ನನ್ನ ಕಣ್ಮುಂದೆ ಜೆಡಿಎಸ್‌ಗೆ ಮತ್ತೆ ಅಧಿಕಾರ: ದೇವೇಗೌಡ

By Kannadaprabha NewsFirst Published Oct 9, 2022, 11:21 AM IST
Highlights

ನನ್ನ ಕಣ್ಮುಂದೆ ಜೆಡಿಎಸ್‌ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಸತ್ಯ. ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯದಲ್ಲಿ ಪಕ್ಷ ಉಳಿಯುವುದರ ಜತೆಗೆ ಬೆಳೆಯಲಿದೆ. ಯಾರೂ ಏನು ಮಾಡಲಾರರು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ಅ.09): ನನ್ನ ಕಣ್ಮುಂದೆ ಜೆಡಿಎಸ್‌ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಸತ್ಯ. ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯದಲ್ಲಿ ಪಕ್ಷ ಉಳಿಯುವುದರ ಜತೆಗೆ ಬೆಳೆಯಲಿದೆ. ಯಾರೂ ಏನು ಮಾಡಲಾರರು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತೀಕ್ಷ್ಣವಾಗಿ ಹೇಳಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದ ದೇವೇಗೌಡ ಅವರು ಶನಿವಾರ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪಕ್ಷದ ‘ಜನತಾ ಮಿತ್ರ’ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. 

ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಕೊನೆಯವರೆಗೂ ರಾಜ್ಯದ ನೆಲ, ಜಲದ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಪಕ್ಷವನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು. ಕುಮಾರಸ್ವಾಮಿ ಅವರು ಪಕ್ಷವನ್ನು ಉಳಿಸಲು 10 ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರ ಶ್ರಮ ಏನೆಂಬುದು ನನಗೆ ಗೊತ್ತು. ಅದರ ಹಿಂದಿನ ವಿಚಾರಗಳನ್ನು ಮಾತನಾಡಲು ನಾನು ಇಷ್ಟಪಡುವುದಿಲ್ಲ. ನನ್ನ ಆರೋಗ್ಯ ಇನ್ನು ಸ್ವಲ್ಪ ಚೇತರಿಸಿಕೊಳ್ಳಬೇಕು. ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಿದ್ದೇನೆ. 

ಚಿತ್ರದುರ್ಗ: ದೇವೇಗೌಡರ ಆರೋಗ್ಯ ವಿಚಾರಿಸಿದ ಶಿವಮೂರ್ತಿ ಶಿವಾಚಾರ್ಯ ಶ್ರೀ

ಇದೇ ತಿಂಗಳು 18ರಂದು ಪಕ್ಷದ ಕಾರ್ಯಕಾರಿ ಸಭೆ ಇದ್ದು, ಅದರಲ್ಲಿ ಭಾಗಿಯಾಗುತ್ತೇನೆ. ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ. ಅಲ್ಲದೇ, ಮಾತುಕೊಟ್ಟಮೇಲೆ ಅದನ್ನು ಕಾರ್ಯಗತ ಮಾಡಲೇಬೇಕು. ಅದಕ್ಕೆ ನಾವು ಬದ್ಧವಾಗಿರುತ್ತೇವೆ. ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ ಎಂದು ಹೇಳಿರಲಿಲ್ಲ. ಆದರೂ ನಮ್ಮ ಸರ್ಕಾರ ಅದನ್ನು ಮಾಡಿದೆ. ಅಲ್ಲದೇ, ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದು, ರೆಸಿಡೆನ್ಸಿ ಶಾಲೆ ನೀಡಿದವರು ಯಾರು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಐದು ರೆಸಿಡೆನ್ಸಿ ಶಾಲೆ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

ನಾನು ಆರೋಗ್ಯದಿಂದ ಇದ್ದೇನೆ, ಕೆಲ ದಿನ ನನ್ನನ್ನು ಯಾರೂ ಭೇಟಿ ಮಾಡಬೇಡಿ: ದೇವೇಗೌಡ

ರಾಜಕಾರಣದಲ್ಲಿ ಪ್ರತಿ ಹಂತದಲ್ಲಿಯೂ ಹೋರಾಟ ಮಾಡಿದ್ದೇನೆ. ಮುಖ್ಯಮಂತ್ರಿಯಾಗಬೇಕಾದರೂ ಹೋರಾಟ ಮಾಡಬೇಕಾಯಿತು. 90ರ ದಶಕದಲ್ಲಿ ಪಕ್ಷದಿಂದ ಹೊರಗೆ ಬಂದ ಮೇಳೆ ಏಕಾಂಗಿ ಹೋರಾಟ ನಡೆಸಿ ಸನ್ಮಿತ್ರರ ಜತೆ ಪಕ್ಷವನ್ನು ಕಟ್ಟಿದ್ದೇನೆ. ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಿ ಪಕ್ಷಕ್ಕೆ 16 ಲೋಕಸಭಾ ಸ್ಥಾನ ಬಂತು. ಅಷ್ಟುಸ್ಥಾನಗಳಿಸುವುದು ಅಷ್ಟುಸುಲಭವಾಗಿರಲಿಲ್ಲ ಎಂದ ಹೇಳಿದ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಕೆಲವರು ಒಂದೊಂದು ರೀತಿಯ ಹೇಳಿಕೆ ನೀಡಿದರು. ನನ್ನನ್ನು ತೋರಿಸಬೇಕು ಎಂಬ ಕಾರಣಕ್ಕಾಗಿ ಸಮಾವೇಶ ಕರೆಸಲಾಗಿದೆ ಎಂಬ ಭಾವನೆ ಬರಬಾರದು. ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

click me!