದು ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಭ್ರಷ್ಟರಹಿತ ಸರ್ಕಾರ ನೀಡಲು ಹೋರಾಟ ನಡೆಸಲಾಗಿದೆ. ಈ ಹಿಂದೆ ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಲಾಗಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಆಡಳಿತದಲ್ಲಿ ಬೆಂಗಳೂರಿಗೆ ಮೊದಲ ಬಾರಿಗೆ ಸಿರ್ಸಿ ಮೇಲ್ಸೇತುವೆಯನ್ನು ನೀಡಲಾಯಿತು. ಕಾವೇರಿ ನದಿ ನೀರು ಪಡೆಯಲು ಕೇಂದ್ರ ಮುಂದೆ ಅರ್ಜಿ ಹಾಕಿದರೆ, ತಮಿಳುನಾಡಿನ ಒತ್ತಾಯಕ್ಕೆ ಮಣಿದ ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಆದರೆ, ದೇವೇಗೌಡ ಅವರು ಪ್ರಧಾನಿಯಾದ ಬಳಿಕ ಬೆಂಗಳೂರಿಗೆ ಕುಡಿಯುವ ನೀರು ನೀಡಿದರು. 90 ಎಕರೆ ರಕ್ಷಣಾ ಇಲಾಖೆಯ ಜಾಗವನ್ನು ಬೆಂಗಳೂರಿನ ಅಭಿವೃದ್ಧಿಗೆ ಕೊಡಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ನಾಗರಿಕರ ಅನುಕೂಲಕ್ಕಾಗಿ ಮೆಟ್ರೋ ಯೊಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದು ಜೆಡಿಎಸ್‌ ಆಡಳಿತದವಧಿಯಲ್ಲಿ ನೀಡಿದ ಯೋಜನೆಗಳ ಕುರಿತು ಮಾಹಿತಿ ಒದಗಿಸಿದರು.

ಮೀಸಲು, ಒಳಮೀಸಲು ಬಗ್ಗೆ ಶೀಘ್ರ ನಿರ್ಧರಿಸಿ: ಎಚ್‌ಡಿಕೆ

ದೇವೇಗೌಡ ಅವರು ಕನ್ನಡಿಗರಿಗೆ ಸ್ವಾಭಿಮಾನ ತಂದುಕೊಟ್ಟವರು. ಅವರು ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಸಮಾವೇಶಕ್ಕೆ ಬಂದಿದ್ದು, ಈ ಮೂಲಕ ಹೋರಾಟಕ್ಕೆ ಸ್ಪೂರ್ತಿ ತಂದುಕೊಟ್ಟಿದ್ದಾರೆ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಅಪೇಕ್ಷೆ. ಅದಕ್ಕಾಗಿ ಜನತಾ ಜಲಧಾರೆ, ಜನತಾ ಮಿತ್ರ, ಪಂಚರತ್ನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಸಮಾವೇಶದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ, ಶಾಸಕ ಅನ್ನದಾನಿ ಸೇರಿದಂತೆ ಮಾಜಿ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.

click me!