ನೀರಿನ ಸಮಸ್ಯೆ ಇನ್ನೆಷ್ಟು ದಿನ ಜೀವಂತ ಇಡುತ್ತೀರಿ?: ಅಧಿಕಾರಿಗಳಿಗೆ ಶಾಸಕ ರುದ್ರಪ್ಪ ಲಮಾಣಿ ತರಾಟೆ

By Kannadaprabha NewsFirst Published May 22, 2023, 1:00 AM IST
Highlights

ನಗರದ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಮರ್ಪಕ ನೀರು ಪೂರೈಸಲು ನಗರಸಭೆ ಅಧಿಕಾರಿಗಳು ಮತ್ತು ವಾಲ್‌ಮನ್‌ಗಳು ಶ್ರಮಿಸಬೇಕೆಂದು ಶಾಸಕ ರುದ್ರಪ್ಪ ಲಮಾಣಿ ಸೂಚಿಸಿದರು. 

ಹಾವೇರಿ (ಮೇ.22): ನಗರದ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಮರ್ಪಕ ನೀರು ಪೂರೈಸಲು ನಗರಸಭೆ ಅಧಿಕಾರಿಗಳು ಮತ್ತು ವಾಲ್‌ಮನ್‌ಗಳು ಶ್ರಮಿಸಬೇಕೆಂದು ಶಾಸಕ ರುದ್ರಪ್ಪ ಲಮಾಣಿ ಸೂಚಿಸಿದರು. ಪ್ರವಾಸಿ ಮಂದಿರದಲ್ಲಿ ಭಾನುವಾರ ನಗರಸಭೆ ಅಧಿಕಾರಿಗಳ ಮತ್ತು ವಾಲ್‌ಮನ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆ ಪೂರೈಸುತ್ತಿರುವ ಕುಡಿಯುವ ನೀರು ಅಸಮರ್ಪಕ ಮತ್ತು ಅವೈಜ್ಞಾನಿಕವಾಗಿದೆ. ಬೇಸಿಗೆ ದಿನಗಳಲ್ಲಿ ಜನರು ತತ್ತರಿಸುವಂತಾಗಿದೆ. ಈ ಬಗ್ಗೆ ಅನೇಕರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. 

ನೀರಿನ ಸಮಸ್ಯೆಯನ್ನು ಇನ್ನೆಷ್ಟು ದಿನ ಜೀವಂತ ಇಡುತ್ತೀರಿ? ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಹೇಗೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ನಗರಸಭೆ ಸಹಾಯಕ ಎಂಜಿನಿಯರ್‌ ಕೃಷ್ಣ ನಾಯ್ಕ ಮಾತನಾಡಿ, ನಗರದ ವಾರ್ಡ್‌ ವ್ಯಾಪ್ತಿಯಲ್ಲಿ 387 ಕೊಳವೆ ಬಾವಿಗಳಿವೆ. ಅವುಗಳ ಪೈಕಿ 14 ನೀರುಣಿಸುತ್ತಿಲ್ಲ. ಕಂಚಾರಗಟ್ಟಿ ಗ್ರಾಮದಿಂದ ನಗರಕ್ಕೆ ನೀರು ಪೂರೈಸುವ ಪೈಪ್‌ಗಳು ಆಗಿಂದಾಗ್ಗೆ ಒಡೆಯುತ್ತಿವೆ. ಈ ಮಧ್ಯೆ ಅಂತರ್ಜಲ ಮಟ್ಟ ಕುಸಿದ ಪರಿಣಾಮ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ ಎಂದು ತಿಳಿಸಿದರು.

ಹುಣಸೂರು ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಹರೀಶ್‌ ಗೌಡ

ಆಗ ಮಧ್ಯೆ ಪ್ರವೇಶಿಸಿದ ನಗರಸಭೆ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ಅಧಿಕಾರಿಗಳು ಹೊಸದಾಗಿ ಕೊಳವೆ ಬಾವಿ ಕೊರೆಸಿ ಮೂರು ದಿನಗಳಿಗೊಮ್ಮೆ ನೀರು ಪೂರೈಸುವಂತಾಗಬೇಕು. ಆಯಾ ವಾರ್ಡ್‌ಗಳ ವಾಲ್‌ಮನ್‌ಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ತಮಗೆ ಹಳೆಯ ವೇತನ ಪದ್ಧತಿಯಲ್ಲಿ ವೇತನ ಪಾವತಿಸಲಾಗುತ್ತಿದೆ. ದುಬಾರಿ ದಿನಗಳಲ್ಲಿ ಬದುಕು ಮುನ್ನಡೆಸುವುದು ದುಸ್ತರವಾಗಿದೆ. ಈ ಬಗ್ಗೆ ತಾವು ನಮಗೆ ನ್ಯಾಯ ಒದಗಿಸಬೇಕೆಂದು ವಾಲ್‌ಮನ್‌ಗಳು ಶಾಸಕ ರುದ್ರಪ್ಪ ಲಮಾಣಿ ಅವರ ಗಮನಕ್ಕೆ ತಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಮೈದೂರ, ಬಸವರಾಜ ಹೆಡಿಗೊಂಡ, ಬಾಬಣ್ಣ ಮೋಮಿನಗಾರ, ದಾಸಪ್ಪ ಕರ್ಜಗಿ, ನಗರಸಭೆ ಸದಸ್ಯರಾದ ಗಣೇಶ ಬಿಷ್ಟಣ್ಣವರ, ವೆಂಕಟೇಶ ಬಿಜಾಪುರ, ನಗರಸಭೆ ಕಚೇರಿ ವ್ಯವಸ್ಥಾಪಕ ಉದಯಕುಮಾರ ಜಿ, ಜೆಇ ಮೊಹಮ್ಮದ್‌ ಸಮೀರ್‌, ಪವನ್‌ ಮತ್ತು ವಾಲ್‌ಮನ್‌ಗಳು ಇದ್ದರು.

ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ಗೆ ಲಾಭ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ

ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಉಲ್ಬಣಿಸಿದರೆ ವಾಲ್‌ಮನ್‌ಗಳು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಸಾರ್ವಜನಿಕರು ನನ್ನ ಬಳಿ ದೂರು ನೀಡಿದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಹಿಂಜರಿಯಲ್ಲ.
-ರುದ್ರಪ್ಪ ಲಮಾಣಿ ಶಾಸಕ

click me!