ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ: ಸಚಿವ ಮುನಿಯಪ್ಪ

By Kannadaprabha NewsFirst Published May 22, 2023, 10:23 PM IST
Highlights

ರಾಜ್ಯದ ಮತದಾರರಿಗೆ ಕಾಂಗ್ರೆಸ್‌ ಪಕ್ಷ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಭರವಸೆಗಳನ್ನು ಅಧಿಕಾರಕ್ಕೆ ಬಂದ ದಿನವೇ ಘೋಷಣೆ ಮಾಡಿದೆ. ಸಚಿವ ಸಂಪುಟದಲ್ಲಿ ಗ್ಯಾರಂಟಿಗಳ ಕುರಿತು ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ರಾಜ್ಯ ಸಂಪುಟದ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. 

ದೇವನಹಳ್ಳಿ (ಮೇ.22): ರಾಜ್ಯದ ಮತದಾರರಿಗೆ ಕಾಂಗ್ರೆಸ್‌ ಪಕ್ಷ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಭರವಸೆಗಳನ್ನು ಅಧಿಕಾರಕ್ಕೆ ಬಂದ ದಿನವೇ ಘೋಷಣೆ ಮಾಡಿದೆ. ಸಚಿವ ಸಂಪುಟದಲ್ಲಿ ಗ್ಯಾರಂಟಿಗಳ ಕುರಿತು ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ರಾಜ್ಯ ಸಂಪುಟದ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು. ದೇವನಹಳ್ಳಿ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಮುಖಂಡರ ಮತ್ತು ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಭಿನಂದನಾ ಸಮಾರಂಭಕ್ಕೆ ಮುನ್ನ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅಭಿಮಾನಿಗಳು ಗೌರವ ಸಮರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಮುನಿಯಪ್ಪ, ನುಡಿದಂತೆ ನಡೆಯುವ ಕಾಂಗ್ರೆಸ್‌ ಪಕ್ಷ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ಆಡಳಿತದ ಮುಖ್ಯಗುರಿ. ಬಡವರು, ದೀನ ದಲಿತರು, ರೈತರು ಇತರೆ ಹಿಂದುಳಿವರಿಗಾಗಿ ವಿನೂತನ ಯೋಜನೆಗಳನ್ನು ಜಾರಿ ಮಾಡಲಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಪ್ರಮುಖರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ತಮಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಅಭಿನಂದಿಸುತ್ತೇನೆ ಎಂದು ಹೇಳಿದರು.

ಕಾರ್ಯಕರ್ತರೇ ಕಾಂಗ್ರೆಸ್‌ ಪಕ್ಷದ ಜೀವಾಳ: ಸಚಿವ ಮುನಿಯಪ್ಪ

ಮಾಜಿ ಸಂಸದ ಸಿ. ನಾರಾಯಣಸ್ವಾಮಿ ಮಾತನಾಡಿ, ನಮ್ಮ ಕ್ಷೇತ್ರದಿಂದ ಇದುವರೆಗೂ ಯಾವುದೇ ವ್ಯಕ್ತಿಯನ್ನು ಚುನಾಯಿಸಿ ಕಳುಹಿಸಿದ್ದರೆ ಅವರು ಮಾಮೂಲಿ ಶಾಸಕರಾಗಿ ಮಾತ್ರ ವಿಧಾನಸಭೆಯಲ್ಲಿರುತ್ತಿದ್ದರು. ಆದರೆ ಈ ಬಾರಿ ಕೇಂದ್ರ ಮಾಜಿ ಸಚಿವರೂ ಆದಂತಹ ಹಿರಿಯ ರಾಜಕಾರಣಿ ಕೆ.ಎಚ್‌.ಮುನಿಯಪ್ಪ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದರಿಂದ ದೇವನಹಳ್ಳಿ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಬೇಕಾದ ಹಾಗೂ ಕ್ಷೇತ್ರದ ಮತದಾರರ ಋುಣ ತೀರಿಸಬೇಕಾದ ಜವಾಬ್ದಾರಿ ಸಚಿವರ ಮೇಲಿದೆ ಎಂದು ಹೇಳಿದರು.

Ramanagara: ಡಿಸಿಎಂ ಡಿ.ಕೆ.ಶಿವಕುಮಾರ್‌ ಮೇಲೆ ಹೆಚ್ಚಿದ ಜವಾ​ಬ್ದಾ​ರಿ

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ರಾಜಣ್ಣ, ಅನಂತಕುಮಾರಿ ಚಿನ್ನಪ್ಪ ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌, ತೂಬಗೆರೆ ಬ್ಲಾಕ್‌ ಅಧ್ಯಕ್ಷ ರಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಲೇಪುರ ಲಕ್ಷ್ಮೇನಾರಾಯಣ್‌, ಬಿದಲೂರು ಗ್ರಾಪಂ. ಮಾಜಿ ಅಧ್ಯಕ್ಷ ನಾಗೇಗೌಡ, ಕೆ.ಸಿ.ಮಂಜುನಾಥ್‌, ಮುಖಂಡರಾದ ಎ.ಚಿನ್ನಪ್ಪ, ಮಾಜಿ ಪುರಸಭಾಧ್ಯಕ್ಷ ಎಂ.ನಾರಾಯಣಸ್ವಾಮಿ, ಲೋಕೇಶ್‌, ಸವಿತಾ ವೆಂಕಟಸ್ವಾಮಿ, ಆವತಿ ರಾಧಾಮಣಿ, ಕನ್ನಮಂಗಲ ನಾಗೇಶ್‌ ಇತರರರಿದ್ದರು.

click me!