ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಪ್ರಕಟಿಸಿದ ಸಿದ್ದರಾಮಯ್ಯ

By Suvarna NewsFirst Published Jul 6, 2021, 2:51 PM IST
Highlights

* ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೇ ಮಾಡುತ್ತಾರೆ ಎನ್ನುವ ಗೊಂದಲಕ್ಕೆ ತೆರೆ
* ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಘೋಷಣೆ ಮಾಡಿದ ಸಿದ್ದು
* ಕ್ಷೇತ್ರಕ್ಕೆ ಹೋಗ್ತಾರೆ, ಈ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ಊಹಾಪೋಹಗಳಿಗೆ ಸ್ಪಷ್ಟತೆ

ಬೆಂಗಳೂರು, (ಜುಲೈ.06): ಮುಂದಿನ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೇ ಮಾಡುತ್ತಾರೆ ಎನ್ನುವ ಗೊಂದಲಕ್ಕೆ ತೆರೆಬಿದ್ದಿದೆ.

ಬೆಂಗಳೂರಿನ ಚಾಮರಾಜಪೇಟೆಯಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬಾದಾಮಿ ಕ್ಷೇತ್ರದ ನೂರಾರು ಬೆಂಬಲಿಗರು ಸಿದ್ದರಾಮಯ್ಯ ನಿವಾಸಕ್ಕೆ ಲಗ್ಗೆ ಹಾಕಿದ್ದು, ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ಬಾದಾಮಿಯ ನಾಯಕರಿಂದ ಸಿದ್ದರಾಮಯ್ಯ ಭೇಟಿ

ಈ ವೇಳೆ ಮುಂದಿನ ಸ್ಪರ್ಧೆ ಕ್ಷೇತ್ರದ ಬಗ್ಗೆ ಸ್ಪಷ್ಟಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಾದಾಮಿ ಜನತೆ ನನ್ನ ಮೇಲೆ ನಂಬಿಕೆಯಿಟ್ಟು ಆರಿಸಿ ತಂದಿದ್ದಾರೆ. ಅವರನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ನಾನು ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಕೋಲಾರ, ಕೊಪ್ಪಳ, ಚಾಮರಾಜಪೇಟೆ ಹೀಗೆ ಹಲವು ಕ್ಷೇತ್ರಗಳಿಂದ ನನಗೆ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಆದರೆ ನನ್ನ ಆಯ್ಕೆ ಬಾದಾಮಿ ಕ್ಷೇತ್ರ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಾಗಲೂ ನಾನು ಸ್ಪಷ್ಟಪಡಿಸಿದ್ದೆ. ಮುಂದಿನ ಚುನಾವಣೆಯಲ್ಲಿಯೂ ನಾನು ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು. ಹಾಗಾಗಿ ಕ್ಷೇತ್ರದ ಜನತೆಗೆ ಯಾವುದೇ ಆತಂಕ ಬೇಡ ನಾನು ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. 

'ನಾನು ಚಾಮರಾಜಪೇಟೆ ಅಳಿಯ, ಇಲ್ಲಿ ನನ್ನ ಮಾವನ ಮನೆಯಿತ್ತು, ಈಗಲೂ ಇದೆ' 

ಸಿದ್ದರಾಮಯ್ಯ ಘೋಷಣೆ ಬೆನ್ನಲ್ಲೇ ಬೆಂಬಲಿಗರು ಕೇಕೆ ಹೊಡೆದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಇದರೊಂದಿಗೆ ಸಿದ್ದರಾಮಯ್ಯ ಅವರು ಆ ಕ್ಷೇತ್ರಕ್ಕೆ ಹೋಗ್ತಾರೆ, ಈ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ಊಹಾಪೋಹಗಳಿಗೆ ಸ್ಪಷ್ಟತೆ ಸಿಕ್ಕಂತಾಗಿದೆ.
 

click me!