ಕರ್ನಾಟಕದಿಂದ ಮೋದಿ ಸ್ಪರ್ಧಿಸಲಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು!

By Web DeskFirst Published Feb 12, 2019, 11:45 AM IST
Highlights

ಬಿಜೆಪಿಗೆ ಗೆಲ್ಲುತ್ತೇವೆಂಬ ವಿಶ್ವಾಸವಿದ್ದರೆ ಮೋದಿ ಕರ್ನಾಟಕದಿಂದ ಸ್ಪರ್ಧಿಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ಹುಬ್ಬಳ್ಳಿ[ಫೆ.12]: ಲೋಕಸಭಾ ಚುನಾವಣೆಯಲ್ಲಿ 22ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸುತ್ತದೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಅಷ್ಟೊಂದು ವಿಶ್ವಾಸ ಬಿಜೆಪಿಗಿದ್ದರೆ ಪ್ರಧಾನಿ ಮೋದಿಯೇ ಕರ್ನಾಟಕದಿಂದ ಸ್ಪರ್ಧಿಸಿ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಬರೀ ಸುಳ್ಳು ಹೇಳುತ್ತಾರೆ. ಬಿಜೆಪಿ ನಾಯಕರು ಮೈತ್ರಿ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲ ಎಂದು ಟೀಕಿಸುತ್ತಿದ್ದಾರೆ. ಆದರೆ ಮೋದಿ ಸರ್ಕಾರವೇಕೆ ಸಾಲಮನ್ನಾ ಮಾಡಿಲ್ಲ. ಎರಡು ಬಾರಿ ನಿಯೋಗ ತೆಗೆದುಕೊಂಡು ಹೋಗಿದ್ದೇವೆ. ಕೇಂದ್ರ ಸರಿಯಾಗಿ ಸ್ಪಂದಿಸಲಿಲ್ಲ. ಮೋದಿ ಮಹಾ ಸುಳ್ಳುಗಾರ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಪ್ರಧಾನಿ ಆರೋಪಿಸುತ್ತಾರೆ. ಅವರೇಕೆ ರಫೇಲ್‌ ಹಗರಣದ ಕುರಿತು ಮಾತನಾಡುವುದಿಲ್ಲ. ಮೊದಲು ಅದರ ಬಗ್ಗೆ ಮಾತನಾಡಲಿ ಎಂದು ಸಿದ್ದು ಕಿಡಿಕಾರಿದರು.

ಬಿಎಸ್‌ವೈ ರಾಜೀನಾಮೆ ನೀಡಲಿ:

ಆಪರೇಷನ್‌ ಕಮಲದ ಆಡಿಯೋ ವಿಚಾರದಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕೇವಲ ತಪ್ಪೊಪ್ಪಿಕೊಂಡರೆ ಸಾಲದು. ಅವರು ಈ ಮೊದಲು ಹೇಳಿದಂತೆ ರಾಜಕೀಯ ನಿವೃತ್ತಿ ಘೋಷಿಸಬೇಕು. ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಕೆಟ್ಟಕೆಲಸ ಮಾಡಿರುವುದು ನಾಚಿಗೇಡಿನ ಸಂಗತಿ. ಮೊದಲು ಆಡಿಯೋದಲ್ಲಿನ ಧ್ವನಿ ನನ್ನದಲ್ಲ, ಮಿಮಿಕ್ರಿ ಮಾಡಿದ್ದಾರೆ ಎಂದು ಹೇಳಿದ್ದರು. ಈಗ ಆ ಧ್ವನಿ ನನ್ನದು, ಅದನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಲಿಕ್ಕೂ ಯೋಗ್ಯರಲ್ಲ ಎಂದರು.

ಶರಣಗೌಡರಿಗೆ ಏನು ಹೇಳಿದ್ದಾರೆ, ಅದನ್ನು ಹೇಳ್ಲಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಸಿದ್ದರಾಮಯ್ಯ, ಹತ್ತು ಕೋಟಿ ನಿಮ್ಮಪ್ಪನಿಗೆ ಕೊಡ್ತೀನಿ, ಮಂತ್ರಿ ಮಾಡ್ತೀವಿ. ನಿಂಗೆ ಟಿಕೆಟ್‌ ಕೊಡ್ತೀವಿ ಎಂದಿದ್ದಾರೆ. ಇದು ಕುದುರೆ ವ್ಯಾಪಾರ ಅಲ್ವಾ? ಸಿಎಂ ಆಗಿದ್ದವರು ಎಂಎಲ್‌ಎಗಳನ್ನು ಕೊಂಡುಕೊಳ್ಳಲು ಹೊರಟಿರುವುದು ಸರಿನಾ ಎಂದು ಟೀಕಿಸಿದರು. ಕಾಂಗ್ರೆಸ್‌ ನಾಲ್ವರಿಗೆ ಅನರ್ಹತೆ: ಇದೇ ವೇಳೆ, ಅಧಿವೇಶನಕ್ಕೆ ನಾಲ್ಕು ಕಾಂಗ್ರೆಸ್‌ ಶಾಸಕರು ಬಂದಿಲ್ಲ. ಈ ಅತೃಪ್ತ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.

click me!