
ದೆಹಲಿ (ಫೆ.04): ತಮ್ಮ ವಿರುದ್ಧದ ಸಿ.ಡಿ. ಪ್ರಕರಣ ಒಂದು ಷಡ್ಯಂತ್ರವಾಗಿದ್ದು, ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದಿರುವ ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಈ ಸಂಬಂಧ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ದಾಖಲೆಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ‘ನಾನು ಹ್ಯಾಪಿ ಮೂಡ್‌ನಾಗ ಮನೆಗೆ ಹೊರಟೇನಿ. ಗುರುವಾರ ತಡರಾತ್ರಿ ಅಮಿತ್ ಶಾ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದ್ದೇನೆ. ಸಿ.ಡಿ. ಪ್ರಕರಣದ ಕುರಿತು ಅವರ ಜೊತೆ ಮಾತುಕತೆ ನಡೆಸಿದ್ದೇನೆ. ನಾನು ತಂದ ಎಲ್ಲಾ ದಾಖಲೆಗಳನ್ನು ಅವರಿಗೆ ಕೊಟ್ಟಿದ್ದೇನೆ. ನನ್ನೆಲ್ಲಾ ಅಹವಾಲನ್ನು ಅವರು ಸಂತಸದಿಂದ ಆಲಿಸಿದ್ದಾರೆ. ಮುಂದಿನ ಮಂಗಳವಾರ ಅಥವಾ ಬುಧವಾರ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ’ ಎಂದರು.
ಮೂರು ದಿನಗಳ ಹಿಂದೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಾರಕಿಹೊಳಿ, ಈ ಸಿ.ಡಿ. ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ತಂಡದ ಕೈವಾಡವಿದೆ. ಡಿಕೆಶಿಗೆ ಸಂಬಂಧಿಸಿದ ಸಿ.ಡಿ., ಸಾಕ್ಷ್ಯಗಳು ನನ್ನ ಬಳಿಯೂ ಇವೆ. ಇವೆಲ್ಲದರ ಬಗ್ಗೆ ಸಿಬಿಐನಿಂದ ತನಿಖೆಯಾಗಬೇಕು. ಇತ್ತೀಚೆಗೆ ಬೆಳಗಾವಿಗೆ ಆಗಮಿಸಿದ್ದ ಅಮಿತ್ ಶಾ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಈ ಸಂಬಂಧ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುವಂತೆ ಅವರು ಸೂಚನೆ ನೀಡಿದ್ದಾರೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಅವರು ದೆಹಲಿಗೆ ಆಗಮಿಸಿದ್ದರು.
ಸಿಬಿಐಗೆ ಸಿಡಿ ಕೇಸ್: ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿದ ರಮೇಶ್ ಜಾರಕಿಹೊಳಿ
ಅಮಿತ್ ಶಾ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದ್ದೇನೆ. ಸಿ.ಡಿ. ಪ್ರಕರಣದ ಬಗ್ಗೆ ಎಲ್ಲಾ ದಾಖಲೆ ನೀಡಿದ್ದೇನೆ. ಮುಂದಿನ ಮಂಗಳವಾರ ಅಥವಾ ಬುಧವಾರ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.
- ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.