
ಕಲಬುರಗಿ(ಆ.18): ‘ಈ ಹಿಂದೆ ನಾನೂ ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಬರೆದ ಪತ್ರ ಬಹಿರಂಗವಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ, ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಸಭೆ ಬಳಿಕ ಈಗ ಎಲ್ಲವೂ ಸರಿ ಹೋಗಿದೆ. ಒಂದೊಮ್ಮೆ ನಮ್ಮನ್ನು ನಿರ್ಲಕ್ಷಿಸಿದರೆ ಸಿಎಂಗೆ ಮತ್ತೆ ಪತ್ರ ಬರೆಯುತ್ತೇವೆ’ ಎಂದು ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೆಟರ್ ಪ್ರಕರಣದ ನಂತರ ಅನೇಕ ಬದಲಾವಣೆಗಳಾಗಿವೆ. ಅವೆಲ್ಲವೂ ಶಾಸಕರ ಅನುಭವಕ್ಕೆ ಬರುತ್ತಿವೆ ಎನ್ನುತ್ತಾ ನಗೆ ಬೀರಿದರು. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ನಾನೂ ಸೇರಿ 10ಕ್ಕೂ ಹೆಚ್ಚು ಶಾಸಕರು ಬರೆದ ಪತ್ರ ಬಹಿರಂಗವಾದ ಬಳಿಕ ನಡೆದ ಬೆಳವಣಿಗೆಗಳ ನಂತರ ಎಲ್ಲವೂ ಸರಿ ಹೋಗಿದೆ. ಮೇಲಾಗಿ, ಎಲ್ಲ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ಕೆಲಸವನ್ನು ಮುಖ್ಯಮಂತ್ರಿಯವರು ಸಭೆಯ ಮೂಲಕ ಮಾಡಿದ್ದಾರೆ. ಇದರಿಂದಾಗಿ ಈಗ ಶಾಸಕರಿಗೆ ಪುನಃ ಬೇಡಿಕೆ ಬಂದಿದೆ ಎಂದರು.
ಸಿದ್ದುಗೆ ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳಿಲ್ಲ: ಶಾಸಕ ಬಿ.ಆರ್.ಪಾಟೀಲ್
ನಿಮ್ಮನ್ನು ಕಾಡುತ್ತಿದ್ದ ಅಸಮಾಧಾನ ಕಡಿಮೆ ಆಗಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನನಗೆ ಯಾವುದೇ ಅಸಮಾಧಾನ ಇಲ್ಲ. ಪತ್ರ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಪಕ್ಷದ ಬೈಲಾದಲ್ಲೇ ಚುನಾಯಿತ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯಲು ಪತ್ರ ಬರೆದು ಆಗ್ರಹಿಸಲು ಅವಕಾಶವಿದೆ. ಈ ಹಕ್ಕನ್ನು ಬಳಸಿಕೊಳ್ಳುವ ಅಧಿಕಾರ ಎಲ್ಲಾ ಶಾಸಕರಿಗೂ ಇದೆ. ಅದನ್ನೇ ನಾವು ಮಾಡಿದ್ದು. ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಪಕ್ಷದಲ್ಲಿ ಇಂತಹ ಚರ್ಚೆ, ಚಿಂತನ-ಮಂಥನ ನಡೆದಷ್ಟುಪಕ್ಷ ಬಲಗೊಳ್ಳುತ್ತದೆ. ಸಿಎಂಗೆ ಪತ್ರ ಬರೆಯುವುದನ್ನು ಯಾರೂ ಅನ್ಯತಾ ಭಾವಿಸಿಲ್ಲ, ಭಾವಿಸಲೂ ಬಾರದು. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅನಿಸಿದಲ್ಲಿ ಮತ್ತೆ ಪತ್ರ ಬರೆಯುವೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.