ಸಾಂಸ್ಕೃತಿಕ ನಗರಿ ಮೈಸೂರಿನ ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ ಎನ್ನುವುದಾದರೆ ಯಾವ ಕಾರಣಕ್ಕಾಗಿ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರು (ಜು.07): ಸಾಂಸ್ಕೃತಿಕ ನಗರಿ ಮೈಸೂರಿನ ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ ಎನ್ನುವುದಾದರೆ ಯಾವ ಕಾರಣಕ್ಕಾಗಿ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮುಡಾದಲ್ಲಿ ಹಗರಣದಲ್ಲಿ ನಡೆದಿಲ್ಲ ಎಂದಿದ್ದಾರೆ. ಹಾಗಾದರೆ, ತನಿಖೆಯನ್ನು ಯಾವ ಕಾರಣಕ್ಕಾಗಿ ನಡೆಸಲಾಗುತ್ತಿದೆ ಎಂಬುದನ್ನು ತಿಳಿಸಬೇಕು.
ಮುಡಾದಿಂದ ಕಡತಗಳನ್ನು ಯಾವ ಕಾರಣಕ್ಕಾಗಿ ಬೆಂಗಳೂರಿಗೆ ತರಲಾಯಿತು ಎಂಬುದನ್ನು ಸಹ ಹೇಳಬೇಕು. ಬಿಡಿಎದಲ್ಲಿ ನಡೆದ ರೀಡೂ ಪ್ರಕರಣ ಮುಚ್ಚಿದಂತೆ ಮುಡಾ ಹಗರಣವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರವು ಪಾರದರ್ಶಕ, ಭ್ರಷ್ಟರಹಿತ ಆಡಳಿತ ನೀಡುತ್ತಿದೆ ಎಂದು ಹೇಳುತ್ತಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರು. ಹಗರಣ ನಡೆದಿದೆ. ಅಲ್ಲದೇ, ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ಪಾರದರ್ಶಕತೆ ಮತ್ತು ಭ್ರಷ್ಟರಹಿತ ಆಡಳಿತವೆಂದರೆ ಇದೇನಾ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿರುವುದರ ಜತೆಗೆ ಜನ ವಿರೋಧಿ ಚಟುವಟಿಕೆ ನಡೆಸುತ್ತಿದ್ದು, ಗ್ಯಾರಂಟಿಗಾಗಿ ಒಂದಲ್ಲ ಒಂದು ರೀತಿಯಲ್ಲಿ ಜನತೆಯ ಮೇಲೆ ತೆರಿಗೆ ಹೊರೆ ಹಾಕುತ್ತಿದೆ. ಎಸ್‌ಸಿ/ಎಸ್‌ಟಿ ವರ್ಗದ ಕಲ್ಯಾಣಕ್ಕೆ ಇಟ್ಟಿದ್ದ ಹಣವನ್ನು ಲೂಟಿ ಮಾಡಿ ಕಾಂಗ್ರೆಸ್ ಸರ್ಕಾರ ಆಯಾ ಜನರ ಬೆನ್ನಿಗೆ ಚೂರಿ ಹಾಕಿದೆ. ಒಂದೆಡೆ ಎಸ್ಸಿ/ಎಸ್ಟಿ ಜನರ ಹಣವನ್ನು ಕಾಂಗ್ರೆಸ್ ಪಕ್ಷದ ರಾಜ್ಯಗಳಿಗೆ ಸಾಗಿಸಿ ಲಪಟಾಯಿಸಿದ್ದಾರೆ. ಇನ್ನೊಂದೆಡೆ 2024-2025ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅಡಿಯಲ್ಲಿ 31,121 ಕೋಟಿ ರು. ವೆಚ್ಚ ಮಾಡುವ ಕ್ರಿಯಾ ಯೋಜನೆ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚು ಹಣವನ್ನು ಎಸ್ಸಿ/ಎಸ್ಟಿ ಜನರಿಗೆ ಅಲ್ಲಿನ ಸರ್ಕಾರಗಳು ಮೀಸಲಿಟ್ಟಿವೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಡಿ ಫ್ಯಾಕ್ಟರಿ ಬಂದ್ ಆಯ್ತು ಎಂಡಿಎ ಫ್ಯಾಕ್ಟರಿ ಶುರುವಾಯ್ತು: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ಆರೋಪ
ಮಧ್ಯಪ್ರದೇಶದಲ್ಲಿ 3.65 ಲಕ್ಷ ಕೋಟಿಯಷ್ಟು ಬಜೆಟ್‌ನಲ್ಲಿ 40 ಸಾವಿರ ಕೋಟಿ ರು. ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ ಮೀಸಲು ಇಡಲಾಗಿದೆ. ಆದರೆ, ಮುಖ್ಯಮಂತ್ರಿಗಳು ತಾವೊಬ್ಬರೆ ಮೀಸಲಿಟ್ಟಿದ್ದಾರೆ ಎಂಬಂತೆ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರವು ಎಲ್ಲಾ ರೀತಿಯಲ್ಲಿಯೂ ಬೆಲೆ ಏರಿಕೆ ಮಾಡುತ್ತಿದೆ. ಗ್ಯಾರಂಟಿಗಳಿಗೆ ಹಣ ಬೇಕು ಎಂದು ಸರ್ಕಾರ ಅನೇಕ ಜನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಹಾಲಿನ ದರ ಏರಿಕೆ ಮಾಡಿದ್ದಾರೆ. ಹಾಲಿನ ಪ್ರಮಾಣ ಹೆಚ್ಚಿಸಿ ದರ ಏರಿಕೆ ಮಾಡಿ ಎಂದು ಜನರು ಕೇಳಿದ್ದರೆ? ಹನಿ ನೀರಾವರಿ ಪದ್ದತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ಇತ್ತು. ಶೇ.48 ರಷ್ಟು ಇದ್ದ ಸಬ್ಸಿಡಿಯನ್ನು ಶೇ.18 ಕ್ಕೆ ಇಳಿಸಿದ್ದಾರೆ. ಇದರಿಂದ ರೈತರಿಗೆ ಎಷ್ಟು ಪ್ರೋತ್ಸಾಹ ಕೊಡಲಾಗುತ್ತಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಹರಿಹಾಯ್ದರು.