
ಬೆಂಗಳೂರು (ಜೂ.18): ಜನಸಂಖ್ಯೆ ಹೆಚ್ಚಾದಷ್ಟೂ ಪರಿಸರ ನಾಶವಾಗುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಜನಸಂಖ್ಯೆಯಲ್ಲಿ ಚೀನಾ ಮೊದಲ ಸ್ಥಾನ ಪಡೆದಿತ್ತು. ಇದೀಗ ನಾವು ಚೀನಾವನ್ನು ಹಿಂದಿಕ್ಕಿ ಪ್ರಥಮ ಸ್ಥಾನದಲ್ಲಿದ್ದೇವೆ. ಬೆಂಗಳೂರಿನಲ್ಲೇ 1.44 ಕೋಟಿ ಜನಸಂಖ್ಯೆ ಇದೆ. ಜನಸಂಖ್ಯೆ ಹೆಚ್ಚಾದಂತೆಲ್ಲಾ ಪೃಕೃತಿ, ಪರಿಸರ ನಾಶವಾಗುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣದ ಜೊತೆಗೆ ಪರಿಸರದ ಕುರಿತು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ ಆಗುತ್ತದೆ. ಕರ್ನಾಟಕದಲ್ಲಿನ ಪಶ್ಚಿಮ ಘಟ್ಟ, ವೈವಿಧ್ಯಮಯ ಕಾಡು, ನದಿಗಳು, ಜೀವ ಸಂಪತ್ತನ್ನು ನಾವು ಕಾಪಾಡಬೇಕು. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ‘ಪ್ರಕೃತಿ ಮನುಷ್ಯನ ಆಸೆಗಳನ್ನು ಈಡೇರಿಸುತ್ತದೆ. ಆದರೆ ದುರಾಸೆಗಳನ್ನಲ್ಲ’ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ: ಉನ್ನತ ಶಿಕ್ಷಣದಲ್ಲಿ ಪರಿಸರವು ಪಠ್ಯಕ್ರಮವಾಗುವುದು ಅತ್ಯಂತ ಅವಶ್ಯಕವಾಗಿದೆ. ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಭೂಮಿಗೆ ರಾಸಾಯನಿಕ ಗೊಬ್ಬರ ಅತಿಯಾಗಿ ಬಳಸಿದ್ದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಇದನ್ನು ಹೀಗೇ ಬಿಟ್ಟರೆ ಕರ್ನಾಟಕ ಮುಂದೆ ಮರುಭೂಮಿಯಾಗಲಿದೆ. ಅದಕ್ಕಾಗಿ ನಾವು ಈಗಲೇ ಎಚ್ಚರಿಕೆ ವಹಿಸಲೇಬೇಕು. ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ’ ಎಂದಿದೆ. ಇದು ಕಷ್ಟದ ಕೆಲಸವಾದರೂ ನಾವು ಮಾಡಲೇಬೇಕು. ಪರಿಸರ ಶುದ್ಧವಾಗಿದ್ದರೆ ಜನ ಆರೋಗ್ಯವಾಗಿರುತ್ತಾರೆ. ಸಾರ್ವಜನಿಕ ಸಾರಿಗೆ ಉಪಯೋಗಿಸೋಣ. ಹತ್ತಿರದ ಸ್ಥಳಗಳಿಗೆ ನಡೆದು ಹೋಗೋಣ ಅಥವಾ ಸೈಕಲ್ ಬಳಸೋಣ. ಹನಿ ಹನಿ ನೀರನ್ನೂ ಸಂಗ್ರಹಿಸಿ ಬಳಸಿಕೊಳ್ಳೋಣ ಎಂದು ಹೇಳಿದರು.
ಪಾರ್ಕ್ ನಿರ್ಮಾಣಕ್ಕೆ ಸಹಕಾರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಗರದಲ್ಲಿ ಅರಣ್ಯ ಇಲಾಖೆಗೆ ಸೇರಿರುವ ಭೂಮಿಗಳನ್ನು ಕಬ್ಬನ್ ಪಾರ್ಕ್, ಲಾಲ್ ಬಾಗ್ ರೀತಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಮುಂದಾದರೆ ಪಾಲಿಕೆಯಿಂದ ಅಗತ್ಯ ಧನಸಹಾಯ ನೀಡಲಾಗುವುದು. ಪ್ರತಿ ಶಾಲೆಯಲ್ಲಿ 25 ವಿದ್ಯಾರ್ಥಿಗಳನ್ನು ಒಳಗೊಂಡ ‘ಕ್ಲೈಮೇಟ್ ಆ್ಯಕ್ಷನ್ ಕ್ಲಬ್ʼ ರಚಿಸಲು ಸೂಚನೆ ನೀಡಲಾಗಿದೆ. ನಗರದಲ್ಲಿ 1.20 ಕೋಟಿ ವಾಹನಗಳಿವೆ. ಇದರಿಂದ ಪರಿಸರ ಮಾಲಿನ್ಯ ಹೆಚ್ಚಾಗಿದ್ದು ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.
ಪರಿಸರದ ಅಭಿವೃದ್ಧಿಗೆ ಶ್ರಮಿಸಿದ ಹಲವು ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಚಿವರಾದ ಈಶ್ವರ್ ಖಂಡ್ರೆ, ಡಾ.ಸುಧಾಕರ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.