ದೇಶದ ಆದರ್ಶ ರಾಜಕಾರಣಿ ಎಸ್‌.ಎಂ.ಕೃಷ್ಣ: ಎಂಎಲ್‌ಸಿ ದಿನೇಶ್‌ ಗೂಳಿಗೌಡ

By Kannadaprabha News  |  First Published Mar 22, 2023, 9:01 AM IST

ಪ್ರಜಾಪ್ರಭುತ್ವದ ನಾಲ್ಕೂ ಸದನಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಇಂದು ಸಂಜೆ 6 ಗಂಟೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ 2ನೇ ಅತ್ಯುಚ್ಚ ನಾಗರಿಕ ಪುರಸ್ಕಾರವಾಗಿರುವ ‘ಪದ್ಮವಿಭೂಷಣ’ವನ್ನು ಪ್ರದಾನ ಮಾಡಲಾಗುತ್ತಿದೆ. ತನ್ನಿಮಿತ್ತ ಎಸ್‌.ಎಂ.ಕೃಷ್ಣ ವಿಶೇಷ ಲೇಖನ.


ದಿನೇಶ್‌ ಗೂಳಿಗೌಡ, ವಿಧಾನ ಪರಿಷತ್‌ ಸದಸ್ಯ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿತಮ್ಮ ಅಪಾರ ವಿದ್ವತ್‌, ಸುದೀರ್ಘ ಅನುಭವದ ಮೂಲಕ ಆಡಳಿತದಲ್ಲಿ ಹಲವು ಹೆಗ್ಗುರುತು ಮೂಡಿಸಿ ಜನನಾಯಕರಾಗಿ ರೂಪುಗೊಂಡವರು ಎಸ್‌.ಎಂ.ಕೃಷ್ಣ. ಮದ್ದೂರು ಜನರ ಪಾಲಿನ ಪ್ರಾತಃಸ್ಮರಣೀಯ ಜನಾನುರಾಗಿ ದಿವಂಗತ ಎಸ್‌.ಸಿ.ಮಲ್ಲಯ್ಯ ಮತ್ತು ಶ್ರೀಮತಿ ತಾಯಮ್ಮ ಅವರ ಏಳನೇ ಮಗನಾಗಿ 1932ರಲ್ಲಿ ಜನಿಸಿದ ಎಸ್‌.ಎಂ.ಕೃಷ್ಣ ಅವರು 1962ರಲ್ಲಿ ಪ್ರಥಮ ಬಾರಿಗೆ ಶಾಸನ ಸಭೆ ಪ್ರವೇಶಿಸಿದರು. ಆ ನಂತರ ರಾಷ್ಟ್ರದ ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಕಳೆದ ಅರವತ್ತು ವರ್ಷಗಳ ಕಾಲ ನಾಡಿನ, ರಾಷ್ಟ್ರದ ಸೇವೆಗೈದ ಅವರು ತಾವು ನಿರ್ವಹಿಸಿದ ಪ್ರತಿ ಹುದ್ದೆಯಲ್ಲೂ ಹೆಜ್ಜೆ ಗುರುತು ಮೂಡಿಸಿದವರು.

Tap to resize

Latest Videos

ಅಂದಿನ ಕಾಲಘಟ್ಟದಲ್ಲಿಯೇ ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿ ಅಮೆರಿಕದಿಂದ ಸ್ವಗ್ರಾಮಕ್ಕೆ ಆಗಮಿಸಿದಾಗ ಮದ್ದೂರು ರೈಲ್ವೆ ನಿಲ್ದಾಣದಿಂದ ಹುಟ್ಟೂರು ಸೋಮನಹಳ್ಳಿವರೆಗೆ ತಳಿರು- ತೋರಣಗಳಿಂದ ಸಿಂಗರಿಸಿ ಕೃಷ್ಣ ಅವರನ್ನು ಸ್ವಾಗತಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ದೇಶ ಕಂಡ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾದ ಕೃಷ್ಣ ಅವರನ್ನು ವಿಶಿಷ್ಟಸ್ಥಾನದಲ್ಲಿ ಕಾಣಬಹುದು. ಅವರ ಸಜ್ಜನ ವ್ಯಕ್ತಿತ್ವ, ಸಾರ್ವಜನಿಕ ನಡವಳಿಕೆ, ಮಾತಿನ ಶೈಲಿ, ಜನರನ್ನು ಪ್ರೀತಿಯಿಂದ ನೋಡುವ ರೀತಿ, ಗೌರವಿಸುವ ಪರಿ ಎಂಥವರನ್ನೂ ಮೋಡಿ ಮಾಡಬಲ್ಲದು. ತಮ್ಮ ಬಾಲ್ಯ ಜೀವನದಲ್ಲಿ ರಾಮಕೃಷ್ಣ ಆಶ್ರಮದಿಂದ ಪ್ರಭಾವಿತರಾಗಿದ್ದ ಕೃಷ್ಣ ಅವರು ಎಂದು ಸೋಲಿಗೆ ಕುಗ್ಗಲಿಲ್ಲ, ಗೆದ್ದಾಗ ಬೀಗಲಿಲ್ಲ.

ಸ್ವಾವ​ಲಂಬಿ ದೇಶಕ್ಕೆ ಬುನಾದಿ ಹಾಕಿದ ವಾಜಪೇಯಿ: ಸಚಿ​ವ ನಾಗೇ​ಶ್‌

ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದವರು: ಇಂದು ಅವರ ಗರಡಿಯಲ್ಲಿ ಪಳಗಿದ ಅದೆಷ್ಟೋ ಮಂದಿ ರಾಜಕೀಯ ಕ್ಷೇತ್ರದಲ್ಲಿ ಹಲವು ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಆಡಳಿತ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನು ಅಳವಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಬ್ಬ ಆದರ್ಶ ರಾಜಕಾರಣಿಯಾಗಿ ಪ್ರಭಾವ ಬೀರಿದವರು ಕೃಷ್ಣ. ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದ, ಐಟಿ-ಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಎಸ್‌.ಎಂ. ಕೃಷ್ಣ ಅವರು ರಾಷ್ಟ್ರಮಟ್ಟದಲ್ಲಿಯೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದಾರೆ. ಅವರ ಸುದೀರ್ಘ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅವರ ರಾಜಕೀಯ ಪಯಣ ಇಂದಿನ ಯುವ ಜನಾಂಗಕ್ಕೆ ಮಾದರಿ. ಕೃಷ್ಣ ಅವರು ತಮ್ಮ ವಿರೋಧಿಗಳ ಬಗ್ಗೆ ಟೀಕೆ ಮಾಡಿದರೂ ಅದು ಸದಭಿರುಚಿಯಿಂದ ಕೂಡಿರುತ್ತದೆ. ಯಾರ ಮನಸ್ಸಿಗೂ ಘಾಸಿ ಮಾಡದೆ ಜನ ಮೆಚ್ಚುವ ರೀತಿ ಹೇಳಿಕೆಗಳನ್ನು ನೀಡುವುದನ್ನು ರೂಢಿಸಿ ಕೊಂಡಿರುವ ಕೃಷ್ಣರಂತಹ ನಾಯಕರು ಇಂದಿನ ರಾಜಕಾರಣದಲ್ಲಿ ವಿರಳಾತಿ ವಿರಳ.

ಪದ್ಮವಿಭೂಷಣ ಮಂಡ್ಯ ಜಿಲ್ಲೆಗೆ ಕೀರ್ತಿ: ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದಂತಹ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದು ಮಂಡ್ಯ ಜಿಲ್ಲೆಯ ಜನರಿಗೆ ಒಂದು ಅಭಿಮಾನ ಹಾಗೂ ಕೀರ್ತಿಯೇ ಸರಿ. ಮಂಡ್ಯ ಜಿಲ್ಲೆಯ ಅಸ್ತಿತ್ವಕ್ಕೆ ಕಾರಣೀಭೂತರಾದ ಎಸ್‌.ಸಿ.ಮಲ್ಲಯ್ಯ ಅವರ ಸುಪುತ್ರರಾದ ಕೃಷ್ಣ ಅವರು ತಂದೆಯ ಪ್ರಭಾವದಿಂದಾಗಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರು. ಅಂದು ರಾಜ್ಯದ ಲೋಕೋಪಯೋಗಿ ಸಚಿವರಾಗಿ, ಮುಖ್ಯಮಂತ್ರಿ ಪದವಿಯ ಸನಿಹದಲ್ಲಿದ್ದ ಎಚ್‌.ಕೆ. ವೀರಣ್ಣಗೌಡ ಅವರನ್ನು ಮಣಿಸಿ ಶಾಸನಸಭೆ ಪ್ರವೇಶಿಸಿ ರಾಜ್ಯ ಹಾಗೂ ರಾಷ್ಟ್ರದ ಹಲವು ನಾಯಕರ ಸಂಪರ್ಕದಿಂದ ಯಶಸ್ವಿ ನಾಯಕರಾಗಿ ಮಂಡ್ಯ ಜಿಲ್ಲೆ, ಕರುನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ

ಭಾರತಕ್ಕೆ ಬಂದ ನಂತರ ಅವರು 1962ರಲ್ಲಿ ಮದ್ದೂರು ವಿಧಾನಸಭಾ ಶಾಸಕರಾಗಿ ಆಯ್ಕೆಯಾದರು. ಪೂರಕ ಬಜೆಟ್‌ ಮೇಲೆ ಎಸ್‌.ಎಂ. ಕೃಷ್ಣ ಅವರು ಮಾಡಿದ ಭಾಷಣವು ಕರ್ನಾಟಕದ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಥಳೀಯ ಅಭ್ಯರ್ಥಿಗಳ ಬದುಕು ಅತಂತ್ರವಾಗಿದ್ದರ ಬಗ್ಗೆ ಗಮನ ಸೆಳೆದಿದ್ದರು. ಅಂತಹ ಅಭ್ಯರ್ಥಿಗಳನ್ನು ಕಾಯಂ ಮಾಡುವಂತೆ ಒತ್ತಾಯಿಸಿದ್ದರು. ಇದರ ಫಲವಾಗಿ ಸ್ಥಳೀಯ ಉಪನ್ಯಾಸಕರನ್ನು ಸರ್ಕಾರ ಕಾಯಂ ಮಾಡಿತು. ಈ ಮೂಲಕ ರಾಜ್ಯದ ಅದೆಷ್ಟೋ ಉಪನ್ಯಾಸಕ ಕುಟುಂಬಗಳಿಗೆ ಭದ್ರತೆ ದೊರೆಯಲು ತಮ್ಮ ಚೊಚ್ಚಲ ಭಾಷಣದಲ್ಲಿಯೇ ಕಾರಣರಾದರು.

ಮಂಡ್ಯ ಟು ಇಂಡಿಯಾ ಪಯಣ: 1968ರಲ್ಲಿ ಅವರು ಮೊದಲ ಬಾರಿಗೆ ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾದರು. 1971ರಿಂದ 2014ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಈ ನಡುವೆ 1983ರಲ್ಲಿ ಕೇಂದ್ರ ಕೈಗಾರಿಕಾ ಸಚಿವರಾಗಿದ್ದ ಅವರು ಕೈಗಾರಿಕೆಗಳ ಏಳಿಗೆ ಬಗ್ಗೆ ಸಾಕಷ್ಟುಶ್ರಮ ವಹಿಸಿದ್ದರು. ದೇಶದ ಪ್ರತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಬಡಾವಣೆಗಳ ಸ್ಥಾಪನೆಗೆ ಮುಂದಾದರು. ಇದರ ಫಲವನ್ನು ಬಿಹಾರ, ಒಡಿಶಾ ಸೇರಿದಂತೆ ಹಲವು ರಾಜ್ಯಗಳು ಪಡೆದುಕೊಂಡವು. 1999ರಿಂದ 2004ರವರೆಗೆ ಕೃಷ್ಣ ಅವರು ಮುಖ್ಯಮಂತ್ರಿಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಅವರ ಕಾಲಘಟ್ಟದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಯೋಜನೆಗಳು ಇಂದಿಗೂ ಜಾರಿಯಲ್ಲಿವೆ. 

ಇದು ಕೃಷ್ಣ ಅವರ ದೂರದೃಷ್ಟಿಯ ಫಲ. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳು. ಐಟಿ​-ಬಿಟಿ ಕ್ಷೇತ್ರಕ್ಕೆ ಅಗಾಧವಾದ ಬೆಂಬಲ ನೀಡಿ ಬೆಂಗಳೂರು ನಗರದ ಬೆಳವಣಿಗೆಗೆ ಹಾಕಿಕೊಟ್ಟಭದ್ರ ಬುನಾದಿಯಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್‌ ವ್ಯಾಲಿ ಎಂದು ಹೆಸರು ಗಳಿಸಿ ಅಮೆರಿಕದ ಕ್ಯಾಲಿಪೋರ್ನಿಯಾ ನಗರಕ್ಕೆ ಪರ್ಯಾಯವಾಗಿ ಹೆಸರು ಗಳಿಸಿತ್ತು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ರು. ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣ ಅವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೇ ಕಾರಣ. ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಹಲವು ಮೂಲಭೂತ ಸೌಕರ್ಯಗಳನ್ನು ನೀಡಿ ಕನ್ನಡ ನಾಡನ್ನು ವಿಶ್ವ ಭೂಪಟದಲ್ಲಿ ಬೆಳಗಿಸಲು ಕೃಷ್ಣ ಅವರ ಪಾತ್ರ ಅತ್ಯಂತ ಹಿರಿದಾದದ್ದು.

80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ: ಎಸ್‌.ಎಂ.ಕೃಷ್ಣ ಅವರು 2009 ರಿಂದ 2012 ರವರೆಗೆ ಮನಮೋಹನ ಸಿಂಗ್‌ ಸರ್ಕಾರದಲ್ಲಿ ಭಾರತದ 72ನೇ ವಿದೇಶಾಂಗ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲದೆ, ಪಾಕಿಸ್ತಾನ, ಚೀನಾ, ಬ್ರಿಟನ್‌, ರಷ್ಯಾ, ದಕ್ಷಿಣ ಆಫ್ರಿಕಾ ದೇಶಗಳ ಜತೆ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಇದೆಲ್ಲದರ ಜತೆಗೆ ಅಮೆರಿಕದ ಆಗಿನ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್‌ ಜತೆ ಸಹ ರಾಜತಾಂತ್ರಿಕ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಂಡಿದ್ದರು. ಇದಲ್ಲದೆ, ದ್ವಿಪಕ್ಷೀಯ ಸಂಬಂಧ ಸೇರಿದಂತೆ ಜಾಗತಿಕ ವಿಷಯವಾಗಿ ಹಲವು ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವನ್ನು ಸಮರ್ಥವಾಗಿ ಪ್ರತಿಪಾದಿಸಿದ್ದ ಎಸ್‌.ಎಂ. ಕೃಷ್ಣ ಅವರು, ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಬೇಕು ಎಂದು ಒತ್ತಾಯಿಸಿದ್ದರು. ಈ ಮೂಲಕ ಭಾರತ ಸಹ ಎಲ್ಲ ದೇಶಗಳಂತೆ ಸಮರ್ಥವಾದ ದೇಶ ಹಾಗೂ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದುಕೊಳ್ಳುವ ಎಲ್ಲ ಅರ್ಹತೆ ಇದೆ ಎಂದು ಪ್ರತಿಪಾದಿಸಿದ್ದರು. ಇನ್ನು ಶತ್ರು ದೇಶ ಎಂದೇ ಕರೆಯಲ್ಪಡುವ ಪಾಕಿಸ್ತಾನದ ಜತೆ ಬಾಂಧವ್ಯ ವೃದ್ಧಿಗಾಗಿ ಎಸ್‌ಎಂಕೆ ಅವರು ಸಾಕಷ್ಟುಪ್ರಯತ್ನಪಟ್ಟಿದ್ದರು. ಇನ್ನು ಚೀನಾದ ಜತೆಯೂ ಉತ್ತಮ ಸಂಬಂಧ ಹೊಂದಲು ಆದ್ಯತೆಯ ಹೆಜ್ಜೆಯನ್ನಿಟ್ಟಿದ್ದರು.

ದೇಶದ ಇಚ್ಛಾಶಕ್ತಿಗೆ ಸಾಕ್ಷಿ ನಮಾಮಿ ಗಂಗೆ ಯಶಸ್ಸು: ಕೇಂದ್ರ ಸಚಿವ ಗಜೇಂದ್ರ ಸಿಂಗ್‌

ಪಾಸ್‌ಪೋರ್ಟ್‌ ಪ್ರಕ್ರಿಯೆ ಸರಳ ಮಾಡಿದರು: ಈಗ ನಾವು ಪಾಸ್‌ಪೋರ್ಟ್‌ ಅನ್ನು ಬಹಳ ಸುಲಭವಾಗಿ ಹಾಗೂ ಸರಳವಾಗಿ ಪಡೆದುಕೊಂಡು ಬಿಡುತ್ತೇವೆ. ಆದರೆ, ಆಗ ಪಾಸ್‌ಪೋರ್ಟ್‌ ಪಡೆದುಕೊಳ್ಳುವ ಪ್ರಕ್ರಿಯೆ ಅಷ್ಟುಸರಳವಾಗಿರಲಿಲ್ಲ. ಇದಕ್ಕಾಗಿ ಸಾಕಷ್ಟುಪ್ರಕ್ರಿಯೆಗಳಿದ್ದವು. ಇವುಗಳನ್ನು ಪೂರೈಸುವಷ್ಟರಲ್ಲಿ ಜನರು ಹೈರಾಣಾಗಿಬಿಡುತ್ತಿದ್ದರು. ಈ ಸಮಸ್ಯೆ ಎಸ್‌ಎಂಕೆ ಗಮನಕ್ಕೆ ಬಂದಿತ್ತು. ಈ ಕಾರಣಕ್ಕಾಗಿಯೇ ಅವರು ಪಾಸ್‌ಪೋರ್ಟ್‌ ನೀತಿಯನ್ನು ಸರಳೀಕರಣಗೊಳಿಸಲು ಮುಂದಾದರು. ಜತೆಗೆ ಆಧುನೀಕರಣಗೊಳಿಸಿದರು. ಹೀಗಾಗಿ ದೇಶದ ವಿವಿಧ ಕಡೆ 77 ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ತೆರೆದರು. ಇನ್ನು ಪಾಸ್‌ಪೋರ್ಟ್‌ ನೀಡಿಕೆಯಲ್ಲಿ ಸಾಕಷ್ಟುವಿಳಂಬವಾಗುತ್ತಿದ್ದ ದೂರಿಗೆ ಪರಿಹಾರವನ್ನು ಕಂಡುಕೊಳ್ಳಲು ಇ-ಗವರ್ನೆನ್ಸ್‌ ಕಾರ್ಯಕ್ರಮವನ್ನು ಜಾರಿಗೆ ತಂದರು. ಇದರ ಮೂಲಕ ಪಾಸ್‌ಪೋರ್ಟ್‌ ನೀಡಿಕೆಗೆ ವ್ಯವಸ್ಥೆ ಮಾಡಿದರು. ಇದು ಕೋಟ್ಯಂತರ ಭಾರತೀಯರಿಗೆ ಅನುಕೂಲವಾಯಿತು. ಸಕಾಲದಲ್ಲಿ ಅಗತ್ಯವಿದ್ದವರು ಪಾಸ್‌ಪೋರ್ಟ್‌ಗಳನ್ನು ಪಡೆದುಕೊಳ್ಳುವಂತಾಯಿತು. ಇದರ ಸಂಪೂರ್ಣ ಕೀರ್ತಿ ಎಸ್‌ಎಂಕೆ ಅವರಿಗೆ ಸಲ್ಲಬೇಕು.

ಇನ್ನು ಈ ವಿಷಯವಾಗಿ ಕೃಷ್ಣ ಅವರ ಬಗ್ಗೆ ಹೇಳಲೇಬೇಕು. ಅವರ ಕಾರ್ಯತತ್ಪರತೆ ಬಗ್ಗೆ ತಿಳಿಸಲೇಬೇಕು. 2011ರಲ್ಲಿ ಲಿಬಿಯಾ ಕ್ರಾಂತಿ ಪ್ರಾರಂಭವಾಗಿತ್ತು. ಇದರಿಂದ ಅಲ್ಲಿದ್ದ ಸರಿಸುಮಾರು 18 ಸಾವಿರ ಭಾರತೀಯರ ಜೀವ-ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಆಗ, ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಎಸ್‌ಎಂಕೆ ಮಹತ್ವದ ಪಾತ್ರವನ್ನು ವಹಿಸಿದ್ದರು. ನಿರಂತರ ಸಂಪರ್ಕದಲ್ಲಿದ್ದುಕೊಂಡು ಸುರಕ್ಷತೆಗೆ ಬಹಳವೇ ಆದ್ಯತೆಯನ್ನು ನೀಡಿದ್ದರು. ಇನ್ನು ಎಸ್‌.ಎಂ.ಕೃಷ್ಣ ಅವರು 2004ರಿಂದ 2008 ರವರೆಗೆ ದೇಶದ ಗೌರವಯುತ ಸಾಂವಿಧಾನಿಕ ಹುದ್ದೆಯನ್ನೂ ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡರು. ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ ಅವರು 4 ವರ್ಷ ಸೇವೆ ಸಲ್ಲಿಸಿದ್ದರು. ಹೀಗೆ ಎಸ್‌ಎಂಕೆ ಅವರ ಸೇವೆ ಈ ಇಡೀ ದೇಶಕ್ಕೆ ಬಹಳ ದೊಡ್ಡದಿದೆ. ಇಂಥ ಸಂದರ್ಭದಲ್ಲಿ ಅವರು ರಾಷ್ಟ್ರದ ಎರಡನೇ ಅತ್ಯುನ್ನತ ಗೌರವವಾಗಿರುವ ಪದ್ಮವಿಭೂಷಣಕ್ಕೆ ಭಾಜನರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇದು ಇಡೀ ಮಂಡ್ಯಕ್ಕೆ ಹಾಗೂ ಇಂಡಿಯಾಕ್ಕೆ ಸಂದ ಗೌರವ ಎಂದು ಹೇಳಲು ಬಯಸುತ್ತೇನೆ.

click me!