ಚುನಾವಣೆ ಘೋಷಣೆಯಾದರೇ ಕಾಂಗ್ರೆಸ್‌ಗೆ ಸೋಲು ಖಚಿತ: ನಿಖಿಲ್ ಕುಮಾರಸ್ವಾಮಿ ಭವಿಷ್ಯ

By Kannadaprabha News  |  First Published Sep 27, 2024, 5:45 PM IST

ನಾಳೆಯೇ ಚುನಾವಣೆ ಘೋಷಣೆಯಾದರೇ 136 ಶಾಸಕರನ್ನು ಪಡೆದ ಕಾಂಗ್ರೆಸ್ ಸೋಲುವುದು ಖಚಿತ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು. 


ವಿಜಯಪುರ (ಸೆ.27): ನಾಳೆಯೇ ಚುನಾವಣೆ ಘೋಷಣೆಯಾದರೇ 136 ಶಾಸಕರನ್ನು ಪಡೆದ ಕಾಂಗ್ರೆಸ್ ಸೋಲುವುದು ಖಚಿತ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು. ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ವತಿಯಿಂದ ನಗರದ ಬಸವೇಶ್ವರ ಭವನದಲ್ಲಿ ಆಯೋಜಿಸಲಾಗಿದ್ದ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ಅಭಿಯಾನದ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಜನ ಕಾಂಗ್ರೆಸ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಶಾಸಕರನ್ನು ಕೊಟ್ಟಿದ್ದರೂ ಈ ಬಾರಿ ಅದು ನೆಲ‌ಕಚ್ಚಲಿದೆ. ಕಾಂಗ್ರೆಸ್ ವೈಫಲ್ಯ, ಭ್ರಷ್ಟಾಚಾರ ಎಲ್ಲವೂ ಜನರ ಎದುರು ಬಯಲಾಗಿದೆ ಎಂದು ಗುಡುಗಿದರು.

ಮುಂಬರುವ ಜಿಪಂ, ತಾಪಂ‌ ಸೇರಿದಂತೆ ಯಾವುದೇ ಸ್ಥಳೀಯ ಚುನಾವಣೆಯಲ್ಲಿ ನಿಮ್ಮ ಜೊತೆ ನಾನು ಇರುತ್ತೇನೆ. ದೇವೇಗೌಡರು ಹಾಗೂ ಕುಮಾರಸ್ವಾಮಿವರು ಗಳಿಸಿದ್ದು ಜನರ ಪ್ರೀತಿ ವಿಶ್ವಾಸ ಎಂಬುವುದನ್ನು ನಿಮ್ಮನ್ನು ನೋಡಿದರೇ ಗೊತ್ತಾಗುತ್ತದೆ ಎಂದರು. ಜಿಲ್ಲಾಮಟ್ಟದಲ್ಲಿ ಉದ್ಯೋಗಗಳು ಸೃಷ್ಟಿಯಾಗಬೇಕಿದೆ. ರೈತರಿಗೆ, ಯುವಕರಿಗೆ ಸಹಾಯ ಆಗಬೇಕಿರುವ ಯೋಜನೆಗಳು ಬೇಕಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಿನಿಂದ ಪ್ರಧಾನಿ‌ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸ ಆಗಿದೆ. ಮುಂಬರುವ ದಿನಗಳಲ್ಲಿ ಜೆಡಿಎಸ್ ಬಿಜೆಪಿ ಒಗ್ಗಟ್ಟಾಗಿ ಚುನಾವಣೆ ಮಾಡುತ್ತೇವೆ ಎಂದು ತಿಳಿಸಿದರು.

Tap to resize

Latest Videos

undefined

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ತನಿಕೆಳ್ಳ ಭರಣಿ: ಈ ಪಾತ್ರದಲ್ಲಿ ಮಿಂಚಲಿದ್ದಾರೆ ರಾಕಿಂಗ್‌ ಸ್ಟಾರ್!

ಪಕ್ಷ ಅಧಿಕಾರಕ್ಕೆ ಬಂದಾಗ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ಕೊಡುವ ಕೆಲಸ ಆಗಬೇಕಾದರೇ ಸದಸ್ಯತ್ವ ಪ್ರಮುಖವಾಗಿದೆ. ಹಾಗಾಗಿ ಎಲ್ಲರೂ ಬೂತ್ ಮಟ್ಟದ ಸಮಿತಿ ರಚಿಸಿಕೊಂಡು ಎರಡು ತಿಂಗಳಲ್ಲಿ ಸದಸ್ಯತ್ವ ಅಭಿಯಾನ ಪೂರ್ಣಗೊಳಿಸಬೇಕು. ಈಗ ನಾನು ಜಿಲ್ಲಾ ಕೇಂದ್ರಗಳಲ್ಲಿ ಸಂಚರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೂ ನಾನು ಭೇಟಿ ನೀಡುತ್ತೇನೆ ಎಂದರು. ಬೂತ್ ಮಟ್ಟದ ಸಮಿತಿ ರಚನೆ ಹಾಗೂ ಸದಸ್ಯತ್ವ ಅಭಿಯಾನ ಎರಡು ತಿಂಗಳಿನಲ್ಲಿ ನಿರೀಕ್ಷೆ ಮಟ್ಟದಲ್ಲಿ ಕೆಲಸ ಆಗದಿದ್ದರೇ, ಪದವಿ ಓದಿರುವ ಹುಡುಗರು ನನ್ನ ಜೊತೆಯಲ್ಲಿದ್ದು ಅವರನ್ನು ಪ್ರತಿ ವಿಧಾನಸಭೆಗೆ 10 ಜನರಂತೆ ಕಳುಹಿಸುತ್ತೇನೆ. ಎರಡು ತಿಂಗಳಲ್ಲಿ ನೀವೆಲ್ಲರೂ ಸೇರಿ ಅತ್ಯಂತ ವೇಗದಲ್ಲಿ ಬೂತ್ ಮಟ್ಟದ ಸಮಿತಿ ಮಾಡಿ ಸದಸ್ಯತ್ವ ಯಶಸ್ವಿಯಾಗಬೇಕು ಎಂದರು.

92ನೇ ವಯಸ್ಸಿನಲ್ಲೂ ದೇವೇಗೌಡರು ಪಕ್ಷ ಕಟ್ಟಬೇಕು ಎಂಬುವುದು ಹಾಗೂ ರೈತರಿಗೆ ಸಹಾಯ ಆಗುವಂತಹ ಕೆಲಸ ಆಗಬೇಕು ಎಂಬ ಛಲ‌ ಕಡಿಮೆಯಾಗಿಲ್ಲ. ನಿಮ್ಮೆಲ್ಲರ ಸಹಕಾರ, ಹೋರಾಟದಿಂದ ದೇವೇಗೌಡರ ಶ್ರಮಕ್ಕೆ ಫಲ‌ ಸಿಕ್ಕಿದೆ. ಬೂತ್ ಕಮಿಟಿ ಸದಸ್ಯರನ್ನು ಮಾಡಿ ದುಡಿಸಿಕೊಳ್ಳುವವರು ನಾವಲ್ಲ. ಬೂತ್ ಮಟ್ಟದಲ್ಲಿ ಪ್ರಾಮಾಣಿಕ ಕೆಲಸ ಮಾಡಿದವರನ್ನು ನಾನು ಗುರುತಿಸಿ ಅವರಿಗೆ ಅವಕಾಶ ಕೊಡುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಮಾತನಾಡಿ, ಜನಗಳ‌ ಮನಸನ್ನು ಜನತಾ ಪಕ್ಷದ ಕಡೆ ಒಲಿಸಿಕೊಳ್ಳಲು ನಾವೆಲ್ಲರೂ ಶ್ರಮಿಸಿದರೇ ಮುಂದಿನ ದಿನಗಳಲ್ಲಿ ಜಿಲ್ಲೆಯ 8 ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯ. 

ಹಾಗಾಗಿ ತಾವೆಲ್ಲರೂ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಹಳ್ಳಿಹಳ್ಳಿಗಳಲ್ಲೂ ಸದಸ್ಯತ್ವ ಮಾಡಬೇಕು. ಬೂತ್ ಮಟ್ಟದಲ್ಲಿ ಎಷ್ಟು ಜನಾಂಗ ಇದೆ ಎಂಬುವುದು ಗುರುತಿಸಿ ಆಯಾ ಜಾತಿಗಳ ಮುಖಂಡರಿಂದ ಸದಸ್ಯತ್ವ ಮಾಡಿಸಬೇಕು. ಜೆಡಿಎಸ್ ಜಾತ್ಯಾತೀತ ಆಗಿರುವುದರಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವ ಎಲ್ಲ ಜಾತಿಗಳ ಸದಸ್ಯರು ಬೇಕು ಎಂದು ತಿಳಿಸಿದರು. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಸದಸ್ಯತ್ವ ಅಭಿಯಾನ ಮಾಡುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಗಟ್ಟಿಗೊಳಿಸಬೇಕು. ಚುನಾವಣೆ ಗೆಲ್ಲಬೇಕಾದರೇ ಸದಸ್ಯತ್ವದ ಜೊತೆಗೆ ಬೂತ್ ಸಮಿತಿಯನ್ನು ಗಟ್ಟಿಗೊಳಿಸಬೇಕು. ಬೂತ್ ಮಟ್ಟದಲ್ಲಿ ಎಲ್ಲರಿಗೂ ಜೆಡಿಎಸ್ ಗುರುತಿನ ಚೀಟಿ ಕೊಡಲಾಗುವುದು ಎಂದರು.

ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಪ್ರಥಮ ಬಾರಿಗೆ ಜಿಲ್ಲೆಗೆ ಬಂದು ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿಗೆ ಚಾಲನೆ ನೀಡಿದ ಈ ದಿನ ಸಂತೋಷದ ದಿನವಾಗಿದೆ. ಜಿಲ್ಲೆಯ ನಾಯಕರು ಎಲ್ಲರೂ ತಮ್ಮ ತಮ್ಮ ಸಮುದಾಯಗಳ ಜನರನ್ನು 8 ಕ್ಷೇತ್ರಗಳಲ್ಲಿ ಗಟ್ಟಿಗೊಳಿಸುವ ಕೆಲಸ ಮಾಡಿದರೇ ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ. ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಜಿಲ್ಲೆಯ ಜನತೆ, ಮತದಾರರೇ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾರೆಗಳು ನಾಪತ್ತೆ: ಹೊಸಬರೇ ಚಿತ್ರರಂಗದ ಪಾಲಿನ ಅನ್ನದಾತರು.. ಇಲ್ಲಿದೆ ಕತೆಯೇ ಹೀರೋ ಆಗಿದ್ದು!

ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಆಲ್ಕೋಡ್ ಹನುಮಂತಪ್ಪ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಅಪ್ಪುಗೌಡ ಪಾಟೀಲ್ ಮನಗೂಳಿ, ಸುನಿತಾ ಚವ್ಹಾಣ, ಬಿ.ಡಿ.ಪಾಟೀಲ, ಪಂಚಪ್ಪ ಕಲಬುರಗಿ, ಬಸವರಾಜ ಹೊನವಾಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

click me!