ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ: ಮನದಾಸೆ ವ್ಯಕ್ತಪಡಿಸಿದ ಬೊಮ್ಮಾಯಿ

By Kannadaprabha News  |  First Published Mar 22, 2023, 9:49 AM IST

ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ. 


ಬಾಗಲಕೋಟೆ (ಮಾ.22): ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ. ಮುಧೋಳದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಆಗ ವಿವಿಧ ಕ್ಷೇತ್ರಗಳಿಗೆ ಮತ್ತೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಯಾರಾಗಬೇಕೆಂದು ಪಕ್ಷ ತೀರ್ಮಾನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಬೊಮ್ಮಾಯಿ ಅವರು ಈ ರೀತಿ ಹೇಳಿರುವುದು ಬಿಜೆಪಿಯಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ವರಿಷ್ಠರು ಈಗಾಗಲೇ ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ಘೋಷಿಸಿದ್ದಾರೆ. 

Tap to resize

Latest Videos

undefined

ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಕಾಯ್ದೆ ಬೋಗಸ್‌: ಸುರ್ಜೇವಾಲಾ ಆರೋಪ

ಈ ಮಧ್ಯೆ, ಸಾರಿಗೆ ಸಚಿವ ಶ್ರೀರಾಮುಲು ಅವರು ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅನೇಕ ಬಾರಿ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಸೇರಿ ರಾಜ್ಯದ ಉಳಿದ ಪ್ರಮುಖ ಬಿಜೆಪಿ ನಾಯಕರಾರ‍ಯರೂ ಮುಂದಿನ ಬಾರಿ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಚುನಾವಣಾ ಪ್ರಚಾರ ಶುರುವಾದ ಬಳಿಕ ಬೊಮ್ಮಾಯಿ ಅವರೂ ನಾನೇ ಮುಂದಿನ ಮುಖ್ಯಮಂತ್ರಿ ಆಗಲಿದ್ದೇನೆ ಎಂದಿರುವುದು ಇದೇ ಮೊದಲು.

ಬೊಮ್ಮಾಯಿಗೆ ಫೋನ್‌ ಕಾಟ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನನರಗೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಮಂಗಳವಾರ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರು ಬಾರಿ ವೇದಿಕೆಯಲ್ಲಿನ ಮೈಕ್‌ ಬಂದ್‌ ಮಾಡಿಸಿ ಫೋನ್‌ನಲ್ಲಿ ಮಾತನಾಡಿದ ಪ್ರಸಂಗ ನಡೆದಿದೆ. ನಾಲತವಾಡದ ಶರಣ ವೀರೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆಗೆ ಬರುತ್ತಿದ್ದಂತೆ ಮೊಬೈಲ್‌ನಲ್ಲಿ ಮಾತನಾಡುತ್ತ ಬ್ಯುಸಿಯಾದರು. 

ಮೊದಲ ಬಾರಿ ಫೋನ್‌ ರಿಂಗಣಿಸಿದಾಗ ಕಾರ್ಯಕ್ರಮದ ನಿರೂಪಕರಿಗೆ ಮಾತನಾಡಲು ನಿಲ್ಲಿಸಲು ಸೂಚಿಸಿದ ಸಿಎಂ, ಫೋನ್‌ನಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಫೋನ್‌ನಲ್ಲಿ ಮಾತು ಮುಗಿಸುತ್ತಿದ್ದಂತೆಯೇ ಮತ್ತೆ ಕಾರ್ಯಕ್ರಮ ಮುಂದುವರಿಯಿತು. ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ಮುಗಿಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಮತ್ತೆ ಫೋನ್‌ ಕರೆ ಬಂತು. ಆಗ ಸಿಎಂ ಮತ್ತೆ ಫೋನ್‌ನಲ್ಲಿ ಬ್ಯುಸಿಯಾದರು. ಇದಾದ ಬಳಿಕ ಕುಡಿಯುವ ನೀರಿಗಾಗಿ ಹೋರಾಟ ನಡೆಸಿದ್ದ ಬಸವರಾಜ ನಂದಿಕೇಶ್ವರಮಠ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸುವ ವೇಳೆಯೂ ಫೋನ್‌ ಕರೆ ಬಂತು. 

ಏರುದನಿಯಲ್ಲಿ ಮಾತಾಡ್ಬೇಡಿ: ಕಸಾಪ ಮಾರ್ಗಸೂಚಿ ಹೊರಡಿಸಿದ ಮಹೇಶ್‌ ಜೋಶಿ

ಆಗಲೂ ಫೋನ್‌ನಲ್ಲಿ ಬ್ಯುಸಿಯಾದರು. ಫೋನ್‌ನಲ್ಲಿ ಮಾತನಾಡುತ್ತಲೇ ಸನ್ಮಾನ ನೆರವೇರಿಸಿದರು. ಒಟ್ಟಿನಲ್ಲಿ ನಾಲತವಾಡ ಪಟ್ಟಣದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಿರಾಳವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಫೋನ್‌ ಬಿಡಲಿಲ್ಲ. ಬಹುಶಃ ಚುನಾವಣೆ ಸಂಬಂಧ ಮುಖ್ಯಮಂತ್ರಿಗಳಿಗೆ ಕೇಂದ್ರದ ವರಿಷ್ಠರಿಂದ ಕರೆ ಬಂದಿರಬೇಕು. ಸಾಮಾನ್ಯ ಕರೆ ಆಗಿದ್ದರೆ ಅವರು ಎತ್ತುತ್ತಲೇ ಇರಲಿಲ್ಲ ಎಂದು ವೇದಿಕೆ ಎದುರು ಕುಳಿತ ಸಭಿಕರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಿದ್ದು ಕೇಳಿಬಂತು.

click me!