
ಎಂ.ಅಫ್ರೋಜ್ ಖಾನ್
ರಾಮನಗರ (ಮೇ.21): ರಾಜ್ಯದ ಉಪಮುಖ್ಯಮಂತ್ರಿಯಾಗಿ ಕನಕಪುರ ಕ್ಷೇತ್ರ ಶಾಸಕ ಡಿ.ಕೆ.ಶಿವಕುಮಾರ್ ಶನಿವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆಯೂ ನಿರೀಕ್ಷೆಗಳು ಮೂಡಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಅಸ್ತಿತ್ವಕ್ಕೆ ಬಂದ ರಾಮನಗರವು ಜಿಲ್ಲೆಯಾಗಿ 16 ವರ್ಷ ಪೂರ್ಣಗೊಂಡಿದೆ. ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳು ಕೈಗೆ ಸಿಗುವ ಕಾರಣ ಜನರು ರಾಜಧಾನಿಗೆ ಅಲೆದಾಡುವುದು ತಪ್ಪಿತೇ ವಿನಃ ಜಿಲ್ಲೆಯು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿಲ್ಲ ಎಂಬ ಕೊರಗು ಪ್ರತಿಯೊಬ್ಬರಿಗೂ ಕಾಡುತ್ತಿದೆ.
ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸ್ಥಾನಗಳಲ್ಲಿ ಅಗತ್ಯ ಸರ್ಕಾರಿ ಕಟ್ಟಡಗಳು ತಲೆ ಎತಿಲ್ಲ. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳು ಇಂದಿಗೂ ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಬಿಡದಿ ಮತ್ತು ಹಾರೋಹಳ್ಳಿ ಹೊರತು ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪನೆ ಆಗಿಲ್ಲ. ಜಿಲ್ಲೆಯ ಪ್ರವಾಸಿ ಸ್ಥಳಗಳ ಅಭಿವೃದ್ಧಿ, ನಾಲ್ಕೂ ತಾಲೂಕುಗಳಿಗೆ ಅನ್ವಯವಾಗುವಂತೆ ವೈಜ್ಞಾನಿಕ ಕಸವಿಲೇವಾರಿ ವ್ಯವಸ್ಥೆ, ಸತ್ತೇಗಾಲ ನೀರಾವರಿ ಯೋಜನೆ ಪೂರ್ಣಗೊಳಿಸುವ ಮೂಲಕ ಕೃಷಿಗಾಗಿ ಶಾಶ್ವತ ನೀರಾವರಿ, ಶುದ್ಧ ಕುಡಿಯುವ ನೀರು ಪೂರೈಸುವುದು.
ದುಬಾರಿಯಾಯ್ತು ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟ ಪ್ರವೇಶ: ಚಾರಣಿಗರ ಆಕ್ರೋಶ
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಆಗಬೇಕಾಗಿದೆ. ರೇಷ್ಮೆ, ಹೈನುಗಾರಿಕೆ ಹಾಗೂ ಮಾವು ಪ್ರಮುಖ ಕಸುಬುಗಳಾಗಿದ್ದು, ಇದನ್ನು ಅವಲಂಬಿಸಿರುವ ರೈತರ ಪ್ರಗತಿಗಾಗಿ ಪೂರಕ ಯೋಜನೆ ರೂಪಿಸಬೇಕಿದೆ. ರಾಮನಗರ ಮತ್ತು ಚನ್ನಪಟ್ಟಣವನ್ನು ಅವಳಿ ನಗರಗಳಂತೆ ಅಭಿವೃದ್ಧಿ ಪಡಿಸುವುದು. ಬಿಡದಿವರೆಗೆ ಮೆಟ್ರೋ ವಿಸ್ತರಣೆ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ, ರೇಷ್ಮೆಯಲ್ಲಿ ಉಪ ಉತ್ಪನ್ನಗಳು ತಯಾರಿಸುವ ಕಾರ್ಖಾನೆ ಸ್ಥಾಪನೆ, ಬೃಹತ್ ಕೈಗಾರಿಕಾ ವಲಯ ಸ್ಥಾಪಿಸಿ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಅವಶ್ಯಕತೆ ಇದೆ.
ಈಗ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾದ ಬಳಿಕ ರಾಮನಗರ ಜಿಲ್ಲೆಗೆ ಅವಶ್ಯಕತೆಯಿರುವ ಯೋಜನೆಗಳನ್ನು ಸಾಕಾರಗೊಳಿಸಿ ಏನೇನು ಕೊಡುಗೆ ನೀಡಲಿದ್ದಾರೆ ಎಂಬ ಬಗ್ಗೆ ಜನರಲ್ಲಿ ಕುತೂಹಲದ ಚರ್ಚೆಗಳು ನಡೆಯುತ್ತಿದ್ದು, ನಿರೀಕ್ಷೆಗಳು ಬೆಟ್ಟದಂತೆ ಬೆಳೆದು ನಿಂತಿವೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಚುನಾವಣೆಯಲ್ಲಿ ಆಯ್ಕೆಯಾದ ಚನ್ನಪಟ್ಟಣ ಕ್ಷೇತ್ರ ಶಾಸಕ ಎಚ್.ಡಿ.ಕುಮಾರಸ್ವಾಮಿ, ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಕೈಜೋಡಿಸಿದಾಗ ಮಾತ್ರ ನಿರೀಕ್ಷೆಗಳೆಲ್ಲವು ಸಾಕಾರಗೊಳ್ಳಲು ಸಾಧ್ಯ.
ರಾಮನಗರ ಕ್ಷೇತ್ರ
* ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ. ಈ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ.
* ನಗರ ಮತ್ತು ಹಳ್ಳಿಗಳಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದ್ದು, ತ್ವರಿತಗತಿಯಲ್ಲಿ ಮುಗಿಸಬೇಕು. ಆನಂತರ ರಸ್ತೆ, ಒಳಚರಂಡಿ ಹಾಗೂ ಯುಜಿಡಿ ಕಾಮಗಾರಿ ಪೂರ್ಣಗೊಳಿಸಬೇಕಿದೆ.
* ರಾಮನಗರ ನೂತನ ಜಿಲ್ಲಾಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಒದಗಿಸುವುದು, ಹಳೇಯ ಜಿಲ್ಲಾಸ್ಪತ್ರೆಯನ್ನು ತಾಯಿ ಮಗುವಿನ ಆಸ್ಪತ್ರೆಯನ್ನಾಗಿ ಮಾರ್ಪಡಿಸುವುದು.
* ರಾಮನಗರದಲ್ಲಿ ಸ್ಲಂ ಕ್ಲಿಯರೆನ್ಸ್ ಬೋರ್ಡಿನಿಂದ ದಶಕದ ಹಿಂದೆ ಮನೆ ನಿರ್ಮಿಸಿಕೊಡುವ ವಾಗ್ದಾನವನ್ನು ಪೂರೈಸುವುದು. ಬಡವರಿಗೆ ಸೂರು ಮತ್ತು ನಿವೇಶನ ಒದಗಿಸುವುದು.
* ಆರ್ಥಿಕತೆಯ ದೃಷಿಯಿಂದ ಇಲ್ಲಿನ ರೇಷ್ಮೆ ಗೂಡು ಮಾರುಕಟ್ಟೆಯನ್ನು ಸುಸಜ್ಜಿತ ಮಾರುಕಟ್ಟೆ(ಕೆ.ಆರ್.ಮಾರ್ಕಟ್ ರೀತಿಯಲ್ಲಿ) ನಿರ್ಮಾಣ ಮಾಡಿ ಉಳಿಸಿಕೊಳ್ಳುವುದು.
* ರಾಮನಗರದಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗಾಗಿ ಸುಸಜ್ಜಿತ ಬಸ್ ನಿಲ್ದಾಣ ಸ್ಥಾಪನೆ. ಅರ್ಕಾವತಿ ನದಿ ಶುದ್ಧೀಕರಣ, ಸುಸಜ್ಜಿತವಾದ ಕ್ರೀಡಾಂಗಣ, ಪಾರ್ಕ್ ನಿರ್ಮಾಣ.
ಕನಕಪುರ ಕ್ಷೇತ್ರ
* ಕಾವೇರಿ ನದಿಗೆ ಮೆಕೆದಾಟು ಬಳಿ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡುವುದು. ಏತ ನೀರಾವರಿಯ ಮೂಲಕ ತಾಲೂಕಿನಲ್ಲಿ ಕೆರೆಗಳನ್ನು ತುಂಬಿಸುವುದು ಮತ್ತು ಪ್ರಗತಿಯಲ್ಲಿರುವ ಏತ ನೀರಾವರಿಗಳನ್ನು ಪೂರ್ಣಗೊಳಿಸುವುದು.
* ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸಾಕಷ್ಟುಅಭಿವೃದ್ಧಿ ಕಾಣುತ್ತಿದ್ದು ಸಾರಿಗೆ ಒತ್ತಡ ಕಡಿಮೆ ಮಾಡಲು ಆರ್ಚ್ ಆಫ್ ಲೀವಿಂಗ್ ಆಶ್ರಮದಿಂದ 20 ಕಿ.ಮಿ ಮೆಟ್ರೊ ರೈಲು ವಿಸ್ತರಿಸುವುದು.
* ಕನಕಪುರ ತಾಲೂಕಿಗೆ ಇಲ್ಲಿವರೆಗೆ ರೈಲ್ವೆ ಸಂಪರ್ಕ ಸಾಧ್ಯವಾಗಿಲ್ಲ. ಬೆಂಗಳೂರಿನಿಂದ ಕನಕಪುರ - ಚಾಮರಾಜನಗರ ಮಾರ್ಗವಾಗಿ ತಮಿಳುನಾಡಿನ ಕೊಯಮತ್ತೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವುದು.
* ಪ್ರವಾಸೋಮದ್ಯಮಕ್ಕೆ ತಾಲೂಕಿನಲ್ಲಿ ಸಾಕಷ್ಟುಅವಕಾಶವಿದ್ದು ಸಂಗಮ -ಮೇಕೆದಾಟು ಅಭಿವೃದ್ದಿ, ಚುಂಚಿಫಾಲ್ಸ್ , ಮಾವತ್ತೂರು ಕೆರೆ ಅಭಿವೃದ್ಧಿ, ಟ್ರಕ್ಕಿಂಗ್ ಗೆ ಹೆಸರಾದ ಬೆಳಿಕಲ… ಬೆಟ್ಟ, ಅಚ್ಚಲು ಬೆಟ್ಟ, ಕಬ್ಬಾಳ್ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವುದು.
* ರೇಷ್ಮೆಗೆ ಹೆಸರಾಗಿರುವ ಕನಕಪುರ ತಾಲೂಕಿನಲ್ಲಿ ರೇಷ್ಮೆ ಟೆಕ್ನೊ ಪಾರ್ಕ್ ನಿರ್ಮಾಣ ಮಾಡಿ ರೇಷ್ಮೆಗೆ ಉತ್ತೇಜನ ನೀಡುವುದು.
* ಕನಕಪುರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದು. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ಸಕಲರಣೆ ಒದಗಿಸುವುದು.
ಮಾಗಡಿ ಕ್ಷೇತ್ರ
* ಮಹಿಳೆಯರಿಗೆ ಅನೂಕೂಲವಾಗುವಂತೆ ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ… ಸ್ಥಾಪನೆ ಹಾಗೂ ಬಿಡದಿ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶ ನೀಡುವುದು.
* ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ.
* ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮ ಅಭಿವೃದ್ಧಿಗೆ ಅನುದಾನ ಬಂದಿದೆ. ಆದರೆ, ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಿಲ್ಲ. ಕೆಂಪಾಪುರವನ್ನು ಅಭಿವೃದ್ಧಿ ಪಡಿಸುವುದು.
* ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಾಪುರ ಹಾಗೂ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರಾದ ಬಾನಂದೂರು ಗ್ರಾಮಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಚಾಲನೆಯೂ ದೊರಕಿದೆ. ಆದರೂ ಕಾಮಗಾರಿ ತೆವಳುತ್ತ ಸಾಗಿದೆ.
* ಬಿಡದಿ ಪಟ್ಟಣದವರೆಗೆ ಮೆಟ್ರೋ ವಿಸ್ತರಣೆ ಮಾಡುವುದು. ಬೆಂಗಳೂರು - ಮಾಗಡಿ ನಾಲ್ಕು ಪಥದ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಚಾಲನೆ ದೊರಕಬೇಕಿದೆ.
* ಮಾಗಡಿ ಪಟ್ಟಣದಲ್ಲಿ ಎಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜು ಸ್ಥಾಪನೆ ಮಾಡುವುದು.
* ಮಂಚನಬೆಲೆ ಜಲಾಶಯದಿಂದ ಮಾಗಡಿ ಪಟ್ಟಣಕ್ಕೆ ಪೂರೈಸುತ್ತಿರುವ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಸುವುದು. ವೈ.ಜಿ.ಗುಡ್ಡ ಜಲಾಶಯದಿಂದ ಕುಡಿಯುವ ನೀರು ಪೂರೈಸುವುದು. ಬೈರಮಂಗಲ ಭಾಗದ ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವುದು.
ಜೆಡಿಎಸ್ ಪಕ್ಷ ನಮಗೆ ತಾಯಿ, ದೇವೇಗೌಡರು ತಂದೆ ಇದ್ದಂತೆ: ಸಿ.ಎಸ್.ಪುಟ್ಟರಾಜು
ಚನ್ನಪಟ್ಟಣ ಕ್ಷೇತ್ರ
* ವಂದಾರಗುಪ್ಪೆ ಬಳಿ ರೇಷ್ಮೆಗೂಡಿನ ಹೈಟೆಕ್ ಮಾರುಕಟ್ಟೆಹಾಗೂ ಬೈರಾಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕವನ್ನು ತ್ವರಿಗತಿಯಲ್ಲಿ ನಿರ್ಮಾಣ ಮಾಡುವುದು.
* ಚನ್ನಪಟ್ಟಣದಲ್ಲಿ ಬಾಕಿ ಉಳಿದಿರುವ ಖಾಸಗಿ ಬಸ್ ನಿಲ್ದಾಣ ಪೂರ್ಣ ಗೊಳಿಸುವುದು. ಕಣ್ವ ಜಲಾಶಯದಲ್ಲಿ ಚಿಲ್ಡ್ರನ್ ಪಾರ್ಕ್ ಸ್ಥಾಪಿಸುವುದು.
* ಚನ್ನಪಟ್ಟಣ ನಗರ ವ್ಯಾಪ್ತಿಯ ಯುಜಿಡಿ ಕಾಮಗಾರಿ ಕಳೆದ 15 ವರ್ಷಗಳಿಂದ ಸ್ಥಗಿತ ಗೊಂಡಿದ್ದು, ನಗರವನ್ನು ಯುಜಿಡಿ ವ್ಯವಸ್ಥೆಗೆ ಒಳಪಡಿಸುವುದು. ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದು.
* ಚನ್ನಪಟ್ಟಣ ತಾಲೂಕಿನ ಪ್ರಧಾನ ಕಸುಬಾದ ಹೈನುಗಾರಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಶು ಆಹಾರ ಘಟಕ, ಪಶುಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ.
* 2004ರಿಂದ ಸ್ಥಗಿತ ಗೊಂಡಿರುವ ಕೆಎಸ್‌ಐಸಿಯ ಸ್ಪನ್ ಸಿಲ್‌್ಕ ಮಿಲ್ ಪುನರ್ ಆರಂಭಿಸುವುದು. ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಟರ್ಮಿನಲ್ ಮಾರುಕಟ್ಟೆಸ್ಥಾಪನೆ.
* ಸಂಕಷ್ಟದಲ್ಲಿರುವ ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆ ಉದ್ಯಮಕ್ಕೆ ನೆರವು ನೀಡುವುದು. ಗಾರ್ಮೆಂಟ್ಸ್ ಸ್ಥಾಪಿಸಿ ಸಾವಿರಾರು ಮಹಿಳೆಯರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.