ಆಯೋಗ, ಮೋದಿಗೆ ನಾನು ಹೆದರುವುದಿಲ್ಲ : ರಾಹುಲ್‌

Kannadaprabha News   | Kannada Prabha
Published : Aug 19, 2025, 06:26 AM IST
Rahul Gandhi Voter Rights Campaign

ಸಾರಾಂಶ

‘ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ ಅಥವಾ ಚುನಾವಣಾ ಆಯೋಗಕ್ಕಾಗಲಿ ಹೆದರುವುದಿಲ್ಲ’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಗುಡುಗಿದ್ದಾರೆ.

ನವದೆಹಲಿ : ‘ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ ಅಥವಾ ಚುನಾವಣಾ ಆಯೋಗಕ್ಕಾಗಲಿ ಹೆದರುವುದಿಲ್ಲ’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಗುಡುಗಿದ್ದಾರೆ. ಇದೇ ವೇಳೆ ಆಯೋಗ ನಡೆಸುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯು ಮತಗಳವಿಗೆ ಹೊಸ ಆಯುಧ ಎಂದು ಕಿಡಿಕಾರಿದ್ದಾರೆ.

ಬಿಹಾರದಲ್ಲಿ ವೋಟ್ ಅಧಿಕಾರ್‌ ಯಾತ್ರೆ ನಡೆಸುತ್ತಿರುವ ರಾಹುಲ್‌ ಗಾಂಧಿ ಅವರು 2ನೇ ದಿನದಂದು ಮತಪಟ್ಟಿಯಿಂದ ಹೆಸರು ಅಳಸಿಹೋಗಿರುವವರ ಜೊತೆ ಸಂವಾದ ನಡೆಸಿದರು. ‘ಈ ಜನರು ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದರೆ ಈಗ ಅವರ ಹೆಸರುಗಳು ಪಟ್ಟಿಯಿಂದ ಕಾಣೆಯಾಗಿದೆ. ಇದು ಮತಗಳವಿಗೆ ನೇರ ಉದಾಹರಣೆ ಎಂದರು. ಬಿಜೆಪಿ ಮತ್ತು ಆಯೋಗದ ಮೈತ್ರಿಯು ಬಹುಜನರು ಮತ್ತು ಬಡವರನ್ನು ಶಿಕ್ಷಿಸುತ್ತಿದೆ ಎಂದು ಆರೋಪಿಸಿದರು. ಜೊತೆಗೆ 2023ರಲ್ಲಿ ಮೋದಿ ಸರ್ಕಾರವು ಆಯೋಗದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗದಂತಹ ಕಾನೂನು ತಂದಿದೆ ಎಂದು ದೂರಿದರು.

ಬಳಿಕ ಔರಂಗಬಾದ್‌ನಲ್ಲಿಯೂ ಸಹ ಮತಪಟ್ಟಿಯಿಂದ ಹೆಸರು ಕಾಣೆಯಾಗಿರುವವರ ಜೊತೆಗೆ ಸಂವಾದ ನಡೆಸಿದರು.

ವಾಗ್ದಂಡನೆಗೆ ಚಿಂತನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಖಚಿತಪಡಿಸುವ ತಮ್ಮ ಸಾಂವಿಧಾನಿಕ ಹೊಣೆ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿರುವ ವಿಪಕ್ಷಗಳು, ಅವರ ವಿರುದ್ಧ ವಾಗ್ದಂಡನೆಗೆ ಚಿಂತನೆ ನಡೆಸಿವೆ.

ಬಿಹಾರದ ವಿಶೇಷ ಮತಪಟ್ಟಿ ಪರಿಷ್ಕರಣೆ, ಕರ್ನಾಟಕದ ಮಹದೇವಪುರ ಚುನಾವಣಾ ಅಕ್ರಮ ಸಾಬೀತುಪಡಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ ಎಂದು ರಾಹುಲ್‌ ಗಾಂಧಿಗೆ ಸವಾಲು ಹಾಕಿದ ಮಾರನೇ ದಿನವೇ ವಿಪಕ್ಷಗಳು ಇಂಥದ್ದೊಂದು ವಿಷಯದ ಬಗ್ಗೆ ಚರ್ಚೆ ನಡೆಸಿವೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೋಯ್‌, ‘ಮತದಾನವು, ಸಂವಿಧಾನ ಜನಸಾಮಾನ್ಯರಿಗೆ ನೀಡಿರುವ ಹಕ್ಕಾಗಿದ್ದು, ಪ್ರಜಾಪ್ರಭುತ್ವ ಅದರ ಮೇಲೆ ಅವಲಂಬಿತವಾಗಿದೆ. ಇದನ್ನು ರಕ್ಷಿಸುವುದು ಚುನಾವಣಾ ಆಯೋಗದ ಕೆಲಸ. ಆದರೆ ಆ ಆಯೋಗವು, ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ಸೇರಿದಂತೆ ವಿಪಕ್ಷಗಳು ಎತ್ತುತ್ತಿರುವ ಮಹತ್ವಪೂರ್ಣ ಪ್ರಶ್ನೆಗಳಿಗೆ ಉತ್ತರಿಸದೆ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜ್ಞಾನೇಶ್‌ ಕುಮಾರ್ ವಿರುದ್ಧ ವಾಗ್ದಂಡನೆ ಬಗ್ಗೆ ಹಲವು ನಾಯಕರು ಪ್ರಸ್ತಾಪ ಮಾಡಿದ್ದಾರೆ. ಪ್ರಸ್ತಾಪದ ಬಗ್ಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ನಾವು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು
ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ