
ಕೆ.ಎಂ.ದೊಡ್ಡಿ : ಜೆಡಿಎಸ್ ಪಕ್ಷದ ಬಗ್ಗೆ ಕೀಳಾಗಿ ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಬಿಹಾರ ಚುನಾವಣೆಯಲ್ಲಿ ಆ ಪಕ್ಷದ ಪರಿಸ್ಥಿತಿಯನ್ನು ಪ್ರಬುದ್ಧ ಮತದಾರರು ಏನು ಎಂಬುದನ್ನು ತೋರಿಸಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮದ್ದೂರು ತಾಲೂಕಿನ ದೇವೇಗೌಡನದೊಡ್ಡಿಯಲ್ಲಿ ಜೆಡಿಎಸ್ ಪಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಅಭಿಮಾನಿ ಆತ್ಮ*ತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ನಾಯಕರು ಕಳೆದ ವಿಧಾನಸಭೆ ಅಧಿವೇಶನದಲ್ಲಿ ಜೆಡಿಎಸ್ ಬಗ್ಗೆ ಕೀಳಾಗಿ ಮಾತಾಡಿ ಜಾತ್ಯತೀತ ಜನತಾದಳ ಪಕ್ಷದ ಶಾಸಕರ ಸಂಖ್ಯೆ 18 ಇದ್ದು, ಮುಂದೆ ಅಸ್ತಿತ್ವವೇ ಇರುವುದಿಲ್ಲ. ಶಾಸಕರ ಸಂಖ್ಯೆ 7ರಿಂದ 8 ಸ್ಥಾನಕ್ಕೆ ಬರುತ್ತದೆ ಎಂದು ವ್ಯಂಗ್ಯವಾಡಿದ್ದರು. ಆದರೆ, ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕಂತು ಕಂತು ದುಡ್ಡನ್ನು ಗೋಣಿ ಚೀಲದಲ್ಲಿ ತುಂಬಿ ಕೇಂದ್ರಕ್ಕೆ ಕೊಡ್ತಿದ್ದಾರೆ. ಆದರೆ, ಕಾಂಗ್ರೆಸ್ ನವರು ಜೆಡಿಎಸ್ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಇನ್ನು ರಾಷ್ಟ್ರೀಯ ಪಕ್ಷವಾಗಿ ಉಳಿದುಕೊಂಡಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದವರು ಇನ್ನೊಂದು ಪಕ್ಷದ ಬಗ್ಗೆ ಲಘುವಾಗಿ ಮಾತನಾಡೋದನ್ನು ಬಿಡಲಿ. ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನವೆಂಬರ್ ಕ್ರಾಂತಿ ಗಡುವು ಮುಗಿದಿದೆ. ಆ ಪಕ್ಷದಲ್ಲಿ ಉಂಟಾಗಿರುವ ಮುಖ್ಯಮಂತ್ರಿ ಹುದ್ದೆ ಬಿಕ್ಕಟ್ಟನ್ನು ಮೊದಲು ಬಗೆಹರಿಸಿಕೊಳ್ಳಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾರು ಸಿಎಂ ಆಗಬೇಕು, ಯಾರು ಸಿಎಂ ಸ್ಥಾನ ಬಿಟ್ಟು ಕೊಡ್ತಾರೋ ಅಥವಾ ಯಾರನ್ನು ಪಕ್ಷ ಖುರ್ಚಿಯಲ್ಲಿ ಕೂರಿಸ್ತಾರೆ ನಮಗೆ ಬೇಡದ ವಿಚಾರ. ಸಿಎಂ ಆಗಬೇಕೆಂದುಕೊಂಡವರು ಎರಡೂವರೆ ವರ್ಷದಿಂದ ಅಧಿಕಾರದಲ್ಲಿದ್ದಾರೆ. ಸಹಿ ಹಾಕಿಸಿಕೊಂಡು ಹಣ ಕೊಳ್ಳೆ ಹೊಡೆದಿದ್ದಾರೆ. ಸಿಎಂ ಸ್ಥಾನ ಸಿಗದಿದ್ದರೆ ಇವರು ಅಧಿಕಾರ ಬಿಡ್ತಾರಾ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷ ಕಳೆದಿದೆ. ಸರ್ಕಾರದ ಸಾಧನೆಗಳನ್ನು ಪತ್ರಿಕೆಗಳ ಮುಖಪುಟಗಳ ಜಾಹಿರಾತುಗಳಲ್ಲಿ ನೋಡಲು ಮಾತ್ರ ಸಾಧ್ಯ. ಕಾಂಗ್ರೆಸ್ ಸರ್ಕಾರದ ಮಹಾನ್ ಸಾಧನೆ ಎಂದರೆ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿರುವ ಕೀರ್ತಿಯಾಗಿದೆ. ಈ ಅವಧಿಯಲ್ಲಿಯೇ 5.5 ಲಕ್ಷ ಕೋಟಿ ರು. ಸಾಲ ಮಾಡಿ ರಾಜ್ಯವನ್ನು ದಿವಾಳಿಯನ್ನಾಗಿ ಮಾಡುತ್ತಿದೆ ಎಂದು ದೂರಿದರು.
ಗ್ಯಾರಂಟಿ ಯೋಜನೆ ಮೂಲಕ ಆಯಾ ತಿಂಗಳು ಹಣ ಕೊಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಮಹಿಳೆಯರಿಗೆ ಹಣ ಕೊಟ್ಟಿಲ್ಲ. ಯುವನಿಧಿ ಕೊಟ್ಟಿದ್ದಿರಾ?. ಚುನಾವಣೆ ಸಂದರ್ಭದಲ್ಲಿ ದುಡ್ಡು ಬಿಡುಗಡೆ ಮಾಡುತ್ತಾರೆ. ಯಾವ ರೀತಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಈ ಸರ್ಕಾರದಿಂದ ಬಡವರು, ರೈತರು, ಮಧ್ಯಮ ವರ್ಗದವರು ಬದಕಲು ಆಗುತ್ತಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.