ಮುಂದಿನ ವಿಧಾನಸಭಾ ಚುನಾವಣೆಗೆ ನನ್ನ ಸ್ಪರ್ಧೆ ಖಚಿತ : ಸುಮಲತಾ ಅಂಬರೀಷ್

Kannadaprabha News   | Kannada Prabha
Published : Nov 25, 2025, 05:26 AM IST
Sumalatha

ಸಾರಾಂಶ

ಮದ್ದೂರು ನನ್ನ ಪತಿ ದಿ.ಅಂಬರೀಶ್ ಅವರ ಕರ್ಮಭೂಮಿಯಾಗಿದೆ. ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ ಅಂಬರೀಶ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳ ಅಪೇಕ್ಷೆಯಾಗಿದೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದಲೇ ಮಾತ್ರ.

ಮದ್ದೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಅದು ಯಾವ ಕ್ಷೇತ್ರ ಎನ್ನುವುದನ್ನು ಬಿಜೆಪಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಆದರೆ, ಮದ್ದೂರು ಕ್ಷೇತ್ರ ನನ್ನ ಪ್ರಥಮ ಆಯ್ಕೆಯಾಗಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಸೋಮವಾರ ಹೇಳಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ

ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 2018ರ ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ. ಈಗ ನಾನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಹೀಗಾಗಿ ಚುನಾವಣಾ ವೇಳೆ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವಂತೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಇಲ್ಲ ಎಂದು ಇಂಗಿತ ವ್ಯಕ್ತಪಡಿಸಿದ್ದೆ ಎಂದರು.

ಮದ್ದೂರು ನನ್ನ ಪತಿ ದಿ.ಅಂಬರೀಶ್ ಅವರ ಕರ್ಮಭೂಮಿಯಾಗಿದೆ. ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ ಅಂಬರೀಶ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳ ಅಪೇಕ್ಷೆಯಾಗಿದೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದಲೇ ಮಾತ್ರ ಎಂದರು.

ಅಭಿಷೇಕ್ ಅಂಬರೀಶ್ ರಾಜಕೀಯ ಪ್ರವೇಶ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ಸರ್ವ ಸ್ವತಂತ್ರನಾಗಿದ್ದಾನೆ. ಸೂಕ್ತ ಸಮಯದಲ್ಲಿ ಆತ ತಂದೆ ಅಂಬರೀಷ್ ಹಿರಿಯ ಬೆಂಬಲಿಗರು, ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ ನಂತರವೇ ಆತನ ರಾಜಕೀಯ ಪ್ರವೇಶ ನಿರ್ಧಾರವಾಗಲಿದೆ ಎಂದರು.

ಕಾಂಗ್ರೆಸ್‌ನ ಆತಂರಿಕ ವಿಚಾರ:

ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ಕಾಂಗ್ರೆಸ್ ಪಕ್ಷದ ವಿಚಾರ. ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕಾರಣ ಅಂದ ಮೇಲೆ ಯಾವುದೇ ಪಕ್ಷದಲ್ಲಿ ಅಧಿಕಾರಕ್ಕಾಗಿ ಗೊಂದಲ ನಡೆಯುವುದು ಸರ್ವೆ ಸಾಮಾನ್ಯವಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಕುರ್ಚಿ ಕಾಳಗ ಅತಿರೇಕಕ್ಕೆ ಹೋಗಿದೆ. ಈ ಬಗ್ಗೆ ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದು ಸುಮಲತಾ ತಿಳಿಸಿದರು.

ಪುತ್ರ ಅಭಿಷೇಕ್ ಅಂಬರೀಶ್ ಮಾತನಾಡಿ, ನನ್ನ ರಾಜಕೀಯ ಪ್ರವೇಶ ಮತ್ತು ಚುನಾವಣೆ ಸ್ಪರ್ಧೆ ಬಗ್ಗೆ ಯಾವುದೇ ವೈಯಕ್ತಿಕ ನಿರ್ಧಾರ ಕೈಗೊಳ್ಳುವುದಿಲ್ಲ. ನನ್ನ ತಾಯಿ ಸುಮಲತಾ ಅಂಬರೀಶ್ ಮತ್ತು ಕುಟುಂಬ ಹಾಗೂ ತಂದೆ ಆಪ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಮುಖಂಡರಾದ ಹನಕೆರೆ ಶಶಿಕುಮಾರ್, ಕೋಣಸಾಲೆ ಜಯರಾಮ, ಹಾಗಲಹಳ್ಳಿ ಬಸವರಾಜು, ಆರ್.ಎನ್.ಗಿರೀಶ್, ನಾಗರಾಜು, ಬೊಮ್ಮನದೊಡ್ಡಿ ರವೀಂದ್ರ, ಶಿವಲಿಂಗಯ್ಯ ಮತ್ತಿತರರು ಇದ್ದರು.

ನಟ ಧರ್ಮೇಂದ್ರ ನಿಧನಕ್ಕೆ ಸಂತಾಪ

ಮದ್ದೂರು: ಬಾಲಿವುಟ್ ನಟ ಧರ್ಮೇಂದ್ರ ನಿಧನಕ್ಕೆ ಮಾಜಿ ಸಂಸದೆ ಸುಮಲತಾ ಅಂಬರೀಷ್ ಸಂತಾಪ ಸೂಚಿಸಿದರು.

ಹಿಂದಿ ಭಾಷೆಯ ಕ್ಷತ್ರಿಯ ಚಿತ್ರದಲ್ಲಿ ಧರ್ಮೇಂದ್ರ ಪತ್ನಿಯಾಗಿ ನಟನೆ, ಜೊತೆಗಿನ ಸಮಯವನ್ನು ಮೆಲುಕು ಹಾಕಿ ಮಾತನಾಡಿದ ಸುಮಲತಾ ಅವರು, ನಟ ಧರ್ಮೇಂದ್ರ ನಿಧನದಿಂದ ಸಿನಿಮಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌ನ ಲೋಕಾಯುಕ್ತರ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!