ಕಲಬುರಗಿ (ಫೆ.6) : ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ತಾವು ಕೋಲಾರದಿಂದ ಸ್ಪರ್ಧೆ ಮಾಡೋದು ನಿಶ್ಚಿತ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೀದರ್ ಪ್ರಜಾಧ್ವನಿ ಯಾತ್ರೆ ವೇಳೆ ಕಲಬುರಗಿಯಲ್ಲಿ ಕೆಲಕಾಲ ತಂಗಿದ್ದ ಅವರು ಸುದ್ದಿಗಾರರೊದಿಗೆ ಮಾತನಾಡುತ್ತ, ಕೋಲಾರದಿಂದ ಸ್ಪರ್ಧಿಸುವ ನಿರ್ಣಯ ಕೈಗೊಂಡಿದ್ದಾಗಿ ಸಿದ್ದರಾಮಯ್ಯ ಹೇಳಿದರಲ್ಲದೆ ಹೈಕಮಾಂಡ್ ಅನುಮತಿ ಕೊಟ್ಟರೆ ಅಲ್ಲಿಂದಲೇ ಸ್ಪರ್ಧೆ ಮಾಡುವೆ. ಕೋಲಾರದಿಂದ 200 ಪರ್ಸೆಂಟ್ ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
undefined
ಹೆದರಿಸಿದ್ರೆ ಸುಮ್ಮನಿರಲ್ಲ, ತೊಡೆತಟ್ಟಲು ನಂಗೂ ಬರುತ್ತೆ: ಸಿದ್ದರಾಮಯ್ಯ
ಬಾದಾಮಿಯಲ್ಲಿ ಸೋಲುವ ಭಯವಿಲ್ಲವೆಂದ ಅವರು ಹತ್ತಿರದ ಕ್ಷೇತ್ರ ನೋಡುತ್ತಿರುವೆ. ಅದಕ್ಕಾಗಿ ಕೋಲಾರ ಆಯ್ಕೆ ಮಾಡಿಕೊಂಡಿದ್ದೇನೆ. ಬಾದಾಮಿಯಲ್ಲಿಯೂ ಇನ್ನೂರು ಪರ್ಸೆಂಟ್ ಗೆಲ್ಲುತ್ತೇನೆ. ಬಾದಾಮಿ ಜನ ಆಸ್ತಿ ಮಾರಿ ಹೆಲಿಕ್ಯಾಪ್ಟರ್ ತಕ್ಕೊಡ್ತೀವಿ ಅಂತಿದಾರೆ. ಚಾಮುಂಡೇಶ್ವರಿಯಲ್ಲಿ ನನ್ನ ಸೋಲಿಸಲು ಸಾಕಷ್ಟುಪ್ರಯತ್ನ ನಡೆದವು. ಆದರೆ, ಬಾದಾಮಿ ಜನ ನನ್ನನ್ನ ಬಹಳ ಪ್ರೀತಿಯಿಂದ ಸ್ವೀಕರಿಸದರು. ಈಗಲೂ ಅಲ್ಲಿ ಸ್ಪರ್ಧಿಸಿದರೆ ಗೆಲ್ಲೋದು ನೂರಕ್ಕೆ ಇನ್ನೂರರಷ್ಟುಖಚಿತ ಎಂದರು.
ಭಾರತೀಯ ಜನತಾ ಪಕ್ಷದ ವರಿಷ್ಠರು ಸ್ವತಃ ಬಿ.ಎಸ್.ಯಡಿಯೂರಪ್ಪ ಅವರನ್ನು ಪಂಕ್ಚರ್ ಮಾಡಿ ಕೂಡಿಸಿದ್ದಾರೆ. ಬಿಜೆಪಿಯೂ ಪಂಕ್ಚರ್ ಆಗಿದೆ ಎಂದು ಲೇವಡಿ ಮಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪ್ರಜಾಧ್ವನಿ ಬಸ್ ಪಂಕ್ಚರ್ ಆಗಿದೆ ಎಂಬ ಬಿಎಸ್‌ವೈ ಹೇಳಿಕೆಗೆ ತಿರುಗೇಟು ನೀಡಿದರು.
ಯಡಿಯೂರಪ್ಪ(BS Yadiyurappa) ಅವರ ಬಗ್ಗೆ ನನಗೆ ಗೌರವದ ಜೊತೆಗೆ ಅನುಕಂಪವಿದೆ. ಅವರು ಆರೋಗ್ಯವಾಗಿದ್ದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ಅವರನ್ನೇ ತೆಗೆದು ಹಾಕಿದ್ದಾರೆ. ಈಗ ಪುನಃ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ? ತೆಗೆದು ಹಾಕಿದ ಮೇಲೆ ಜನಾ ಇದನ್ನ ಒಪ್ಪುತ್ತಾರೇನ್ರಿ? ಯಡಿಯೂರಪ್ಪ ಸಿಎಂ ಆದಾಗಲೂ ಬಿಜೆಪಿಗೆ 104 ಸೀಟ್ ಬಂದಿತ್ತು. ಈಗ ಅವರನ್ನು ತೆಗೆದಿದ್ದಾರೆ. ಈಗ ಸೀಟು ಬರ್ತಾವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿಯವರು ಯಡಿಯೂರಪ್ಪ ಅವರನ್ನು ಪಂಕ್ಚರ್ ಮಾಡಿದ್ದಾರೆ. ಆ ಕಾರಣಕ್ಕಾಗಿಯೇ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕಾಗಿ ಯಾರೂ ತಿರುಕನ ಕನಸು ಕಾಣುತ್ತಿಲ್ಲ ಎಂದರು.
ಮೇಲ್ವರ್ಗಕ್ಕೆ ಶೇ.10 ಮೀಸಲು ಕೊಡಬೇಕೆಂಬ ನಿಯಮವಿದ್ದರೆ ರಾಜೀನಾಮೆ ಕೊಡುವೆ:ಸಿದ್ದರಾಮಯ್ಯ
ಕಾಂಗ್ರೆಸ್ ಈ ಬಾರಿ ನೂರಕ್ಕೆ ನೂರರಷ್ಟುಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸರ್ಕಾರದ ವಿರುದ್ಧ 40 ಪಸೆಂರ್‍ಟ್ ಕಮಿಷನ್ ಹೊಡೆಯುವ ಗಂಭೀರ ಆರೋಪವಿದೆ. ಬಿಜೆಪಿಯ ವಚನ ಭ್ರಷ್ಟತೆ ಮತ್ತು ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಜನರು ಕಾಂಗ್ರೆಸ್ ಆಡಳಿತಕ್ಕಾಗಿ ಹಾದಿ ನೋಡುತ್ತಿದ್ದಾರೆ ಎಂದರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದ್ದರಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಇದಕ್ಕಿಂತಲೂ ಜನವಿರೋಧಿ ಸರಕಾರ ಮತ್ತೊಂದು ಇರಲು ಸಾಧ್ಯವಿಲ್ಲ ಎಂದು ವ್ಯಾಖ್ಯಾನಿಸಿದರು.