
ಬಾಗಲಕೋಟೆ (ಫೆ.09): ನಾನು ಯಾರು ವಿರೋಧಿಯೂ ಅಲ್ಲ. ದ್ವೇಷವೂ ಇಲ್ಲ. ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರು, ಶತ್ರುಗಳಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷದ ಹೈಕಮಾಂಡ್ ಅವಕಾಶ ನೀಡಿದರೆ ನಿಭಾಯಿಸುವ ಶಕ್ತಿ ಇದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಪರ, ವಿರೋಧಿ ಬಣ, ತಟಸ್ಥರ ಬಣವಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ತಟಸ್ಥರ ಬಗ್ಗೆ ಮಾತನಾಡುವ ಮುನ್ನ ಅವಲೋಕಿಸಬೇಕು. ತಂದೆಯಿಂದ ಉಪಯೋಗ ತೆಗೆದುಕೊಂಡಿದ್ದಾರೆ, ಈಗ ಸುಮ್ಮನಿಸಿದ್ದಾರೆ ಎನ್ನುವುದು ಸರಿಯಲ್ಲ. ಬೀಳಗಿ ಕ್ಷೇತ್ರದ ಜನರು ನನಗೆ ಮತ ಹಾಕಿ ಶಾಸಕ, ಸಚಿವರಾಗಿ ಮಾಡಿದ್ದಾರೆ.
ಹಾಗೆಂದ ಮಾತ್ರಕ್ಕೆ ನನ್ನ ಪುತ್ರನಿಗೂ ಅವಕಾಶ ಸಿಗಲಿ ಎಂದು ಹೇಳಿದರೆ ಹೇಗೆ ? ನನಗೆ ಬೆಂಬಲಿಸಿದ ಮಾತ್ರಕ್ಕೆ ನನ್ನ ಪುತ್ರನಿಗೂ ಬೆಂಬಲಿಸಬೇಕು ಎಂದು ಎಲ್ಲಿಯೂ ಇಲ್ಲ ಎಂದು ಟಾಂಗ್ ನೀಡಿದರು. ವಿಜಯೇಂದ್ರ ಅವರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ಭಿನ್ನರ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಸೂಕ್ಷ್ಮವಾಗಿ ಗಮನಿಸಿ ಒನ್ ಟೂ ಒನ್ ಕುಳಿತು ಮಾತುಕತೆ ನಡೆಸಬೇಕು. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದಲ್ಲಿ ಎಲ್ಲವೂ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನಮ್ಮೊಳಗಿನ ಅಸಮಾಧಾನಕ್ಕಿಂತ ಆಡಳಿತರೂಢ ಭ್ರಷ್ಟ ಕಾಂಗ್ರೆಸ್ ವಿರುದ್ಧ ಹೋರಾಡುವುದು ಇಂದಿನ ಅಗತ್ಯವಾಗಿದೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ತಪ್ಪಿಸುತ್ತಿದ್ದವರಿಗೆ ಬಿಗ್‌ಶಾಕ್!
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಿರಾಣಿ, ವಿರೋಧಿ ಬಣದವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಯಾರ ಬಗ್ಗೆಯೂ ವಿರೋಧ ಇಟ್ಟುಕೊಂಡಿಲ್ಲ. ರಾಜಕೀಯದಲ್ಲಿ ಶಾಶ್ವತ ಶತೃತ್ವ, ಮಿತ್ರತ್ವ ಇರಲ್ಲ. ಎಂದ ಅವರು, ಜಿಲ್ಲಾ ಬಿಜೆಪಿ ವಲಯದಲ್ಲೂ ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಯಾರನ್ನೇ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರೂ ನನ್ನ ಬೆಂಬಲವಿದೆ. ನಮ್ಮದೆಲ್ಲ ಒನ್ ಸಿಟಿಂಗ್ ಮಾತುಕತೆಯಲ್ಲಿ ಮುಗಿದು ಹೋಗುತ್ತದೆ. ಅವರು ಒಂದು ಹೆಜ್ಜೆ ಮುಂದಿಟ್ಟಿರೆ ನಾನು ಹತ್ತು ಹೆಜ್ಜೆ ಮುಂದೆ ಬರುತ್ತೇನೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನನಗೂ ಯಾರೂ ಅನ್ಯಾಯ ಮಾಡಿಲ್ಲ ಎಂದು ಹೇಳಿದರು.
ಅಭಿವೃದ್ಧಿಗೋಸ್ಕರ ಹೋರಾಟ; ಈ ಸರ್ಕಾರದ ಬಂದ ಮೇಲೆ ಬೀಳಗಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಹಿಂದೆ ನಮ್ಮ ಸರ್ಕಾರದಲ್ಲಿ 400 ದೇವಸ್ಥಾನಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದೆ, ಕೆಲವು ಕಾಮಗಾರಿಗೆ ಚಾಲನೆ ಸಿಕ್ಕವು, ಚುನಾವಣೆ ಬಂದ ಹಿನ್ನೆಲೆ ಹಲವು ಕಾಮಗಾರಿ ಸ್ಥಗಿತಗೊಂಡವು. ಬೀಳಗಿ ಶಾಸಕ ಜೆ.ಟಿ. ಪಾಟೀಲ ಯಾವುದೇ ಅನುದಾನ ತಂದಿಲ್ಲ. ನಾನು ತಂದಿರುವ ಅನುದಾನದಲ್ಲಿ ದೇವಸ್ಥಾನ ಕಾರ್ಯ ಆರಂಭಿಸಿದ್ದಾರೆ. ಅನುದಾನ ನಾನೇ ತಂದಿದ್ದೇನೆಂದು ಹೇಳುತ್ತಿರುವುದು ಶುದ್ಧ ಸುಳ್ಳು. ನಾನು ಆಯ್ಕೆ ಮಾಡಿದ ದೇವಸ್ಥಾನ ಬಿಟ್ಟು ಬೇರೆ ದೇವಸ್ಥಾನ ಆಯ್ಕೆ ಮಾಡುತ್ತಿದ್ದಾರೆ. ಇದರಿಂದ ಆರಂಭವಾಗಿದ್ದ ಕಾಮಗಾರಿಗಳು ಅರ್ಧಕ್ಕೆ ನಿಲ್ಲುತ್ತಿವೆ. ಹೋರಾಟ ನಡೆಸಿ ಬಜೆಟ್ ಪೂರ್ವ ಬೀಳಗಿ ಕ್ಷೇತ್ರದ ನೀರಾವರಿ, ಶಿಕ್ಷಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನೆಟ್ಕಲ್ ಯೋಜನೆಯಲ್ಲಿ ಕಳಪೆ ಕಾಮಗಾರಿ: ಶಾಸಕ ಇಕ್ಬಾಲ್ ಹುಸೇನ್ ಆರೋಪ
ತೋವಿವಿ ಸ್ಥಳಾಂತರಿಸಿದರೆ ಹೋರಾಟ: ಬಾಗಲಕೋಟೆ ತೋವಿವಿಗೆ ಯಾವುದೇ ಧಕ್ಕೆ ತರಬಾರದು. ಬಹಳಷ್ಟು ಪ್ರಯತ್ನ ಮಾಡಿ ನಮ್ಮ ಸರ್ಕಾರದ ಅವಧಿಯಲ್ಲಿ ವಿವಿ ತಂದಿದ್ದೇನೆ. ಅದು ತನ್ನ ಕಾರ್ಯವ್ಯಾಪ್ತಿಗೆ ತಕ್ಕ ಕೆಲಸ ಮಾಡುತ್ತಿದೆ. ಸರ್ಕಾರವೇ ಅನುದಾನ ನೀಡುತ್ತಿಲ್ಲ. ಮಂಡ್ಯ ಭಾಗದಲ್ಲಿಕ್ಕೆ ಹೊಸದಾಗಿ ತೋವಿವಿ ಸ್ಥಾಪಿಸುವುದು ಬೇಡ. ಸರ್ಕಾರ ಈ ಕೆಲಸಕ್ಕೆ ಮುಂದಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.