ರಾಜಕಾರಣವೇ ಒಂದು ಅವಕಾಶ, ಕಾಂಗ್ರೆಸ್ ನನ್ನ ಕೊನೆಯ ಬಸ್ ಸ್ಟಾಪ್: ಆಯನೂರು ಮಂಜುನಾಥ್ ಹೇಳಿಕೆ
ಶಿವಮೊಗ್ಗ(ಆ.24): ಕಳೆದ ಕೆಲವು ದಿನಗಳಿಂದ ನನ್ನ ಕೇಂದ್ರೀಕೃತವಾಗಿ ರಾಜಕೀಯ ಸುದ್ದಿಗಳು ನಡೆಯುತ್ತಿದೆ. ಇದಕ್ಕೆ ಪೂರ್ಣ ವಿರಾಮ ನೀಡಲು ಬಂದಿದ್ದೇನೆ. ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ ಎಂದು ಆಯನೂರು ಮಂಜುನಾಥ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಇಂದು(ಗುರುವಾರ) ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆ ಆಗುತ್ತಿದ್ದೇನೆ ಎಂದರು.
ಆಯನೂರು ಮಂಜುನಾಥ್ ಜೆಡಿಎಸ್ ಪಕ್ಷದಲ್ಲಿದ್ದೇ ಧಮ್ ತೋರಲಿ!
ಪಕ್ಷದ ಎಲ್ಲ ಮುಖಂಡರ ಸಹಮತಿ ನೀಡಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸೇರುವ ಅವಕಾಶ ಒದಗಿ ಬಂದಿತ್ತು. ಆದರೆ ಸೇರ್ಪಡೆ ಆಗಿರಲಿಲ್ಲ. ಈಗ ಅವಕಾಶ ಸಿಕ್ಕಿದೆ, ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಸೇರಿ ಶಕ್ತಿ ಹಾಗೂ ಸಮಯ ನೀಡುತ್ತೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೆ. ಆದರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ಅವಕಾಶ ಸಿಕ್ಕಿದ್ದರಿಂದ ಸ್ಪರ್ಧೆ ಮಾಡಿದ್ದೆ ಎಂದರು.
ಬಿಜೆಪಿಯಿಂದ ಆಹ್ವಾನ ಬಂದಿಲ್ಲ:
ಆತಂಕಕ್ಕೆ ಒಳಗಾದವರು ನನ್ನನ್ನು ವಿರೋಧಿಸುತ್ತಿದ್ದಾರೆ. ದೊಡ್ಡ ಪಕ್ಷದಲ್ಲಿ ವಿರೋಧ ಇರುವುದು ಸಹಜ. ಕಾಂಗ್ರೆಸ್‌ನ ಬಹುತೇಕ ಮುಖಂಡರು ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ನಮ್ಮಶಕ್ತಿಯನ್ನು ಧಾರೆ ಎರೆಯುತ್ತೇವೆ. ರಾಜಕಾರಣವೇ ಒಂದು ಅವಕಾಶ. ಕಾಂಗ್ರೆಸ್ ಕೊನೆಯ ಬಸ್ ಸ್ಟಾಪ್ ಅಂತ ಕಾಣುತ್ತದೆ. ಬಿಜೆಪಿಯಿಂದ ಆಹ್ವಾನ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್ ತೊರೆಯೋದಕ್ಕೆ ಬೇಸರವಿಲ್ಲ:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಅವಕಾಶ ನೀಡಿತ್ತು. ಚುನಾವಣೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಗೆಲುವಿಗೆ ಸಾಕಷ್ಟುಶ್ರಮವಹಿಸಿದ್ದರು. ಆದರೂ ಸೋಲು ಅನುಭವಿಸಬೇಕಾಯಿತು. ಜೆಡಿಎಸ್‌ನಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರುತ್ತಿದ್ದು, ಜೆಡಿಎಸ್ ತೊರೆಯುತ್ತಿರುವುದು ಬೇಸರವಿಲ್ಲ ಎಂದರು.
ನನ್ನೊಂದಿಗೆ ಜೆಡಿಎಸ್‌ಗೆ ಬಂದ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು, ಕಾಂಗ್ರೆಸ್‌ನಿಂದ 2018ರ ಚುನಾವಣೆಯಲ್ಲಿ ಸ್ಪರ್ಧಿಸಿ 59 ಸಾವಿರಕ್ಕೂ ಹೆಚ್ಚು ಮತ ಪಡೆದು ಸೋಲು ಅನುಭವಿಸಿದ್ದರು. ಆದರೆ, ಪಕ್ಷದ ಕೆಲವರ ವರ್ತನೆಯಿಂದಾಗಿ ಬೇಸತ್ತು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದರು. ಈಗ ಅವರು ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಂಬರುವ ದಿನಗಳಲ್ಲಿ ಸೇರಲೂಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಪ್ರಮುಖರಾದ ಪರಂಧಾಮ ರೆಡ್ಡಿ, ಮಹೇಂದ್ರನಾಥ್, ಶಿ.ಜು.ಪಾಶಾ, ಲೋಕೇಶ್, ಐಡಿಯಲ್ ಗೋಪಿ, ಆಯನೂರು ಸಂತೋಷ್, ಎಸ್.ಪಿ. ಪಾಟೀಲ್, ರಿಯಾಜ್ ಅಹ್ಮದ್, ಸಯ್ಯದ್ ಶಫಿವುಲ್ಲಾ, ಹಿರಣ್ಣಯ್ಯ, ಲಕ್ಷ್ಮಣಪ್ಪ ಮತ್ತಿತರರು ಇದ್ದರು.
ರಾಜಕಾರಣದಲ್ಲಿ ಹೊಸ ಸಂಸ್ಕೃತಿ, ಸಂಪ್ರದಾಯ ಬೆಳೆಯಬೇಕು: ಕಾಗೋಡು ತಿಮ್ಮಪ್ಪ
ಅವಕಾಶ ನೀಡಿದರೆ ಸ್ಪರ್ಧೆ: ಆಯನೂರು
ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸೇರ್ಪಡೆಗೆ ಒಳ್ಳೆಯ ಅವಕಾಶವಿದೆ ಹಾಗೂ ಸಹಕಾರ ದೊರೆಯುತ್ತದೆ ಎಂಬ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದೇನೆ. ಯಾವುದೇ ಷರತ್ತು ಇಲ್ಲದೆ ಸೇರ್ಪಡೆಗೊಳ್ಳುತ್ತಿದ್ದೇನೆ. ವಿಧಾನ ಪರಿಷತ್ತು ಪದವೀಧರರ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ ಮಾಡುತ್ತೇನೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.
ನಾನು ಕಾಂಗ್ರೆಸ್ ಸೇರ್ಪಡೆಯಾಗಲು ಕೆಲವರು ವಿರೋಧ ಮಾಡುವುದು ಸಹಜ. ಆದರೆ, ಶೇ.99ರಷ್ಟುಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಆದರೆ ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್, ನಾನು ಕಾಂಗ್ರೆಸ್ ಸೇರ್ಪಡೆಗೊಳ್ಳುವುದಕ್ಕೆ ವಿರೋಧಿಸಿದ್ದಾರೆ. ಅವರು ನನ್ನ ಚಿಕ್ಕ ಗೆಳೆಯ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನನ್ನೊಂದಿಗೆ ನನ್ನ ಬೆಂಬಲಿಗರು ಸಹ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳಿದರು.