ಒಳಮೀಸಲಾತಿ ಜಾರಿ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ: ಕುತೂಹಲ ಹೆಚ್ಚಿಸಿದ ನಿರ್ಣಯ

Published : Aug 19, 2025, 06:04 AM IST
Vidhana soudha

ಸಾರಾಂಶ

ಗುಂಪುಗಳ ರಚನೆ ವೇಳೆ ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಿ ಶೇ.1 ರಷ್ಟು ಮೀಸಲಾತಿ ನೀಡಿರುವುದಕ್ಕೆ ಬಲಗೈ ಸಮುದಾಯಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಬೆಂಗಳೂರು (ಆ.19): ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ವಿಚಾರ ಮಂಗಳವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದ್ದು, ನ್ಯಾ.ನಾಗಮೋಹನ್‌ದಾಸ್‌ ಆಯೋಗದ ವರದಿಯಲ್ಲಿನ ಮೀಸಲಾತಿ ವರ್ಗೀಕರಣದ ಕುರಿತು ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲ ಉಂಟಾಗಿದೆ. ನಿವೃತ್ತ ನ್ಯಾ.ನಾಗಮೋಹನ್‌ದಾಸ್‌ ಅವರ ಆಯೋಗವು ತನ್ನ ವರದಿಯಲ್ಲಿ 101 ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಣ ಮಾಡಿ ಶೇ.17 ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ.

ಗುಂಪುಗಳ ರಚನೆ ವೇಳೆ ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಿ ಶೇ.1 ರಷ್ಟು ಮೀಸಲಾತಿ ನೀಡಿರುವುದಕ್ಕೆ ಬಲಗೈ ಸಮುದಾಯಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಂಪುಟ ಸಭೆ ವಿಫಲವಾಯಿತು. ಬೆನ್ನಲ್ಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ನಿವಾಸದಲ್ಲಿ ಸಭೆ ನಡೆಸಿ ಮೀಸಲಾತಿ ವರ್ಗೀಕರಣ ಕುರಿತು ಪುನರ್‌ ಪರಿಶೀಲನೆ ಮಾಡಿ ವರದಿ ನೀಡುವಂತೆ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹಾಗೂ ಪರಿಷತ್‌ ಸದಸ್ಯ ಸುಧಾಮ್‌ದಾಸ್‌ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಅವರು ನೀಡುವ ವರದಿ ಆಧಾರದ ಮೇಲೆ ಮಂಗಳವಾರದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ಈ ವೇಳೆ ನಾಗಮೋಹನ್‌ದಾಸ್‌ ಆಯೋಗವು ನೀಡಿರುವ ವರ್ಗೀಕರಣವನ್ನು ಪರಿಷ್ಕರಣೆ ಮಾಡಲಾಗುತ್ತದೆಯೇ ಅಥವಾ ಯಥಾವತ್ತಾಗಿ ಅಂಗೀಕರಿಸಲಾಗುತ್ತದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ. ಸೂಕ್ಷ್ಮ ವಿಚಾರವಾಗಿರುವುದರಿಂದ ಮಂಗಳವಾರದ ಸಂಪುಟ ಸಭೆಯಲ್ಲೇ ಅಂತಿಮ ತೀರ್ಮಾನ ಮಾಡಬೇಕೆೇ ಅಥವಾ ವರ್ಗೀಕರಣ ಪರಿಷ್ಕರಣೆಗೆ ಪ್ರತ್ಯೇಕ ಸಂಪುಟ ಉಪಸಮಿತಿ ರಚನೆ ಮಾಡಬೇಕೇ ಎಂಬ ಕುರಿತೂ ಸಹ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಮಂಗಳವಾರದ ಸಂಪುಟ ಸಭೆಯ ನಿರ್ಣಯ ಆಸಕ್ತಿ ಕೆರಳಿಸಿದೆ.

ಸೂಚಿಸಿರುವ ವರ್ಗೀಕರಣವೇನು?: ಶೇ.17ರಷ್ಟು ಮೀಸಲಾತಿಯನ್ನು ಐದು ವರ್ಗಗಳಾಗಿ ವಿಂಗಡಿಸಿದ್ದು, ಮತ್ತು ಅತಿ ಸೂಕ್ಷ್ಮ ಜಾತಿಗಳನ್ನು ‘ಎ’ ವರ್ಗವಾಗಿ ವಿಂಗಡಿಸಿ ಶೇ.1, ಮಾದಿಗ ಮತ್ತು ಅದೇ ರೀತಿಯ ಅಸ್ಪೃಷ್ಯತೆ ಅನುಭವಿಸುತ್ತಿರುವ ಅತ್ಯಂತ ಹಿಂದುಳಿರುವ ಜಾತಿಗಳನ್ನು ‘ಬಿ’ ಎಂದು ವರ್ಗೀಕರಣ ಮಾಡಿ ಶೇ.6, ಹೊಲೆಯ ಮತ್ತು ಅದೇ ರೀತಿ ಅಸ್ಪೃಶ್ಯತೆ ಜೊತೆಗೆ ಹಿಂದುಳಿರುವ ಜಾತಿಗಳನ್ನು ‘ಸಿ’ ಎಂದು ಪರಿಗಣಿಸಿ ಶೇ.5, ಅಸ್ಪೃಶ್ಯರಲ್ಲದ ಭೋವಿ, ಲಂಬಾಣಿ, ಕೊರಚ, ಕೊರಮ ಈ ನಾಲ್ಕು ಜಾತಿಗಳನ್ನು ‘ಡಿ’ ಎಂದು ಪರಿಗಣಿಸಿ ಶೇ.4, ಮಾದಿಗ, ಛಲವಾದಿ ಎಂದು ಗುರುತಿಸಿಕೊಳ್ಳದ ಆದಿಕರ್ನಾಟಕ, ಆದಿ ಆಂಧ್ರ, ಆದಿದ್ರಾವಿಡ ಎಂದೇ ಗುರುತಿಸಿಕೊಂಡಿರುವ ಗುಂಪನ್ನು ‘ಇ’ ಎಂದು ಶೇ.1ರಷ್ಟು ಮೀಸಲಾತಿ ನೀಡಿ ವರ್ಗೀಕರಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ‘ಸಿ’ ವರ್ಗಕ್ಕೆ ಶೇ.5.3 ಹಾಗೂ ‘ಬಿ’ ವರ್ಗಕ್ಕೆ ಶೇ.5.7 ರಷ್ಟು ಮೀಸಲಾತಿಗೆ ಪರಿಷ್ಕರಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ಕುರಿಗಾರರ ವಿರುದ್ಧದ ದೌರ್ಜನ್ಯ ತಡೆಗೆ ಕಾಯಿದೆ: ರಾಜ್ಯದ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ ಹಿತರಕ್ಷಣೆಗಾಗಿ ಅವರಿಗೆ ಭದ್ರತೆ ಒದಗಿಸುವ ಹಾಗೂ ಅವರ ಮೇಲೆ ನಿಂದನೆ, ಅಪಮಾನ ಮಾಡಿದರೆ ಶಿಕ್ಷೆ ವಿಧಿಸುವ ಕುರಿಗಾರರ ದೌರ್ಜನ್ಯ ತಡೆ ಕಾಯ್ದೆ ಮಂಗಳವಾರದ ಸಂಪುಟದಲ್ಲಿ ಮಂಡನೆಯಾಗಲಿದೆ. ಈ ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ 2025 ಅಡಿ ಅರಣ್ಯ ಭೂಮಿ (ಮೀಸಲು ಅರಣ್ಯ ಪ್ರದೇಶ ಹೊರತುಪಡಿಸಿ), ಸರ್ಕಾರಿ ಜಮೀನಿಗೆ ಪ್ರವೇಶ ನಿರಾಕರಿಸಿದರೆ ಅಂಥ ವ್ಯಕ್ತಿಗೆ ಒಂದು ವರ್ಷ ವರೆಗಿನ ಸೆರೆಮನೆ ಶಿಕ್ಷೆ ಹಾಗೂ 50,000 ರು. ವರೆಗಿನ ದಂಡ, ಕುರಿಗಾಹಿಗಳನ್ನು ಸಾರ್ವಜನಿಕರು ಬಳಸುವ ಸಾರ್ವಜನಿಕ ಸ್ಥಳಗಳಿಗೆ ಹೋಗಲು ಅಥವಾ ಮೇಯಿಸುವ ಸಾಂಪ್ರದಾಯಿಕ ಹಕ್ಕನ್ನು ನಿರಾಕರಿಸಿದ ವ್ಯಕ್ತಿಗೆ 2 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ವರೆಗಿನ ದಂಡ. ಉದ್ದೇಶಪೂರ್ವಕವಾಗಿ ಯಾವುದೇ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳನ್ನು ನಿಂದಿಸಿದರೆ, ಅಪಮಾನಿಸಿದವರಿಗೆ 6 ತಿಂಗಳಿಂದ 5 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರು. ಸೇರಿದಂತೆ ವಿವಿಧ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!