
ಪಟನಾ : ಚುನಾವಣೆ ನಡೆಯುತ್ತಿರುವ ಬಿಹಾರದಲ್ಲಿ ಗ್ಯಾರಂಟಿ ಹಾಗೂ ಉಚಿತ ಕೊಡುಗೆಗಳ ಭರವಸೆ ಮಳೆ ತಾರಕಕ್ಕೇರಿದೆ. ಒಂದು ಬಾರಿಗೆ ಮಹಿಳೆಯರಿಗೆ 10 ಸಾವಿರ ರು. ನೀಡುವ ನಿತೀಶ್ ಕುಮಾರ್ ಸರ್ಕಾರದ ಯೋಜನೆಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಈಗ ಇದನ್ನು ಮೀರಿಸುವ ನಿಟ್ಟಿನಲ್ಲಿ ವಿಪಕ್ಷದ ‘ಇಂಡಿಯಾ’ ಸಿಎಂ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ‘ನಾವು ಅಧಿಕಾರಕ್ಕೆ ಬಂದರೆ ಮಾಯಿ- ಬೆಹನ್ ಯೋಜನೆ ಅಡಿ 30 ಸಾವಿರ ರು.ಗಳನ್ನು ಮಹಿಳೆಯರಿಗೆ ಒಂದೇ ಕಂತಿನಲ್ಲಿ ಸಂಕ್ರಾಂತಿ ವೇಳೆ ನೀಡಲಾಗುವುದು’ ಎಂದು ಘೋಷಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ತೇಜಸ್ವಿ, ‘ಮಾಯಿ- ಬೆಹನ್ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 2,500 ರು.ಗಳನ್ನು ವರ್ಗಾಯಿಸುವುದಾಗಿ ನಾವು ಈಗಾಗಲೇ ಭರವಸೆ ನೀಡಿದ್ದೇವೆ. ಈಗ ಮುಂದಿನ ವರ್ಷ ಜ.14ರಂದು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಈ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗಳಿಗೆ ಮುಂಗಡವಾಗಿ (ಇಡೀ ವರ್ಷದ) 30,000 ರು.ಗಳನ್ನು ವರ್ಗಾಯಿಸಲಿದ್ದೇವೆ’ ಎಂದರು.
ಇದೇ ವೇಳೆ, ‘ರಾಜ್ಯದಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಬೋನಸ್ ಆಗಿ ಪ್ರತಿ ಕ್ವಿಂಟಲ್ ಭತ್ತಕ್ಕೆ 300 ರು. ಮತ್ತು ಗೋಧಿಗೆ 400 ರು. ನೀಡಲಾಗುವುದು’ ಎಂದೂ ಘೋಷಿಸಿದರು.
‘ಪ್ರಸ್ತುತ ಸರ್ಕಾರವು ಕೃಷಿ ಚಟುವಟಿಕೆಗಳಲ್ಲಿ ಬಳಸುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ 55 ಪೈಸೆ ದರ ವಿಧಿಸುತ್ತದೆ. ಆದರೆ ನಾವು ರೈತರಿಗೆ ನೀರಾವರಿ ಉದ್ದೇಶಗಳಿಗಾಗಿ ಉಚಿತ ವಿದ್ಯುತ್ ನೀಡುತ್ತೇವೆ’ ಎಂದು ಭರವಸೆ ನೀಡಿದರು.
ಅಲ್ಲದೆ, ಎಲ್ಲ ಪ್ರಾಥಮಿಕ ಕೃಷಿ ಸಾಲ ಸಂಘಗಳು, ಪ್ರಾಥಮಿಕ ಮಾರುಕಟ್ಟೆ ಸಹಕಾರ ಸಂಘಗಳ ಮುಖ್ಯಸ್ಥರಿಗೆ ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು ಎಂದೂ ಆಶ್ವಾಸನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.