
ಹೊಸಕೋಟೆ (ಏ.14): ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ, ಆದ್ದರಿಂದ ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ನಮ್ಮ ವರಿಷ್ಠರಿಗೆ ನಾನು ಪತ್ರ ಬರೆದು ಮನವಿ ಮಾಡಿದ್ದೆ. ಆದರೆ ಹೈಕಮಾಂಡ್ ನನಗೆ ಟಿಕೆಟ್ ಕೊಟ್ಟಿದೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. ತಾಲೂಕಿನ ಚಿಕ್ಕನಲ್ಲೂರಹಳ್ಳಿ ಗ್ರಾಮದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2004ರಲ್ಲಿ ಹೊಸಕೋಟೆ ಕ್ಷೇತ್ರಕ್ಕೆ ಬಂದು ತಾಲೂಕಿನ ಜನರ ಸೇವೆಯನ್ನು 19 ವರ್ಷ ಮಾಡಿದ್ದೇನೆ. ನಾನು ಈಗ ರಾಜಕೀಯ ನಿವೃತ್ತಿ ಪಡೆದು, ನನ್ನ ಮಗ ಜನಸೇವೆಗೆ ಮುಂದಾಗಲಿ ಎಂದು ನಿರ್ಧಾರ ಮಾಡಿ ಟಿಕೆಟ್ ಬೇಡ ಎಂದು ಪತ್ರ ಬರೆದಿದ್ದೆ.
ಆದರೂ ಹೈಕಮಾಂಡ್ ನನಗೆ ಟಿಕೆಟ್ ಕೊಟ್ಟು ಜನರ ಸೇವೆಗೆ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಮುಂದಿನ 5 ವರ್ಷದಲ್ಲಿ 20 ವರ್ಷಕ್ಕಾಗುವಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ನಾನು ಈ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯ ಮೆಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಅದೇ ಮುಂದಿನ ಗೆಲುವಿನ ಮುನ್ಸೂಚನೆ ಎಂದು ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್ ಮಾತನಾಡಿ, ಬಿಜೆಪಿ ಪಕ್ಷ ತತ್ವ ಸಿದ್ಧಾಂತದ ಮೇಲೆ ಕೆಲಸ ಮಾಡುವ ಪಕ್ಷವಾಗಿದೆ.
ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ತಲೆಬಿಸಿ: ಶಾಸಕ ಶರತ್ ಬಚ್ಚೇಗೌಡ
ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶವನ್ನು ಅಧೋಗತಿಗೆ ತಂದು ನಿಲ್ಲಿಸಿತ್ತು. ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ದೇಶ ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಒಡೆಯನಿಲ್ಲದ ಮನೆಯಾಗಿದೆ ಎಂದರು. ಗ್ರಾಪಂ ಸದಸ್ಯ ವೆಂಕಟೇಶ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡರು. ಬಮೂಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್, ಯುವ ಮುಖಂಡ ಕಿರಣ್, ಬಿಜೆಪಿ ಮುಖಂಡರಾದ ರವೀಂದ್ರನಾಥ್, ಶ್ರೀರಾಮ್, ಚೋಳಪ್ಪನಹಳ್ಳಿ ವಸಂತ್ ಮತ್ತಿತರ ಮುಖಂಡರು ಹಾಜರಿದ್ದರು.
ಹಣ ಪಡೆದಿದ್ದು ಸಾಬೀತು ಮಾಡಿದ್ರೆ ಮನೆಯಲ್ಲಿ ಜೀತ ಮಾಡ್ತೇನೆ: ನಾನು ಹಲವಾರು ದಶಕಗಳ ಕಾಲ ಬಚ್ಚೇಗೌಡರ ಕುಟುಂಬದ ಬೆಂಬಲಿಗನಾಗಿ ಅವರು ಆರೇಳು ಪಕ್ಷ ಬದಲಾವಣೆ ಮಾಡಿದಾಗಲು ಅವರ ಜೊತೆಯಲ್ಲೇ ಇದ್ದೆ. ಕಳೆದ ಬಾರಿ ಬಚ್ಚೇಗೌಡರ ಪುತ್ರ ಸ್ವಾಭಿಮಾನಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗಲೂ ಅವರ ಬೆಂಬಲಕ್ಕೆ ನಿಂತಿದ್ದೆ. ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಆದ್ದರಿಂದ ನಾವು ಕಾಂಗ್ರೆಸ್‌ಗೆ ಹೋಗದೆ ಎಂಟಿಬಿ ನಾಗರಾಜ್ ಅವರನ್ನು ಬೆಂಬಲಿಸಿದ ಪರಿಣಾಮ ಕೋಟಿ ಕೋಟಿ ಹಣ ಪಡೆದು ಬಿಜೆಪಿಗೆ ಹೋಗಿದ್ದಾರೆ.
ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್
ನಮ್ಮ ಬೆನ್ನಿಗೆ ಚೂರಿ ಹಾಕಿ ಹೋದ್ರೂ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ನಾನು ಹಣ ಪಡೆದು ಬಿಜೆಪಿ ಸೇರಿರುವುದು ಯಾರಾದರೂ ಸಾಬೀತು ಮಾಡಿದರೆ, ನಾನು ರಾಜಕೀಯ ಬಿಟ್ಟು ಅವರ ಮನೆಯಲ್ಲಿ ಜೀತ ಮಾಡ್ತೇನೆ ಎಂದು ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ಸವಾಲೆಸೆದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.