
ವಿಜಯಪುರ(ಅ.09): ಪಟ್ಟಣದ 19ನೇ ವಾರ್ಡಿನ ರಾಜೀವ್ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ಕಾರ್ಯಕರ್ತೆಯರ ಪಕ್ಷ ಸಂಘಟನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪಕ್ಷದ ಮುಖಂಡರೊಂದಿಗೆ ನೂರಾರು ಮಂದಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದರೆ, ಬಿಜೆಪಿ ಈ ರಾಜ್ಯ ಹಾಗೂ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಮಹಿಳೆಯರು, ಹೆಣ್ಣುಮಕ್ಕಳ ಏಳಿಗೆಗಾಗಿ ಬಿಜೆಪಿ ಸರ್ಕಾರಗಳು ಕೊಟ್ಟಿರುವಷ್ಟು ಕೊಡುಗೆ ಯಾವ ಪಕ್ಷಗಳೂ ಕೊಟ್ಟಿಲ್ಲ. ನಾನು ಕೂಡಾ 5 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಶೇ.80ರಷ್ಟು ಅನುದಾನಗಳು ಸೋರಿಕೆಯಾಗುತ್ತಿದ್ದವು. 20ರಷ್ಟು ಮಾತ್ರ ಕೆಲಸಗಳಾಗುತ್ತಿತ್ತು. ಈಗ ಸರ್ಕಾರದ ಯೋಜನೆಗಳು ನೇರವಾಗಿ ಜನರಿಗೆ ತಲುಪುತ್ತಿವೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರಿ ಜಾಗ ದುರ್ಬಳಕೆ: ಕ್ರಮಕ್ಕೆ ಮುಂದಾದ ತಹಶೀಲ್ದಾರ್‌ರಿಗೆ ವಕೀಲನ ಆವಾಜ್..!
ಟೌನ್ ಬಿಜೆಪಿ ಅಧ್ಯಕ್ಷ ಆರ್.ಸಿ.ಮಂಜುನಾಥ್ ಮಾತನಾಡಿ, ಮಹಿಳೆಯರು ಸಂಘಟಿತರಾಗಬೇಕು. ವಿದ್ಯಾವಂತರಾಗಬೇಕು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸರ್ಕಾರಗಳು ಮಹಿಳೆಯರ ಪರವಾಗಿ ಜಾರಿಗೆ ತರುತ್ತಿರುವ ಯೋಜನೆಗಳ ಕುರಿತು ಅರಿತುಕೊಳ್ಳಬೇಕು ಎಂದರು.
ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಬೂದಿಗೆರೆ ನಾಗವೇಣಿ ಮಾತನಾಡಿ, ದೇಶದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರಮೋದಿ ಚಿಂತನೆ ನಡೆಸುತ್ತಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆ, ಉಜ್ವಲ ಯೋಜನೆಯಂತಹ ಮಹತ್ವದ ಕಾರ‍್ಯಕ್ರಮಗಳನ್ನು ನೀಡಿದ್ದಾರೆ. ವಿದ್ಯಾಸಿರಿ ಯೋಜನೆ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆಂದರು.
ಇದೇ ವೇಳೆ ಅನ್ಯ ಪಕ್ಷಗಳ ಮಹಿಳಾ ಸದಸ್ಯೆಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಮುಖಂಡರಾದ ಸುಬ್ಬೆಗೌಡ, ಅಶ್ವತ್ಥಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನಾಮಿನಿ ಪುರಸಭಾ ಸದಸ್ಯ ವೆಂಕಟೇಶ್ ಪ್ರಭು, ಜಿಲ್ಲಾ ಮಹಿಳಾ ಮೋರ್ಚಾ ಖಜಾಂಚಿ ಸಾರಿಕಾ, ಟೌನ್ ಕಾರ್ಯದರ್ಶಿ ಡಿ.ಎಂ.ಮುನೀಂದ್ರ, ಸುಬ್ಬಣ್ಣ, ರಾಘವ, ಸಾಗರ್, ರಾಜಣ್ಣ, ವೀಣಾಶ್ರೀನಿವಾಸ್, ಸೌಜನ್ಯ, ಪ್ರೇಮಾ ದೇವರಾಜ್, ಭಾಗ್ಯಮ್ಮ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.