ಸಿದ್ದರಾಮಯ್ಯ ಕೆಳಗಿಳಿಸಿದ್ರೆ 90 ಶಾಸಕರ ರಾಜೀನಾಮೆ: ಶೋಷಿತ ಒಕ್ಕೂಟ

Kannadaprabha News   | Kannada Prabha
Published : Nov 28, 2025, 05:29 AM IST
Siddaramaiah

ಸಾರಾಂಶ

ಕಾಂಗ್ರೆಸ್‌ಗೆ ಶೇ.70ರಷ್ಟು ಅಹಿಂದ ವರ್ಗ ಮತ ನೀಡಿ ಅಧಿಕಾರಕ್ಕೆ ತಂದಿದೆ. ಒಕ್ಕಲಿಗರಲ್ಲಿ ಶೇ.20ರಷ್ಟು ಮಂದಿ ಮಾತ್ರ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ವೋಟು ನೀಡುವುದು ನಾವು, ಮಜಾ ಮಾಡುವುದು ಒಕ್ಕಲಿಗರೇ?’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಟೀಕಾಪ್ರಹಾರ

ಬೆಂಗಳೂರು : ‘ರಾಜ್ಯದಲ್ಲಿ ಕಾಂಗ್ರೆಸ್‌ಗೆ ಶೇ.70ರಷ್ಟು ಅಹಿಂದ ವರ್ಗ ಮತ ನೀಡಿ ಅಧಿಕಾರಕ್ಕೆ ತಂದಿದೆ. ಒಕ್ಕಲಿಗರಲ್ಲಿ ಶೇ.20ರಷ್ಟು ಮಂದಿ ಮಾತ್ರ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ವೋಟು ನೀಡುವುದು ನಾವು, ಮಜಾ ಮಾಡುವುದು ಒಕ್ಕಲಿಗರೇ?’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಟೀಕಾಪ್ರಹಾರ ನಡೆಸಿದ್ದಾರೆ.ಒಕ್ಕಲಿಗರ ಸಂಘದ ಸುದ್ದಿಗೋಷ್ಠಿ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದರೆ ನಾವು ಸುಮ್ಮನಿರಲ್ಲ. ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಮಚಂದ್ರಪ್ಪ ಅವರು, ಕಾಂಗ್ರೆಸ್‌ ಆಂತರಿಕ ವಿಚಾರ ಎಂದು ಸುಮ್ಮನಿದ್ದೆವು. ಆದರೆ ಒಕ್ಕಲಿಗರ ಸಂಘದ ಸುದ್ದಿಗೋಷ್ಠಿ ಬಳಿಕ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜಾತಿ ವಿಚಾರ ತಂದು ಒಕ್ಕಲಿಗರು, ಅಹಿಂದ ವರ್ಗಗಳ ನಡುವೆ ಜನಾಂಗೀಯ ಕಲಹಕ್ಕೆ ಪ್ರಚೋದನೆ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಡಿಸಿಎಂ ಡಿಕೆಶಿ ಅವರ ಶ್ರಮಕ್ಕೆ ಒಕ್ಕಲಿಗರ ಸಂಘದವರು ಕೂಲಿ ಕೇಳುತ್ತಿದ್ದಾರೆ. ಕೂಲಿ ಅಂದರೆ ಏನು? ಅವರಿಗೆ ಅಧ್ಯಕ್ಷ ಹುದ್ದೆ ಕೊಡಲಾಗಿದೆ. ಡಿಕೆಶಿಗೆ ಕೂಲಿ ಕೊಡುವುದಾದರೆ, 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್‌ ಅವರಿಗೂ ಕೂಲಿ ಕೊಡಲಿ ಎಂದರು.

ಡಿಕೆಶಿ ಯಾಕೆ ಜೈಲಿಗೆ ಹೋಗಿದ್ರು?:ಡಿ.ಕೆ.ಶಿವಕುಮಾರ್‌ ಪಕ್ಷ ಅಧಿಕಾರಕ್ಕೆ ತರಲು ಜೈಲಿಗೆ ಹೋಗಿದ್ದರು ಎನ್ನುತ್ತಿದ್ದಾರೆ. ಶಿವಕುಮಾರ್‌ ಯಾವ ಕಾರಣಕ್ಕಾಗಿ ಜೈಲಿಗೆ ಹೋಗಿದ್ದರು ಎಂಬುದು ಜನರಿಗೆ ಗೊತ್ತಿಲ್ಲವೇ? ಇದೇ ಡಿ.ಕೆ.ಶಿವಕುಮಾರ್‌ ಬೆಂಗಳೂರು ಸುತ್ತಮುತ್ತಲಿನ ಎಲ್ಲಾ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಒಕ್ಕಲಿಗರನ್ನು ಮಾಡಿದ್ದಾರೆ. ವೋಟು ಹಾಕಲು ಅಹಿಂದ ವರ್ಗ ಬೇಕು? ಅಧಿಕಾರಕ್ಕಾಗಿ ಮಜಾ ಮಾಡಲು ಒಕ್ಕಲಿಗರು ಬೇಕಾ? ಎಂದು ಕಿಡಿಕಾರಿದರು.

90 ಶಾಸಕರಿಂದ ಸಾಮೂಹಿಕ ರಾಜೀನಾಮೆ:ಸಿದ್ದರಾಮಯ್ಯ ಅವರ ಪರ 80-90 ಮಂದಿ ಎಸ್ಸಿ,ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ಹಾಗೂ ಒಕ್ಕಲಿಗ, ಲಿಂಗಾಯತ ಶಾಸಕರು ಇದ್ದಾರೆ. ಅವರನ್ನು ಹೆದರಿಸಲು ಹೋದರೆ ಅಷ್ಟೂ ಜನ ರಾಜೀನಾಮೆ ನೀಡುತ್ತಾರೆ. ಆಗ ನಿಮ್ಮ ಪಕ್ಷ ಎಲ್ಲಿರುತ್ತದೆ? ಡಿ.ಕೆ. ಶಿವಕುಮಾರ್ ಜಿಲ್ಲೆಯಲ್ಲೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಶಾಸಕರಿದ್ದಾರೆ. ಹೆದರಿಕೊಂಡು ಸುಮ್ಮನೆ ಅವರ ಜತೆಗೆ ಉಳಿದಿದ್ದಾರೆ ಅಷ್ಟೆ. ಉಳಿದಂತೆ ಡಿ.ಕೆ.ಶಿವಕುಮಾರ್‌ ಅವರ ಜತೆಗೆ ಇರುವ ಶಾಸಕರಲ್ಲಿ ದಂಧೆಕೋರರೇ ಹೆಚ್ಚು ಎಂದು ರಾಮಚಂದ್ರಪ್ಪ ಹೇಳಿದರು.ಸಿದ್ದು ಬದಲಾವಣೆ ಒಪ್ಪಲ್ಲ:

ಸಿದ್ದರಾಮಯ್ಯ ಅವರನ್ನು ಬದಲಿಸಲು ನಾವು ಒಪ್ಪುವುದಿಲ್ಲ. ಒಂದು ವೇಳೆ ಅವರನ್ನು ಬದಲಿಸುವುದಾದರೆ ಡಾ.ಜಿ. ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡಲಿ. ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ಎತ್ತರದ ಸ್ಥಾನದಲ್ಲಿದ್ದಾರೆ. ಅವರು ಇಚ್ಛಿಸಿದರೆ ಮೊದಲು ಅವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಮಾವಳ್ಳಿ ಶಂಕರ್‌ ಸೇರಿ ವಿವಿಧ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.--ಸಿದ್ದು ಮಾತು ಕೊಟ್ಟಿದ್ದರೆ

ಬಹಿರಂಗಪಡಿಸಿ: ಸವಾಲು

ಸಿದ್ದರಾಮಯ್ಯ ಮಾತು ತಪ್ಪಿದ್ದಾರೆ ಎಂದು ಅಪಪ್ರಚಾರ ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮಾತುಕೊಟ್ಟಿದ್ದರು ಎಂದು ಹೈಕಮಾಂಡ್‌ ಹೇಳಲಿ. ಕನಿಷ್ಠ ಡಿ.ಕೆ.ಶಿವಕುಮಾರ್‌ ಅವರೇ ಬಾಯ್ಬಿಟ್ಟು ಸಿದ್ದರಾಮಯ್ಯ ಮಾತು ಕೊಟ್ಟಿದ್ದರು ಎಂದು ಹೇಳಲಿ. ಅವರು ಮಾತು ಕೊಟ್ಟಿದ್ದರೆ ನಾವೇ ರಾಜೀನಾಮೆ ಕೊಡಿಸುತ್ತೇವೆ ಎಂದು ಕೆ.ಎಂ.ರಾಮಚಂದ್ರಪ್ಪ ಸವಾಲು ಹಾಕಿದ್ದಾರೆ.

 ಮಾತು ತಪ್ಪಿದವರು ಡಿಕೆಶಿ

ಕೊಟ್ಟ ಮಾತು ತಪ್ಪಿದವರು ಡಿ.ಕೆ.ಶಿವಕುಮಾರ್ ಅವರು. ಚಿತ್ರದುರ್ಗದ ಸಮಾವೇಶದಲ್ಲಿ ಕಾಂತರಾಜು ಆಯೋಗದ ವರದಿ ಜಾರಿಗೆ ಬದ್ಧ ಎಂದು ಹೇಳಿದ್ದರು. ಚುನಾವಣಾ ಪ್ರಣಾಳಿಕೆಯಲ್ಲೂ ಹಾಗೆಯೇ ಹೇಳಲಾಗಿತ್ತು. ಬಳಿಕ ಹೈಕಮಾಂಡ್‌ ಮೇಲೆ ಒತ್ತಡ ತಂದು ವರದಿ ಜಾರಿಯಾಗಲು ಬಿಡಲಿಲ್ಲ. ರಾಜ್ಯದಲ್ಲಿ ಶೇ.70 ರಷ್ಟು ಜನಸಂಖ್ಯೆ ಇರುವ ಸಮುದಾಯಗಳಿಗೆ ಕೊಟ್ಟ ಮಾತು ತಪ್ಪಿದವರು ಡಿ.ಕೆ.ಶಿವಕುಮಾರ್‌ ಎಂದು ಕೆ.ಎಂ.ರಾಮಚಂದ್ರಪ್ಪ ಈ ವೇಳೆ ಗಂಭೀರ ಆರೋಪ ಮಾಡಿದ್ದಾರೆ.

ಆದಿಚುಂನಗಿರಿ ಶ್ರೀಯೇ ಸಿಎಂ ಆಗಲಿ:

ರಾಮಚಂದ್ರಪ್ಪ‘ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರು ಚುನಾವಣೆಯಲ್ಲಿ ಯಾವ ಪಕ್ಷದ ಪರವಾಗಿದ್ದರು ಎಂಬುದನ್ನು ಮೆಲುಕು ಹಾಕಿಕೊಳ್ಳಲಿ. ಧಾರ್ಮಿಕ, ಅಧ್ಯಾತ್ಯ ಬಿಟ್ಟು ರಾಜಕೀಯ ಹೇಳಿಕೆ ನೀಡುವುದಾದರೆ ಅವರೇ ಯೋಗಿ ಆದಿತ್ಯನಾಥ್‌ ರೀತಿ ಮುಖ್ಯಮಂತ್ರಿ ಆಗಲಿ ಎಂದು ರಾಮಚಂದ್ರಪ್ಪ ಒತ್ತಾಯಿಸಿದರು.

ನಿರ್ಮಲಾನಂದ ಸ್ವಾಮೀಜಿ ಅವರ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಗೆ ನಮ್ಮ ಸಹಮತ ಇದೆ. ಕಾಂಗ್ರೆಸ್‌ನ ರಾಜಕೀಯಕ್ಕೆ ಅವರ ಪ್ರವೇಶ ಸಹಿಸಲಾಗುವುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ