ಸುಳ್ಳು ಸುದ್ದಿ ಹರಡಿದರೆ ಯಾವುದೇ ಪಕ್ಷದವರಾದರೂ ಬಿಡಬೇಡಿ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Jul 7, 2024, 4:25 AM IST
Highlights

ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರು ಯಾವುದೇ ಪಕ್ಷದ ಅಭಿಮಾನಿಗಳಿದ್ದರೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 
 

ಬೆಂಗಳೂರು (ಜು.07): ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರು ಯಾವುದೇ ಪಕ್ಷದ ಅಭಿಮಾನಿಗಳಿದ್ದರೂ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯ ಪೊಲೀಸ್ ಕಚೇರಿಯಲ್ಲಿ ಶನಿವಾರ ನಡೆದ ಐಪಿಎಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವ್ಯಕ್ತಿಗಳ ತೇಜೋವಧೆ ಮಾಡುತ್ತಿದ್ದಾರೆ. ಹಾಗೆ ಕೋಮು ಸಾಮರಸ್ಯಕ್ಕೂ ಧಕ್ಕೆ ತರುತ್ತಿದ್ದಾರೆ. ಈ ರೀತಿಯ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ಸುಳ್ಳು ಸುದ್ದಿ ಪತ್ತೆ ಘಟಕಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದರು.

ಭೂಗಳ್ಳರ ಜೊತೆ ಶಾಮೀಲು ಸಹಿಸಲ್ಲ: ಭೂಗಳ್ಳರ ಜತೆ ಪೊಲೀಸರು ಶಾಮೀಲಾಗಿದ್ದಾರೆ ಎಂಬ ದೂರುಗಳಿವೆ. ರಿಯಲ್ ಎಸ್ಟೇಟ್‌ ದಂಧೆಯಲ್ಲಿ ಪೊಲೀಸರು ತೊಡಗಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ರಿಯಲ್ ಎಸ್ಟೇಟ್‌ ಹಾವಳಿ ವಿಪರೀತವಾಗಿದೆ. ಜನರಿಗೆ ನ್ಯಾಯ ಸಿಗಬೇಕಿದೆ. ಭೂ ವ್ಯವಹಾರಗಳಲ್ಲಿ ಪೊಲೀಸರು ಸಹಕಾರ ಅಥವಾ ಪಾಲುದಾರಿಕೆ ಹೊಂದಿದ್ದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.

Latest Videos

ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಎಂಡಿಎ ಫ್ಯಾಕ್ಟರಿ ಶುರುವಾಯ್ತು: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ

ಸ್ಥಳೀಯ ಪೊಲೀಸರಿಗೆ ಗೊತ್ತಾಗದಂತೆ ಡ್ರಗ್ಸ್ ದಂಧೆ, ಮಟ್ಕಾ ಹಾಗೂ ಜೂಜಾಟ ಸೇರಿದಂತೆ ಯಾವುದೇ ಕಾನೂನುಬಾಹಿರ ಕೃತ್ಯಗಳು ನಡೆಯಲು ಸಾಧ್ಯವಿಲ್ಲ. ನನ್ನ ವಕೀಲ ವೃತ್ತಿ ಅನುಭವದಿಂದಲೇ ಈ ಮಾತು ಹೇಳುತ್ತಿದ್ದೇನೆ. ಪೊಲೀಸರು ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಅಕ್ರಮ ಕೃತ್ಯಗಳಿಗೆ ಅ‍ವಕಾಶವಿರುವುದಿಲ್ಲ ಎಂದು ತಿಳಿಸಿದರು. ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಕೋಮು ಗಲಭೆಗಳಿಗೆ ಅವಕಾಶ ನೀಡದ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಜನ ಸಂದಣಿ ಹಾಗೂ ನಿರ್ಜನ ಪ್ರದೇಶಗಳಲ್ಲಿ ಗಸ್ತು ವ್ಯವಸ್ಥೆ ಬಲಪಡಿಸುವಂತೆ ಸೂಚಿಸಿದರು.

ಸಮನ್ವಯ ಕೊರತೆ: ಪ್ರಸ್ತುತ ಗುಪ್ತದಳ ಮತ್ತು ಸ್ಥಳೀಯರ ಪೊಲೀಸರ ನಡುವೆ ಸಮನ್ವಯ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಪೊಲೀಸರಿಗೆ ದೂರದೃಷ್ಟಿಯಿರಬೇಕು. ಒಂದು ಮಾಹಿತಿ ಬಂದರೆ ಅದರ ಬಗ್ಗೆ ಫಾಲೋ ಆಪ್ ಕ್ರಮ ವಹಿಸಬೇಕು. ಗುಪ್ತದಳ ಹಾಗೂ ಸ್ಥಳೀಯ ಪೊಲೀಸರು ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಹೇಳಿದರು. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಬಳಿಕ ಮತ್ತೊಬ್ಬ ಯುವತಿಯ ಹತ್ಯೆ ನಡೆಯಿತು. ಈ ಹತ್ಯೆಗೂ ಮುನ್ನವೇ ಆಕೆಗೆ ಪ್ರಾಣಭೀತಿ ಇರುವ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಜರುಗಿಸಲಿಲ್ಲ. 

ಹೀಗಾಗಿ ಯಾವುದೇ ವಿಚಾರದಲ್ಲಿ ನಿಮಗೆ ಸಿಗುವ ಮಾಹಿತಿಯನ್ನು ನಿರ್ಲಕ್ಷಿಸಬೇಡಿ. ಉದಾಸೀನತೆ ತೋರಿದರೆ ಅನಾಹುತಗಳಿಗೆ ಅ‍ವಕಾಶವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್‌.ಆರ್.ಉಮಾಶಂಕರ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್‌ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಸಿಐಡಿ ಡಿಜಿಪಿ ಡಾ.ಎಂ.ಎ,ಸಲೀಂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಡಳಿತಕ್ಕೆ ಚುರುಕು ಮುಟ್ಟಿಸಲು ಜು.8, 9ಕ್ಕೆ ಸಿಎಂ ಸಿದ್ದರಾಮಯ್ಯ ಸಭೆ

ಪ್ರತಿ ದಿನ ಠಾಣೆಗೆ ಭೇಟಿ ಕಡ್ಡಾಯ: ಪ್ರತಿ ದಿನ ಪೊಲೀಸ್ ಆಯುಕ್ತರು, ಐಜಿಪಿಗಳು ಹಾಗೂ ಎಸ್ಪಿಗಳು ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಠಾಣೆಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದರೆ ಜನ ಸ್ನೇಹಿ ಆಡಳಿತ ಅನುಷ್ಠಾನಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

click me!