ಕಾಂಗ್ರೆಸ್‌ 5 ಗ್ಯಾರಂಟಿ ಸ್ಕೀಂ ಜಾರಿ ಹೇಗೆ?: ರಾಜ್ಯ ಸರ್ಕಾರದ ಬೊಕ್ಕಸಕ್ಕೆ 65,000 ಕೋಟಿ ಹೆಚ್ಚುವರಿ ಹೊರೆ

By Kannadaprabha News  |  First Published May 20, 2023, 4:40 AM IST

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಮೊದಲ ಸಚಿವ ಸಂಪುಟದಲ್ಲೇ ತನ್ನ ಐದು ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ ಆದೇಶ ಹೊರಡಿಸಲಿದ್ದು, ಸುಮಾರು 65,000 ಕೋಟಿ ರು. ಹಣಕಾಸು ಒದಗಿಸುವ ಬೇಡಿಕೆ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟುಸವಾಲುಗಳು ಎದುರಾಗುವ ಸಾಧ್ಯತೆಯಿದೆ. 


ಬೆಂಗಳೂರು (ಮೇ.20): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಮೊದಲ ಸಚಿವ ಸಂಪುಟದಲ್ಲೇ ತನ್ನ ಐದು ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ ಆದೇಶ ಹೊರಡಿಸಲಿದ್ದು, ಸುಮಾರು 65,000 ಕೋಟಿ ರು. ಹಣಕಾಸು ಒದಗಿಸುವ ಬೇಡಿಕೆ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಈ ಎಲ್ಲಾ ಸವಾಲುಗಳನ್ನು ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ಮೆಟ್ಟಿ ನಿಂತು ತಾನು ನೀಡಿರುವ ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 65,000 ಕೋಟಿ ರು.ಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಈಗಾಗಲೇ ಬದ್ಧತಾ ವೆಚ್ಚ ಹೆಚ್ಚಾಗಿ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದಲ್ಲಿ ಈ ಯೋಜನೆಗಳ ಅನುಷ್ಠಾನ ಅಸಾಧ್ಯ ಎಂದು ಪ್ರತಿಪಕ್ಷಗಳ ಆರೋಪ. ಜತೆಗೆ, ಈ ಗ್ಯಾರಂಟಿಗಳು ಎಲ್ಲರಿಗೂ ಸಿಗುವುದೋ ಅಥವಾ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರವೇ ಎಂಬ ಯಕ್ಷಪ್ರಶ್ನೆಯಿದೆ. ಹೀಗೆ ಪ್ರತಿಯೊಂದು ಗ್ಯಾರಂಟಿಯೂ ಸಾಕಷ್ಟು ಸವಾಲು ಹಾಗೂ ಹಲವು ಪ್ರಶ್ನೆಗಳು ಹುಟ್ಟುಹಾಕಿದೆ. ಅವು-

Tap to resize

Latest Videos

ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!

200 ಯೂನಿಟ್‌ ಉಚಿತ ವಿದ್ಯುತ್‌ಗೆ 26000 ಕೋಟಿ ಬೇಕು: ಪ್ರತಿಯೊಬ್ಬರಿಗೂ 200 ಯುನಿಟ್‌ ಉಚಿತ ವಿದ್ಯುತ್‌ ಘೋಷಿಸಲಾಗಿದೆ. ಆದರೆ, ಈ ಸೌಲ್ಯಭ್ಯ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರವೇ ಅಥವಾ ಎಲ್ಲರಿಗೂ ದೊರೆಯುವುದೇ ಎಂಬ ಸ್ಪಷ್ಟತೆಯಿಲ್ಲ. ಪ್ರತಿಯೊಂದು ಗೃಹ ಬಳಕೆ ಸಂಪರ್ಕಕ್ಕೂ ಈ ಸೌಲಭ್ಯ ದೊರೆಯುತ್ತದೆ ಎಂದಿಟ್ಟುಕೊಳ್ಳಿ. ಆಗ ಪ್ರಸ್ತುತ ಎಸ್ಕಾಂಗಳ ವ್ಯಾಪ್ತಿಯಲ್ಲೂ 1.44 ಲಕ್ಷ ಗೃಹ ಬಳಕೆ ಸಂಪರ್ಕಗಳಿವೆ. ಪ್ರತಿಯೊಂದು ಸಂಪರ್ಕಕ್ಕೆ ಮಾಸಿಕ 1,500 ರು.ಗಳಂತೆ 26 ಸಾವಿರ ಕೋಟಿ ರು. ಆರ್ಥಿಕ ಹೊರೆ ಉಂಟಾಗಲಿದೆ. ಹಾಲಿ ಜಾರಿಯಿರುವ ಎಸ್ಸಿ ಹಾಗೂ ಎಸ್ಟಿಸಮುದಾಯಗಳಿಗೆ 75 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಅಮೃತ ಜ್ಯೋತಿ ಯೋಜನೆಯಿಂದ 44.41 ಲಕ್ಷ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಇದಕ್ಕೆ ಮಾಸಿಕ 800 ಕೋಟಿ ರು.ಗಳಂತೆ 9.6 ಸಾವಿರ ಕೋಟಿ ರು. ವೆಚ್ಚವಾಗುತ್ತಿದೆ. ಇದರ ಹೊರತಾಗಿಯೂ ರಾಜ್ಯ ಸರ್ಕಾರ 16,500 ಸಾವಿರ ಕೋಟಿ ರು.ಗಳಷ್ಟುಹೆಚ್ಚುವರಿ ಹೊರೆ ಹೊರಬೇಕಿದೆ.

ಷರತ್ತುಗಳ ಗೊಂದಲದ ಸವಾಲು: ಗೃಹಜ್ಯೋತಿ 200 ಯುನಿಟ್‌ ಉಚಿತ ವಿದ್ಯುತ್‌ ಎಪಿಎಲ್‌, ಬಿಪಿಎಲ್‌ ಎಲ್ಲಾ ಗ್ರಹಕರಿಗೂ ಅನ್ವಯವಾಗುತ್ತದೆಯೇ? ಅಥವಾ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರವೇ ಎಂಬ ಗೊಂದಲವಿದೆ. ಇನ್ನು 200 ಯುನಿಟ್‌ ಮೇಲ್ಪಟ್ಟು ವಿದ್ಯುತ್‌ ಬಳಕೆ ಮಾಡಿದವರಿಗೆ 200 ಯೂನಿಟ್‌ಗೂ ಪೂರ್ಣ ಶುಲ್ಕ ವಿಧಿಸಲಾಗುತ್ತದೆಯೇ? ಅಥವಾ ಹೆಚ್ಚುವರಿ ಬಳಕೆಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆಯೇ ಎಂಬ ಸ್ಪಷ್ಟತೆ ಇಲ್ಲ. ಹಾಲಿ ಇರುವ ಉಚಿತ ವಿದ್ಯುತ್‌ ಯೋಜನೆಗಳಲ್ಲಿ ಗ್ರಾಹಕರು ಮೊದಲು ಶುಲ್ಕ ಪಾವತಿಸಿ ಸರ್ಕಾರದಿಂದ ಡಿಬಿಟಿ ರೂಪದಲ್ಲಿ ಪರಿಹಾರ ಪಡೆಯಬೇಕು. ಗೃಹ ಜ್ಯೋತಿಯಲ್ಲೂ ಮೊದಲು ಶುಲ್ಕ ಪಾವತಿಸಬೇಕೆ ಅಥವಾ ಶುಲ್ಕವನ್ನು ಸಂಗ್ರಹಿಸದೆ ಸರ್ಕಾರವೇ ಎಸ್ಕಾಂಗಳಿಗೆ ಪಾವತಿಸಲಿದೆಯೇ ಎಂಬ ಸ್ಪಷ್ಟತೆ ಬರಬೇಕಿದೆ.

ಮನೆ ಯಜಮಾನಿಗೆ 2000 ರು. ನೀಡಲು ಬೇಕು 36,000 ಕೋಟಿ ರು.: ರಾಜ್ಯದಲ್ಲಿ ಬಿಪಿಎಲ್‌ ಹಾಗೂ ಎಪಿಎಲ್‌ ಸೇರಿದಂತೆ 1.50 ಕೋಟಿ ಕಾರ್ಡ್‌ದಾರರಿದ್ದಾರೆ. ಪ್ರತಿ ಕುಟುಂಬದ ಮನೆಯೊಡತಿಗೆ ಮಾಸಿಕ 2,000 ರು. ಸಹಾಯಧನ ಘೋಷಣೆ ಮಾಡಲಾಗಿದೆ. ಇದರಿಂದ ವಾರ್ಷಿಕ 1.50 ಕೋಟಿ ಫಲಾನುಭವಿಗಳಿಗೆ 36,000 ಕೋಟಿ ರು. ಆರ್ಥಿಕ ಹೊರೆ ಉಂಟಾಗಲಿದೆ. ಈ ಗ್ಯಾರಂಟಿ ಘೋಷಣೆ ವೇಳೆ ಪ್ರತಿಯೊಬ್ಬರಿಗೂ ಈ ಸೌಲಭ್ಯ ದೊರೆಯಲಿದೆ ಎಂದು ಹೇಳಲಾಗಿದೆ. ಅನುಷ್ಠಾನದ ವೇಳೆ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಸೀಮಿತ ಮಾಡುತ್ತಾರೆಯೇ? ಅಥವಾ ಹಿರಿಯ ನಾಗರಿಕರ ಪಿಂಚಣಿ, ವಿಧವಾ ಪಿಂಚಣಿಯಂತಹ ಸಾಮಾಜಿಕ ಪಿಂಚಣಿ ಫಲಾನುಭವಿಯಾಗಿದ್ದರೆ ಪಿಂಚಣಿಗೆ ಹೆಚ್ಚುವರಿಯಾಗಿ ಗೃಹಲಕ್ಷ್ಮೇ ಹಣ ನೀಡಲಾಗುತ್ತದೆಯೇ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.

‘ಅನ್ನಭಾಗ್ಯ’ ವರ್ಷಕ್ಕೆ 26.04 ಲಕ್ಷ ಟನ್‌ ಹೆಚ್ಚುವರಿ ಅಕ್ಕಿ ಅಗತ್ಯ!: ಪ್ರತಿ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿರುವ ಪ್ರತಿಫಲಾನುಭವಿಗಳಿಗೆ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ಘೋಷಿಸಲಾಗಿದೆ. ಪ್ರಸ್ತುತ ಕೇಂದ್ರದಿಂದ 5 ಕೆ.ಜಿ ಹಾಗೂ ರಾಜ್ಯದಿಂದ 1 ಕೆ.ಜಿ ಸೇರಿ 6 ಕೆಜಿ ಅಕ್ಕಿ ಪ್ರತಿ ಸದಸ್ಯನಿಗೆ ಉಚಿತವಾಗಿ ಸಿಗುತ್ತಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಸಿಗುತ್ತಿರುವ 5 ಕೆ.ಜಿ ಅಕ್ಕಿಗೆ ಮತ್ತೆ 5 ಕೆ.ಜಿ ಅಕ್ಕಿ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ನೀಡಬೇಕಿದೆ. ಅದಕ್ಕಾಗಿ 2.17 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ರಾಜ್ಯ ಸರ್ಕಾರ ಹೊಂದಿಸಬೇಕಿದ್ದು, 10 ಸಾವಿರ ಕೋಟಿ ರು. ವ್ಯಯಿಸಬೇಕಾಗುತ್ತದೆ.

ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 30 ರು.ನಂತೆ ಖರೀದಿ ಮಾಡಿ, ರಾಜ್ಯಗಳಿಗೆ ಕೆಜಿಗೆ 3 ರು.ನಂತೆ ಹಂಚಿಕೆ ಮಾಡುತ್ತಿತ್ತು. ಕಳೆದ ಡಿಸೆಂಬರ್‌ನಿಂದ ಕೇಂದ್ರ ಸರ್ಕಾರವೇ ಉಚಿತವಾಗಿ ಬಿಪಿಎಲ್‌, ಅಂತ್ಯೋದಯ ಕಾರ್ಡುದಾರರಿಗೆ ಅಕ್ಕಿಯನ್ನು ವಿತರಿಸುತ್ತಿದೆ. ಇದೀಗ ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿಯಂತೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು, ಕೇಂದ್ರದ ಮೊರೆ ಹೋಗಬೇಕು. ಇಲ್ಲವೇ ಖುದ್ದಾಗಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ಖರೀದಿ ಮಾಡಬೇಕಾಗುತ್ತದೆ.

ಮಹಿಳೆಯರ ‘ಉಚಿತ ಪ್ರಯಾಣಕ್ಕೆ’ 3,250 ಕೋಟಿ ರು. ಬೇಕು!: ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿಗೆ ಅಂದಾಜು 3,250 ಕೋಟಿ ರು. ಬೇಕಾಗಬಹುದು ಎಂದು ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಸದ್ಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಪ್ರತಿದಿನ ಒಟ್ಟು 88 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಅದರಲ್ಲಿ ಶೇ. 35ರಿಂದ 40ರಷ್ಟುಮಹಿಳಾ ಪ್ರಯಾಣಿಕರು. ಅಲ್ಲದೆ, ನಾಲ್ಕೂ ನಿಗಮಗಳಿಂದ ಪ್ರತಿದಿನ 23.5 ಕೋಟಿ ರು. ಆದಾಯವಿದೆ. ಮಹಿಳಾ ಪ್ರಯಾಣಿಕರಿಂದಲೇ ಅಂದಾಜು 9 ಕೋಟಿ ರು. ಆದಾಯ ಬರುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದರೆ ನಿಗಮಗಳಿಗೆ ನಿತ್ಯ 9 ಕೋಟಿ ರು. ಆದಾಯ ಖೋತಾ ಆಗಲಿದ್ದು, ಇದು ಮಾಸಿಕ 270 ಕೋಟಿ ರು. ಹಾಗೂ ವಾರ್ಷಿಕ 3,250 ಕೋಟಿ ರು. ಆಗುತ್ತದೆ.

ಸವಾಲುಗಳೇನು?: ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ? ಎಲ್ಲಾ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣದ ಪಾಸು ನೀಡುತ್ತಾರೆಯೇ? ಪಾಸು ನೀಡದೆ ಪ್ರತಿಯೊಬ್ಬ ಮಹಿಳೆಗೂ ಮುಕ್ತವಾಗಿ ಅವಕಾಶ ನೀಡಿದರೆ ಬೇರೆ ರಾಜ್ಯದ ಮಹಿಳೆಯರೂ ಉಚಿತವಾಗಿ ಸಂಚರಿಸುತ್ತಾರೆ. ಹೀಗಾಗಿ ಅನುಷ್ಠಾನ ವಿಚಾರದಲ್ಲಿ ಸರ್ಕಾರ ಸಾಕಷ್ಟುಸವಾಲುಗಳನ್ನು ಎದುರಿಸಲಿದೆ.

‘ಯುವನಿಧಿ’ ಫಲಾನುಭವಿಗಳ ಆಯ್ಕೆಯೇ ಸವಾಲು: ಪದವೀಧರರಿಗೆ 3 ಸಾವಿರ ರು. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರು. ಮಾಸಿಕ ನಿರುದ್ಯೋಗ ಭತ್ಯೆ ನೀಡುವ ‘ಯುವ ನಿಧಿ’ ಫಲಾನುಭವಿಗಳ ಆಯ್ಕೆಯೇ ಸವಾಲಾಗಿದೆ. ಯೋಜನೆಯಿಂದ 3 ಸಾವಿರ ಕೋಟಿ ರು. ಆರ್ಥಿಕ ಹೊರೆ ನಿರೀಕ್ಷಿಸಿದ್ದರೂ ಫಲಾನುಭವಿಗಳ ಅಂದಾಜು ಸರ್ಕಾರಕ್ಕೆ ಇನ್ನೂ ಸಿಕ್ಕಿಲ್ಲ. ಪದವಿ ಪೂರೈಸಿದ ಬಳಿಕ 26 ವರ್ಷದವರೆಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಕಾಂಗ್ರೆಸ್‌ ಹೇಳಿದೆ. ಆದರೆ, ಪದವಿ ಪೂರೈಸಿದ ಬಳಿಕ ಎಷ್ಟುಮಂದಿ ನಿರುದ್ಯೋಗಿಗಳಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವುದು ಹೇಗೆ ಎಂಬುದು ಗೊಂದಲವಾಗಲಿದೆ. ನಿರುದ್ಯೋಗದ ಮಾನದಂಡ ನಿಗದಿ ಹಾಗೂ ಅರ್ಹ ಫಲಾನುಭವಿಗಳ ಆಯ್ಕೆ ಸವಾಲಾಗಲಿದೆ.

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಪ್ರಜ್ವಲ್‌ ನಿಲ್ಲಲ್ಲ: ಭವಾನಿ ರೇವಣ್ಣ

ಪಡಿತರ ಅಂಕಿ-ಅಂಶ:
1.50 ಲಕ್ಷ - ಒಟ್ಟು ಪಡಿತರ ಚೀಟಿದಾರರು
1.15 ಕೋಟಿ - ಬಿಪಿಎಲ್‌
23.96 ಲಕ್ಷ - ಎಪಿಎಲ್‌
10.90 ಲಕ್ಷ ಅಂತ್ಯೋದಯ

ಗ್ಯಾರಂಟಿ ಯೋಜನೆಗಳ ಷರತ್ತುಗಳ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ. ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡುತ್ತೇವೆ. ಜಾರಿ ಮಾಡಿದ ಬಳಿಕ ಎಲ್ಲವನ್ನೂ ವಿವರವಾಗಿ ತಿಳಿಸುತ್ತೇವೆ.
- ಡಿ.ಕೆ. ಶಿವಕುಮಾರ್‌, ನಿಯೋಜಿತ ಉಪಮುಖ್ಯಮಂತ್ರಿ.

click me!