ನನ್ನ ಆಸೆ ಮಂಡ್ಯಕ್ಕೆ ಬಿಜೆಪಿ ಮೊದಲ ಸಂಸದೆ ನಾನಾಗಬೇಕು ಅಂತ, ಇದ್ರಲ್ಲಿ ತಪ್ಪೇನಿದೆ?. ಜೊತೆಗೆ ಬಿಜೆಪಿ ಈ ಸೀಟ್ ತನ್ನಲ್ಲೇ ಉಳಿಸಿಕೊಳ್ಳುತ್ತೆ ಎಂಬ ನಂಬಿಕೆ ನನಗೆ ಇದೆ’ ಎಂದು ಹೇಳಿದ ಹಾಲಿ ಸಂಸದೆ ಸುಮಲತಾ
ನವದೆಹಲಿ(ಜ.31): ಬಿಜೆಪಿ- ಜೆಡಿಎಸ್ ಮೈತ್ರಿಯ ಫಲವಾಗಿ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಬಹುದು ಎಂಬ ವರದಿಗಳ ನಡುವೆಯೇ, ತಮಗೆ ಮಂಡ್ಯದ ಮೊದಲ ಬಿಜೆಪಿ ಸಂಸದೆಯಾಗುವ ಆಸೆಯಿದೆ ಎಂದು ಹಾಲಿ ಸಂಸದೆ ಸುಮಲತಾ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ‘ನನ್ನ ಆಸೆ ಮಂಡ್ಯಕ್ಕೆ ಬಿಜೆಪಿ ಮೊದಲ ಸಂಸದೆ ನಾನಾಗಬೇಕು ಅಂತ, ಇದ್ರಲ್ಲಿ ತಪ್ಪೇನಿದೆ?. ಜೊತೆಗೆ ಬಿಜೆಪಿ ಈ ಸೀಟ್ ತನ್ನಲ್ಲೇ ಉಳಿಸಿಕೊಳ್ಳುತ್ತೆ ಎಂಬ ನಂಬಿಕೆ ನನಗೆ ಇದೆ’ ಎಂದು ಹೇಳಿದರು.
ಮಂಡ್ಯದ ಹನುಮಧ್ವಜ ವಿವಾದಿತ ಕೆರಗೋಡು ಗ್ರಾಮಕ್ಕೆ ನಾನು ಬೇಕಂತಲೇ ಹೋಗಿಲ್ಲ; ಸಂಸದೆ ಸುಮಲತಾ
ಇದೇ ವೇಳೆ ‘2018 ವಿಧಾನಸಭಾ ಚುನಾವಣೆಯ ಫಲಿತಾಂಶ ನೋಡಿದರೆ ಬಿಜೆಪಿಗೆ ಎಷ್ಟು ಶೇಕಡವಾರು ಮತ ಬಂದಿದೆ ಅಂತ ಗೊತ್ತಾಗುತ್ತೆ. ಆದರೂ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳೇ ಬೇರೆ ಬೇರೆ ಮೋದಿಯವರ ಶಕ್ತಿ, ಬಿಜೆಪಿ ಇವೆಲ್ಲಾ ಬಳಸಿ ಮತ್ತೆ ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಅನ್ನೋ ಆಸೆ ನನಗಿದೆ’ ಎಂದು ಸುಮಲತಾ ಬಿಜೆಪಿ ಟಿಕೆಟ್‌ನಿಂದ ಕಣಕ್ಕೆ ಇಳಿಯುವ ಆಸೆ ವ್ಯಕ್ತಪಡಿಸಿದರು.
ಬೆಂಗಳೂರಿಂದ ಕಣಕ್ಕೆ:
ಈ ನಡುವೆ ಬೆಂಗಳೂರಿನಿಂದ ಕಣಕ್ಕೆ ಇಳಿಯುವ ಸಾಧ್ಯತೆ ಕುರಿತ ಪ್ರಶ್ನೆಗೆ, ‘ಇವೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಚರ್ಚೆ. ಈ ಬಗ್ಗೆ ನಾನೆಲ್ಲಿಯೂ ಮಾತಾಡಿಲ್ಲ, ನನ್ನ ಬಳಿಯೂ ಸಹ ಯಾರು ಕೇಳಿಲ್ಲ. ಆದರೂ ಎಲ್ಲಾ ಕಡೆ ಊಹಾಪೋಹ ಹರಿದಾಡುತ್ತಿದೆ. ಆದರೆ ನಾನು ಮಾತ್ರ ಮಂಡ್ಯ ಬಗ್ಗೆ ಗಮನ ಹರಿಸುತ್ತಿದ್ದೇನೆ’ ಎಂದು ಸುಮಲತಾ ಹೇಳಿದರು.