
ಶಿವಮೊಗ್ಗ (ಜೂ.19): ಕಾಂಗ್ರೆಸ್ ಸೇರಿದಂತೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ತಮ್ಮ ಪಕ್ಷಕ್ಕೆ ನನ್ನನ್ನು ಆಹ್ವಾನಿಸಿ, ವಿವಿಧ ಹುದ್ದೆಗಳ ಆಮಿಷವೊಡ್ಡಿದ್ದರು. ಕುತ್ತಿಗೆ ಕೊಯ್ದರೂ ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ನನ್ನನ್ನು ಆಹ್ವಾಸಿದ್ದರು. ಆದರೆ ನಾನು, ನಿಮ್ಮ ಪಕ್ಷವನ್ನು ಹಿಂದುತ್ವದ ಪಕ್ಷವನ್ನಾಗಿ ಬದಲಾಯಿಸಿದರೆ ಬರುತ್ತೇನೆ ಎಂದು ತಿರಸ್ಕಾರ ಮಾಡಿದೆ ಎಂದರು.
ಬಿಎಸ್‌ವೈ ಹಿರಿಯಣ್ಣ ಇದ್ದ ಹಾಗೆ: ಬಿಜೆಪಿ ಶುದ್ಧೀಕರಣವಾಗುವ ಹೊರತು ನಾನು ಬಿಜೆಪಿಗೆ ಹೋಗಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನನಗೆ ಹಿರಿಯಣ್ಣ ಇದ್ದ ಹಾಗೆ. ನನಗೆ ಅನಾರೋಗ್ಯವಾದಾಗ ಅವರು ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಅವರ ಮೊಮ್ಮಮಗನ ಮದುವೆಗೆ ನಾನೂ ಹೋಗಿ ಶುಭ ಹಾರೈಸಿದ್ದೆ. ಹಾಗಂದ ಮಾತ್ರಕ್ಕೆ ನಾನು ಬಿಜೆಪಿ ಸೇರಿಲ್ಲ ಎಂದರು.
20ಕ್ಕೆ ಬಾಗಲಕೋಟೆಯಲ್ಲಿ ಆರ್‌ಸಿ ಬ್ರಿಗೇಡ್ ಸಮಾವೇಶ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಂಘಟನೆಯಾಗಬೇಕು ಎಂಬುದು ಹಲವು ಸಾಧು-ಸಂತರ ಅಪೇಕ್ಷೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಬ್ರಿಗೇಡ್ ಕಟ್ಟುವ ಬಗ್ಗೆ ತೀರ್ಮಾನವಾಗಿದ್ದು, ಅ.20ರಂದು ಬಾಗಲಕೋಟೆಯಲ್ಲಿ ಚಿಂತನ-ಮಂಥನ ಸಮಾವೇಶ ನಡೆಯಲಿದೆ ಎಂದು ಮಾಜಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ನಡೆಯಲಿರುವ ಸಮಾವೇಶದಲ್ಲಿ 25 ಸಾಧು-ಸಂತರು ಸೇರಿದಂತೆ ಎರಡೂವರೆ ಸಾವಿರ ಕಾರ್ಯಕರ್ತರು ಭಾಗವಹಿಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು. ಈ ಸಂಘಟನೆ ಪಕ್ಷಾತೀತ, ಜಾತ್ಯತೀತವಾಗಿರುತ್ತದೆ. ನಾಯಕತ್ವವನ್ನು ಆ ಭಾಗದ ಸಾಧು-ಸಂತರೇ ವಹಿಸಲಿದ್ದಾರೆ. ಇಲ್ಲಿ ಈ ಬ್ರಿಗೇಡ್‌ಗೆ ಯಾವ ಹೆಸರು ಘೋಷಣೆ ಮಾಡ ಬೇಕು. ಇದರ ಮುಂದಿನ ಕಾರ್ಯಕ್ರಮಗಳೇನು ಎಂದು ಆ ಸಮಾವೇಶದಲ್ಲಿ ಘೋಷಣೆ ಮಾಡಲಾಗುವುದು ಎಂದರು.
ಈಗಾಗಲೇ, ರಾಜ್ಯದ ಎಲ್ಲ ಭಾಗಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದುಳಿದ ವರ್ಗದ ಸಂಘಟನೆ ಅಗತ್ಯ ಎಂಬುದನ್ನು ಜನ ಮನಗಂಡಿದ್ದಾರೆ. ಅನೇಕರು ಈಗಾಗಲೇ ನಾವು ಬರುತ್ತೇವೆ ಎಂದು ಸಂಪರ್ಕಿಸುತ್ತಿದ್ದಾರೆ. ಆದರೆ, ಅಲ್ಲಿ ಕೇವಲ ಎರಡೂವರೆ ಸಾವಿರ ಜನರಿಗೆ ಮಾತ್ರ ಅವಕಾಶವಿದ್ದು, ಪ್ರಮುಖರು ಮಾತ್ರ ಬರಲು ಭಾಗವಹಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.