ಈಶ್ವರಪ್ಪ ದುಃಖ ನಾನು ಅರ್ಥ ಮಾಡಿಕೊಳ್ಳಬಲ್ಲೆ: ರಾಧಾಮೋಹನದಾಸ್ ಅಗರವಾಲ್

By Kannadaprabha NewsFirst Published Apr 18, 2024, 12:58 PM IST
Highlights


ಕಾಂಗ್ರೆಸ್ ಬಳಿ ಖರ್ಚು ಮಾಡಲು ಸಾಕಷ್ಟು ಹಣವಿದೆ. ಅವರು ಈ ಬಾರಿ ₹500 ಕೋಟಿಯಷ್ಟು ಹಣ ಖರ್ಚು ಮಾಡಿದರೂ ಸೋಲು ಅನುಭವಿಸಲಿದ್ದಾರೆ. ಕಾಂಗ್ರೆಸ್ ಮೇಲೆ ಜನತೆಗೆ ಭರವಸೆಯೇ ಇಲ್ಲದ ಕಾರಣ ಇಡಿ ದೇಶದಲ್ಲಿ ಕಾಂಗ್ರೆಸ್ 40ರಿಂದ 45 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಲೇವಡಿ ಮಾಡಿದ ರಾಧಾಮೋಹನದಾಸ್ ಅಗರವಾಲ್

ವಿಜಯಪುರ(ಏ.18):  ಈಶ್ವರಪ್ಪ ಪಕ್ಷಕ್ಕಾಗಿ ಸಂಘರ್ಷ ಮಾಡಿದ್ದಾರೆ. ಈಶ್ವರಪ್ಪನವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅವರ ದುಃಖ ನಾನು ಅರ್ಥ ಮಾಡಿಕೊಳ್ಳಬಲ್ಲೆ, ಈಶ್ವರಪ್ಪನವರಿಗೆ ಭಗವಂತ ಒಳ್ಳೆಯ ಬುದ್ಧಿ ಕೊಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ ಹೇಳಿದರು. ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅವರ ಬಗ್ಗೆ ಹೆಚ್ಚಿಗೆ ಏನೂ ಮಾತನಾಡಲು ಇಷ್ಟ ಪಡಲ್ಲ. ಅವರ ಬಗ್ಗೆ ನನಗೆ ದುಃಖವಿದೆ ಎಂದಷ್ಟೇ ಹೇಳಿದರು.

ಈ ನಾಡಿನ ಮಲ್ಲಿಕಾರ್ಜುನ ಸ್ವಾಮಿ, ಶ್ರೀಸಿದ್ಧೇಶ್ವರ ಸ್ವಾಮೀಜಿಗಳ ಆಶೀರ್ವಾದದಿಂದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 4 ಲಕ್ಷ ಮತಗಳ ಐತಿಹಾಸಿಕ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಹಿಂದೆಂದೂ ಕಾಣದಂತಹ ಐತಿಹಾಸಿಕ ಸೀಟುಗಳ ಗೆಲುವು ನಮ್ಮದು ಆಗಲಿದೆ. ಕರ್ನಾಟಕದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, 28ಕ್ಕೆ 28 ಸೀಟುಗಳನ್ನು ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಕುರ್ಚಿ ಹೋಗೋದು ಪಂಚ ಗ್ಯಾರಂಟಿಗಳಲ್ಲೊಂದು: ಶಾಸಕ ಬಸನಗೌಡ ಯತ್ನಾಳ

ನಮ್ಮ ಕೆಲವು ಅಭ್ಯರ್ಥಿಗಳು ನಮ್ಮ ಬಳಿ ಬಂದು ಚುನಾವಣೆ ಎದುರಿಸಲು ಹಣ ಇಲ್ಲ ಎಂದರು. ಆಗ ನಾವು ನಿಮ್ಮ ಹಣ ನೋಡಿ ಟಿಕೆಟ್ ಕೊಡುತ್ತಿಲ್ಲ. ನಿಮ್ಮ ವ್ಯಕ್ತಿತ್ವ ನೋಡಿ ಟಿಕೆಟ್ ಕೊಡುತ್ತಿದ್ದೇವೆ. ಜನರೂ ನಿಮ್ಮ ಮೇಲೆ ವಿಶ್ವಾಸ ಇರಿಸಿ ಗೆಲ್ಲಿಸುತ್ತಾರೆ. ಗೆದ್ದ ಬಳಿಕ ಅವರ ಸೇವೆ ಮಾಡಿ ಎಂದಿದ್ದೇವೆ ಎಂದರು.

ಕಾಂಗ್ರೆಸ್ ಬಳಿ ಖರ್ಚು ಮಾಡಲು ಸಾಕಷ್ಟು ಹಣವಿದೆ. ಅವರು ಈ ಬಾರಿ ₹500 ಕೋಟಿಯಷ್ಟು ಹಣ ಖರ್ಚು ಮಾಡಿದರೂ ಸೋಲು ಅನುಭವಿಸಲಿದ್ದಾರೆ. ಕಾಂಗ್ರೆಸ್ ಮೇಲೆ ಜನತೆಗೆ ಭರವಸೆಯೇ ಇಲ್ಲದ ಕಾರಣ ಇಡಿ ದೇಶದಲ್ಲಿ ಕಾಂಗ್ರೆಸ್ 40ರಿಂದ 45 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಲೇವಡಿ ಮಾಡಿದರು.

ಸಿದ್ದು, ಡಿಕೆಶಿಗೂ ಸರ್ಕಾರ ಉಳಿಯಲ್ಲವೆಂದು ಗೊತ್ತಿದೆ: ಶಾಸಕ ಬಸನಗೌಡ ಯತ್ನಾಳ್‌

ಭ್ರಷ್ಟಾಚಾರ ಮಾಡಿದವರನ್ನು ಬಿಜೆಪಿಯವರು ಸೇರಿಸಿಕೊಂಡು ಕ್ಲೀನ್ ಚೀಟ್ ಕೊಡುವ ಮೂಲಕ ಅವರ ಕೊಳಕು ತೊಳೆಯುತ್ತಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಹೀಗೆ ಹೇಳುವ ಮೂಲಕ ಕಾಂಗ್ರೆಸ್ ಬಟ್ಟೆ ತೊಳೆಯುವವರಿಗೆ ಅವಮಾನ ಮಾಡುತ್ತಿದೆ. ಅಗಸರು ನಮ್ಮ ಹಾಗೂ ನಿಮ್ಮ ಬಟ್ಟೆಯ ಕೊಳಕು ತೆಗೆಯುತ್ತಾರೆ. ಕಾಂಗ್ರೆಸ್‌ನವರು ಬಟ್ಟೆ ತೊಳೆಯುವವರನ್ನು ಅವಮಾನ ಮಾಡುತ್ತಿದ್ದಾರೆ. ತಪ್ಪು ಯಾರು ಮಾಡಿದರೂ ಅದು ತಪ್ಪೆ. ನಮ್ಮ ಪಕ್ಷದವರು ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಆಗೇ ಆಗುತ್ತದೆ. ತಪ್ಪು ಮಾಡಿದವರು ಬಿಜೆಪಿಯಲ್ಲಿ ಇದ್ದರೂ ಸರಿ, ಬೇರೆಡೆ ಇದ್ದರೂ ಸರಿ ಅವರಿಗೆ ಶಿಕ್ಷೆ ಆಗುತ್ತದೆ. ದೇಶದಲ್ಲಿ ಯಾರೇ ತಪ್ಪು ಮಾಡಿದರು ಶಿಕ್ಷೆ ಕೊಡುವ ಅಧಿಕಾರ ನ್ಯಾಯಾಲಯಕ್ಕಿದೆ ಎಂದು ತಿರುಗೇಟು ನೀಡಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಬೆಳಗಾವಿ ವಿಭಾಗದ ಉಸ್ತುವಾರಿ ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ಎ.ಎಸ್.ಪಾಟೀಲ್ ನಡಹಳ್ಳಿ, ಸೋಮನಗೌಡ ಸಾಸನೂರ, ರಮೇಶ ಭೂಸನೂರ, ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ್, ಸಂಜಯ ಪಾಟೀಲ್ ಕನಮಡಿ, ಸಂಜೀವ ಐಹೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!