ವಿಶೇಷ ವ್ಯಕ್ತಿ ಘೋಷಿಸಲು ವಿಪಕ್ಷ ನಾಯಕನ ಆಯ್ಕೆ ವಿಳಂಬ: ಮುರುಗೇಶ್ ನಿರಾಣಿ

By Kannadaprabha NewsFirst Published Jul 9, 2023, 4:32 AM IST
Highlights

ವಿರೋಧ ಪಕ್ಷದ ನಾಯಕನನ್ನಾಗಿ ವಿಶೇಷ ವ್ಯಕ್ತಿಯನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಹೀಗಾಗಿ ಕಾದು ನೋಡಿ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.

ಬೆಳಗಾವಿ (ಜು.9) : ವಿರೋಧ ಪಕ್ಷದ ನಾಯಕನನ್ನಾಗಿ ವಿಶೇಷ ವ್ಯಕ್ತಿಯನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಹೀಗಾಗಿ ಕಾದು ನೋಡಿ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಸೇರಿ ಯಾರನ್ನು ಬೇಕಾದರೂ ವಿಪಕ್ಷ ನಾಯಕ ಸ್ಥಾನಕ್ಕೆ ಘೋಷಣೆ ಮಾಡಿದರೂ ನಾನು ಸ್ವಾಗತ ಮಾಡುತ್ತೇನೆ. ವಿಶೇಷ ಅಭ್ಯರ್ಥಿ ಘೋಷಣೆಗೆ ವಿಪಕ್ಷ ನಾಯಕನ ಆಯ್ಕೆ ತಡವಾಗಿದೆ ಎಂದು ವಿಪಕ್ಷ ನಾಯಕನ ಆಯ್ಕೆ ವಿಳಂಬವನ್ನು ಸಮರ್ಥಿಸಿಕೊಂಡರು.

ಆ ಪುಣ್ಯಾತ್ಮನ ಹೇಳಿಕೆಗಳಿಂದಲೇ ಬಿಜೆಪಿಗೆ ದೊಡ್ಡ ಡ್ಯಾಮೇಜ್‌: ಯತ್ನಾಳ್‌ ವಿರುದ್ಧ ಮುರುಗೇಶ್‌ ನಿರಾಣಿ ವಾಗ್ದಾಳಿ

ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ. ನಾನು ರಾಜ್ಯಾಧ್ಯಕ್ಷ ಆಗುವುದಿಲ್ಲ. ರಾಜ್ಯಾಧ್ಯಕ್ಷನಾಗಿಯೇ ಪಕ್ಷ ಸಂಘಟನೆ ಮಾಡಬೇಕು ಅಂತಾ ಏನೂ ಇಲ್ಲ. ಬೆಳಗಾವಿ ವಿಭಾಗದಲ್ಲಿ ಯಾವುದೇ ಹುದ್ದೆ ತೆದುಕೊಳ್ಳದೇ ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷದ ಸಂಘಟನೆಯಲ್ಲಿ ನಾನಿರುತ್ತೇನೆ ಎಂದು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸೋಲು, ಗೆಲವು ಸ್ವಾಭಾವಿಕ. ಇಂದಿರಾ ಗಾಂಧಿ, ವಾಜಪೇಯಿ, ಆಡ್ವಾಣಿ, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಎಲ್ಲರೂ ಸೋತವರೇ ಇದ್ದಾರೆ. ನಾನು ಇವತ್ತು ಸೋತಿರಬಹುದು. ಆದರೆ, ಇವತ್ತೆ ಚುನಾವಣೆ ನಡೆದರೂ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಇನ್ನು ನನ್ನ ಸೋಲಿಗೆ ನಾನೇ ಕಾರಣ, ನನ್ನ ಅತಿಯಾದ ಆತ್ಮವಿಶ್ವಾಸ ನನಗೆ ಸೋಲಾಗಿದೆ ಎಂದು ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಬಜೆಟ್‌ ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಒಳ್ಳೆಯ ಬಜೆಟ್‌ ನಿರೀಕ್ಷೆ ಹುಸಿಯಾಗಿದೆ. ಬಾಗಲಕೋಟೆ, ವಿಜಯಪುರ ಕೃಷ್ಣ ಮೇಲ್ದಂಡೆ ಅನುಷ್ಠಾನ ವಿಚಾರದಲ್ಲಿ ಮುಳುಗಡೆಯಾದ ಜನರಿಗೆ ಪರಿಹಾರ ಕೊಡಲು .5 ಸಾವಿರ ಕೋಟಿ ನಾವು ಮೀಸಲು ಇಟ್ಟಿದ್ದೇವು. ಸಾಂಕೇತಿಕವಾಗಿ 10 ಜನರಿಗೆ ಪರಿಹಾರ ವಿತರಣೆ ಕೂಡ ಮಾಡಿದ್ದೇವು. ಆದರೆ, ಇವರು ಈ ಬಜೆಟ್‌ನಲ್ಲಿ ಕೈ ಬಿಟ್ಟಿದ್ದಾರೆ. ಕೃಷ್ಣೆಯ ಕಣ್ಣೀರು ಎಂದು ಪುಸ್ತಕ ಬರೆದು, ಬಳ್ಳಾರಿಯಿಂದ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಮಾಡಿದ್ದರು. ಈಗ ಕೃಷ್ಣ ತೀರದ ಜನರಿಗೆ ಅನ್ಯಾಯ ಮಾಡಿದ್ದಾರೆ. ಎಲ್ಲ ರಂಗದಲ್ಲಿಯೂ ಸಹ ಸುಳ್ಳು ಭರವಸೆ ನೀಡಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿ ಘೋಷಣೆ ಮಾಡುವ ಸಂದರ್ಭದಲ್ಲಿ ಕಂಡಿಷನ್‌ ಹಾಕಿರಲಿಲ್ಲ. ಈಗ ಗ್ಯಾರಂಟಿಗೆ ಅನೇಕ ಕಂಡಿಷನ್‌ ಹಾಕಿದ್ದಾರೆ. ಕಂಡಿಷನ್‌ ಹಾಕಿದ್ದು ದುರಾದೃಷ್ಟ. ಬೊಮ್ಮಾಯಿ, ಯಡಿಯೂರಪ್ಪ ಮಾಡಿದ 20ಕ್ಕೂ ಹೆಚ್ಚು ಯೋಜನೆಗಳನ್ನು ಕೈಬಿಡುವ ಮೂಲಕ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ. ಒಂದೇ ಸಮುದಾಯದ ಓಲೈಕೆಯ ಬಜೆಟ್‌ ಇದಾಗಿದೆ ಎಂದು ದೂರಿದರು.

ವಿಜಯಪುರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ್‌ ಬೆಂಬಲಿಗರ ಗಲಾಟೆ; ಸಭೆಯಿಂದ ಹೊರನಡೆದ ನಿರಾಣಿ!


ವೈಯಕ್ತಿಕವಾಗಿ ನನಗೆ ರಾಜ್ಯ ರಾಜಕಾರಣದಲ್ಲಿ ನನಗೆ ಆಸಕ್ತಿ ಇದೆ. ರಾಜ್ಯ, ರಾಷ್ಟ್ರ ನಾಯಕರು ಏನು ತೀರ್ಮಾನ ಮಾಡಿದರೂ ಅದಕ್ಕೆ ಬದ್ಧ. ನನಗೆ ವೈಯಕ್ತಿಕವಾಗಿ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇದೆ. ಎಲ್ಲಿ ಕಳೆದುಕೊಂಡಿದ್ದೇನೆ, ಅಲ್ಲೆ ಹುಡುಕುವ ಸ್ವಭಾವ ನನ್ನದು.

ಮುರಗೇಶ ನಿರಾಣಿ, ಮಾಜಿ ಸಚಿವರು. 

click me!