
ಲಖನೌ[ಫೆ.12]: ಈಗಷ್ಟೇ ರಾಜಕೀಯಕ್ಕೆ ಧುಮುಕಿರುವ ಕಾಂಗ್ರೆಸ್‌ನ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ತಮ್ಮ ಕಾರ್ಯಕ್ಷೇತ್ರ ಉತ್ತರಪ್ರದೇಶಕ್ಕೆ ‘ವೈಭವಯುತ’ ಪ್ರವೇಶ ಪಡೆದಿದ್ದಾರೆ. ಸೋದರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್‌ನ ಇನ್ನೊಬ್ಬ ಪ್ರಭಾರಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜತೆಗೂಡಿ ಲಖನೌ ಪ್ರವೇಶಿಸಿದ ಪ್ರಿಯಾಂಕಾ, ರೋಡ್ ಶೋ ನಡೆಸಿ, ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಕುರ್ತಾ ಹಾಗೂ ದುಪಟ್ಟಾಧರಿಸಿದ್ದ 47 ವರ್ಷದ ಪ್ರಿಯಾಂಕಾ, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಕಾರ್ಯಕರ್ತರತ್ತ ಕೈಬೀಸಿದರು. ‘ಬನ್ನಿ, ಹೊಸ ಭವಿಷ್ಯ ಬರೆಯೋಣ. ಧನ್ಯವಾದ’ ಎಂದು ಇದೇ ವೇಳೆ ಕರೆ ನೀಡಿದರು. ಪ್ರಿಯಾಂಕಾ ಅವರ ಉತ್ತರಪ್ರದೇಶ ಪ್ರವೇಶವು ರಾಜ್ಯದಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ಚಿತೋಹಾರಿ ಆಗಬಹುದು ಎನ್ನಲಾಗುತ್ತಿದೆ. ಅಲ್ಲದೆ, ರಾಜ್ಯ ರಾಜಕೀಯದ ದಿಶೆಯನ್ನೂಇದು ಬದಲಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಲಖನೌ ವಿಮಾನ ನಿಲ್ದಾಣದಿಂದ ಆರಂಭವಾದ 25 ಕಿ.ಮೀ. ರೋಡ್ ಶೋ ನಡೆದ ಸಂಸರ್ಭದಲ್ಲಿ ಕಾರ್ಯಕರ್ತರು ಗುಲಾಬಿ ಹೂವಿನ ಪಕಳೆಗಳ ಮರೆಗಳೆದರು. ಪ್ರಿಯಾಂಕಾಗೆ ಚಂಡುಹೂವಿನ ಹಾರ ಹಾಕಿದರು. ‘ಪ್ರಿಯಾಂಕಾ ಸೇನಾ’ ಎಂಬ ಹೊಸ ಸಂಘಟನೆ ಹುಟ್ಟಿಕೊಂಡಿದ್ದು, ಪ್ರಿಯಾಂಕಾ ಚಿತ್ರವಿರುವ ಗುಲಾಬಿ ಬಣ್ಣದ ಟೀಶರ್ಟ್ ಧರಿಸಿ ಗಮನ ಸೆಳೆದರು. ಈ ನಡುವೆ, ಲಖನೌನ ಬೀದಿಗಳಲ್ಲಿ ಪ್ರಿಯಾಂಕಾ ಅವರನ್ನು ಸಿಂಹದ ಮೇಲೆ ದುರ್ಗಾ ಮಾತೆಯಂತೆ ಚಿತ್ರಿಸಿದ ಪೋಸ್ಟರ್‌ಗಳು ರಾರಾಜಿಸಿದವು.
ಪ್ರಿಯಾಂಕಾ ಹಾಗೂ ಸಿಂಧಿಯಾ ಫೆಬ್ರವರಿ 12, 13 ಹಾಗೂ 14ರಂದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಸರಣಿ ಸಮಾಲೋಚನಾ ಸಭೆಗಳನ್ನು ನಡೆಸಲಿದ್ದಾರೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ 2009ರಲ್ಲಿ 21 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಅದು 2014ರಲ್ಲಿ 2 ಸ್ಥಾನಕ್ಕೆ ಕುಸಿದಿತ್ತು. ಹೀಗಾಗಿ ಸಂಘಟನಾತ್ಮಕವಾಗಿ ಕಾಂಗ್ರೆಸ್‌ಗೆ ಮರುಜೀವ ನೀಡಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಅನಿವಾರ್ಯತೆ ಇಬ್ಬರೂ ಪ್ರಧಾನ ಕಾರ್ಯದರ್ಶಿಗಳಿಗೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.