
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಾದಾಟದ ಬಣ ರಾಜಕೀಯದ ಚಟುವಟಿಕೆ ಮತ್ತಷ್ಟು ತೀವ್ರಗೊಂಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರ ಶಾಸಕರು, ಸಚಿವರ ಜತೆಗೆ ಗುರುವಾರ ವಿವಿಧ ಮಠಾಧೀಶರು, ಸಮುದಾಯದ ಸಂಘಟನೆಗಳು ಸಹ ಬ್ಯಾಟ್ ಬೀಸಿವೆ.
ಸಿದ್ದರಾಮಯ್ಯ ಅವರ ನಿವಾಸದಲ್ಲಿ ಡಾ। ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ। ಎಚ್.ಸಿ.ಮಹದೇವಪ್ಪ ತಂಡ ತೀವ್ರ ಚರ್ಚೆ ನಡೆಸಿದೆ.
ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಬೆಂಬಲಿಗರಾದ ಕದಲೂರು ಉದಯ್ ಸೇರಿ ಹಲವು ಶಾಸಕರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ। ಯತೀಂದ್ರ ಅವರು, 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಅವರನ್ನು ಕೆಳಗಿಳಿಸುವ ಯಾವುದೇ ಕಾರಣ ಪಕ್ಷದ ಮುಂದಿಲ್ಲ. ಇಂತಹ ಕೂಗೇ ಬರಬಾರದಿತ್ತು ಎಂದು ಬಹಿರಂಗ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಇನ್ನು ಒಕ್ಕಲಿಗರ ಸಂಘದ ಪದಾಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಶೋಷಿತ ವರ್ಗಗಳ ಒಕ್ಕೂಟ, ಕಾಂಗ್ರೆಸ್‌ಗೆ ಓಟು ನೀಡಲು ಅಹಿಂದ ಮತದಾರರು ಬೇಕು. ಮಜಾ ಮಾಡಲು ಒಕ್ಕಲಿಗರು ಬೇಕೇ ಎಂದು ಪ್ರಶ್ನಿಸಿದೆ.
ಶುಕ್ರವಾರ ಕರ್ನಾಟಕ ಪ್ರದೇಶ ಕುರುಬರ ಸಂಘವೂ ಸಭೆ ಕರೆದಿದೆ. ಜತೆಗೆ ಎಐಸಿಸಿ ಹಿಂದುಳಿದ ವರ್ಗಗಳ ಸದಸ್ಯ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರೂ ಸುದ್ದಿಗೋಷ್ಠಿ ಕರೆದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಕುರ್ಚಿ ಹೋರಾಟ ಜಾತಿಗಳ ನಡುವಿನ ಹೋರಾಟವಾಗಿ ಬದಲಾಗುವ ಆತಂಕ ಸೃಷ್ಟಿಯಾಗಿದೆ.
ಮತ್ತೊಂದೆಡೆ ಗುರುವಾರ ದೆಹಲಿಗೆ ತೆರಳುವ ಮೊದಲು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಕೆಲವರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸಿ ಎಲ್ಲವನ್ನೂ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹೈಕಮಾಂಡ್ ಕರೆದರೆ ದೆಹಲಿಗೆ ಹೋಗಲು ಸಿದ್ದವಿದ್ದೇವೆ. ಇಲ್ಲಿಯವರೆಗೆ ತಮ್ಮನ್ನು ಯಾರೂ ಕರೆದಿಲ್ಲ ಎಂದಿದ್ದಾರೆ.ಡಿಕೆಶಿ ಪರ ಸ್ವಾಮೀಜಿಗಳ ಬ್ಯಾಟಿಂಗ್
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಸ್ವಾಮೀಜಿಗಳು ಬ್ಯಾಟಿಂಗ್ ನಡೆಸಿದ್ದಾರೆ.ಮಾನವೀಯತೆ ದೃಷ್ಟಿಯಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು. ಇಲ್ಲದಿದ್ದರೆ ಸರ್ಕಾರ ಪತನವಾಗುತ್ತದೆ ಎಂದು ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರು ಸಿದ್ದರಾಮಯ್ಯ ಅವರ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಹಕಾರ ನೀಡಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಸ್ವಇಚ್ಛೆಯಿಂದ ಸಿಎಂ ಸ್ಥಾನವನ್ನು ತ್ಯಾಗ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರಲ್ಲಿ ಅವರ ಬಗ್ಗೆ ಒಳ್ಳೆಯ ಭಾವನೆ ಮೂಡುವುದಿಲ್ಲ. ಭ್ರಷ್ಟ ಸಿದ್ದರಾಮಯ್ಯ ಎಂದು ಟೀಕಿಸುವ ಸಾಧ್ಯತೆಗಳಿವೆ ಎಂದರು.
ಸಿದ್ದರಾಮಯ್ಯ ಮೊಂಡು ಮನುಷ್ಯ. ಅವರು ಹಠ ಬಿಡಬೇಕು. ಅಧಿಕಾರ ಹಸ್ತಾಂತರಕ್ಕೆ ಒಪ್ಪದಿದ್ದರೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.ನಾನು ಯಾರ ಪರವಾಗಿಯೂ ಇಲ್ಲ, ವಿರೋಧವಾಗಿಯೂ ಇಲ್ಲ. ಸದ್ಯದ ರಾಜಕೀಯ ಸನ್ನಿವೇಶಗಳನ್ನು ನೋಡಿ ನಾನು ಪ್ರಾಮಾಣಿಕತೆಯಿಂದ ಈ ಹೇಳಿಕೆ ನೀಡುತ್ತಿದ್ದೇನೆ ಎಂದರು.
ಇದೇ ವೇಳೆ, ಮಾಧ್ಯಮದ ಜೊತೆ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ, ಪಕ್ಷದ ಹಿರಿಯರು ಕೊಟ್ಟ ಮಾತಿನಂತೆ ಡಿ.ಕೆ.ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಹುದ್ದೆಗೆ ಒಂದು ಅವಕಾಶ ನೀಡಬೇಕು ಎಂಬುದು ಒಕ್ಕಲಿಗ ಸಮುದಾಯದ ಪ್ರಬಲ ಆಶಯ. ಮಾತು ಕೊಟ್ಟಿದ್ದೇ ಆದರೆ, ಮಾತಿನಂತೆ ನಡೆದುಕೊಳ್ಳಬೇಕು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ವಾಕ್ಯವನ್ನು ನಾವು ಪರಿಪಾಲಿಸಿಕೊಂಡು ಬಂದವರು. ಆ ಪಕ್ಷದ ಹಿರಿಯರು ಮಾತು ಕೊಟ್ಟಿದ್ದರೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಬಿಜೆಪಿ ಬೆಂಬಲದಿಂದ ಡಿಕೆಶಿ ಸಿಎಂ:
ಕರ್ಮದಲ್ಲಿ ರವಿ ಮತ್ತು ಮಂಗಳ ಇರುವುದು ಹಾಗೂ ಭಾಗ್ಯದಲ್ಲಿ ಶುಕ್ರನಿರುವುದರಿಂದ ತಮ್ಮವರು (ಕಾಂಗ್ರೆಸ್) ಹಾಗೂ ಹೊರಗಿನ ಮಿತ್ರರ (ಬಿಜೆಪಿ- ಜೆಡಿಎಸ್) ಸಹಕಾರದಿಂದ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಒಂದು ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ ಎಂದು ಕುಂದಗೋಳ ಪಟ್ಟಣದ ಹಿರೇಮಠದ ಶಿತಿಕಂಠೇಶ್ವರ ಶ್ರೀ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಜ.15, 1961ರಂದು ಜನಿಸಿದ ಡಿಕೆಶಿಗೆ ಪ್ರಸ್ತುತ ಶನಿ ಮಹಾದಶಾ ಮತ್ತು ಶುಕ್ರ ಭುಕ್ತಿ ನಡೆಯುತ್ತಿದೆ. ಕುಂಡಲಿಯ ಪ್ರಕಾರ ಕರ್ಮದಲ್ಲಿ ಶನಿ ಇದ್ದು, ಶುಕ್ರ ತೃತಿಯಾಧಿಪತಿ ಉಚ್ಛರಾಶಿಯಲ್ಲಿ ಇರುವುದು ಹಾಗೂ ಭಾಗ್ಯದಲ್ಲಿ ಬುಧ ಮತ್ತು ಶುಕ್ರ ಕರ್ಮಸ್ಥಾನದಲ್ಲಿ ಇರುವುದು ಸಹಕಾರಿಯಾಗಲಿದೆ. ಸೂರ್ಯ ಮಂಗಳಕರ ಆಗಿರುವುದರಿಂದ ಅವರು ಮುಖ್ಯಮಂತ್ರಿಯಾಗುತ್ತಾರೆ. ಆದರೆ, ಅವರ ಕುಂಡಲಿಯಲ್ಲಿ ಗುರು ಕರ್ಕ ರಾಶಿಯಲ್ಲಿ ಶತ್ರು ಸ್ಥಾನದಲ್ಲಿ ಇರುವುದರಿಂದ ತಮ್ಮವರೇ ಇವರಿಗೆ ಶತ್ರುಗಳಾಗಿದ್ದಾರೆ ಎಂದು ವಿಶ್ಲೇಷಿಸಿದರು.
ಡಿಕೆ ಸಿಎಂ ಆಗಲಿ ಎಂದು ದೇವರಿಗೆ 1001 ಈಡುಗಾಯಿ ಒಡೆದು ಪೂಜೆ:ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದು, ಮಂಡ್ಯ ಜಿಲ್ಲೆಯ ಡಿಕೆಶಿ ಅಭಿಮಾನಿಗಳು ಗುರುವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನೂರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಬೇಡಿಕೊಂಡು 1,001 ಈಡುಗಾಯಿ ಒಡೆದರು. ಡಿಕೆಶಿ ಪರವಾಗಿ ಘೋಷಣೆ ಕೂಗಿದರು. ಇದೇ ವೇಳೆ, ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಹಾಡು ಹಾಡಿ, ಡಿಕೆಶಿಗೆ ಸಿಎಂ ಹುದ್ದೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಡಿಕೆಶಿಗೆ ಸಿಎಂ ಹುದ್ದೆ ಬಿಟ್ಟು ಕೊಟ್ಟು ಮಾನವೀಯತೆ ಮೆರೆಯುವಂತೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ‘ಮಾನವನಾಗುವೆಯಾ, ಇಲ್ಲಾ ದಾನವನಾಗುವೆಯಾ, ಮಾನವ ಕುಲಕೆ ನೀ ಮುಳ್ಳಾಗುವೆಯಾ?, ಹೇಳಿ, ಸಿದ್ದರಾಮಯ್ಯ, ಹೇಳಿ’ ಎಂದು ಹಾಡು ಹಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.