ಹನಿಟ್ರ್ಯಾಪ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಕೊಡುತ್ತಾರೋ ಮತ್ತೊಂದು ಮಾಡುತ್ತಾರೋ ಮಾಡಲಿ. ಅದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬಿಟ್ಟದ್ದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ತುಮಕೂರು (ಏ.02): ಹನಿಟ್ರ್ಯಾಪ್ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಕೊಡುತ್ತಾರೋ ಮತ್ತೊಂದು ಮಾಡುತ್ತಾರೋ ಮಾಡಲಿ. ಅದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಬಿಟ್ಟದ್ದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಯಾವ ತನಿಖೆ ಆಗುತ್ತೋ ಆಗಲಿ, ನೋಟಿಸ್ ಕೊಡುತ್ತಾರೋ ಕೊಡಲಿ ಎಂದ ಅವರು ಕೆಲವೊಂದು ವಿಚಾರಗಳನ್ನು ಹೇಳಲಿಕ್ಕೆ ಆಗುವುದಿಲ್ಲ ಎಂದರು. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ರಾಜೇಂದ್ರನನ್ನು ಕೇಳಿ, ಸದ್ಯ ತನಿಖೆ ಆಗುತ್ತಿದ್ದು ತನಿಖೆ ಮಧ್ಯದಲ್ಲಿ ಏನು ಮಾತನಾಡುವುದು ಎಂದರು.
ಆಡಿಯೋ ವೈರಲ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ನೀವೇ (ಮಾಧ್ಯಮದವರು) ತೋರಿಸಿದ್ದೀರಲ್ಲ, ಅದರ ಬಗ್ಗೆ ನಾನೇನು ಹೇಳಲಿಕ್ಕೆ ಆಗುವುದಿಲ್ಲ ಎಂದರು. ಇಂತಹ ಕಾನೂನು ಬಾಹಿರ ಕ್ರಮಕ್ಕೆ ಯಾರ ಕುಮ್ಮಕ್ಕಿರಲಿ, ಪ್ರಯತ್ನವಿರಲಿ, ದೇವರು ಒಳ್ಳೆಯದು ಮಾಡುವುದಿಲ್ಲ. ಜೊತೆಗೆ ಅವರು ಸಾರ್ವಜನಿಕ ಜೀವನದಲ್ಲಿ ಇರಬಾರದು ಎಂದರು. ನಾನು ಬೇರೆಯವರಿಗೋಸ್ಕರ ಅಲ್ಲ, ನನ್ನನ್ನು ಸೇರಿಸಿ ಹೇಳುತ್ತಿರುವುದು ಎಂದ ಅವರು ಬೆಂಗಳೂರು, ಮುಂಬೈ ಯಾರು ಬೇಕಾದರೂ ಇರಬಹುದು. ನಮ್ಮ ಪಕ್ಷದವರು, ಇನ್ನೊಂದು ಪಕ್ಷದವರು ಯಾರೇ ಪ್ರಯತ್ನ ಮಾಡಲಿ ಈ ರೀತಿಯ ಹೀನ ಕೃತ್ಯಗಳಿಗೆ ಪ್ರಯತ್ನ ಮಾಡಿರುವುದು ಖಂಡನಾರ್ಹ ಎಂದರು.
ಪೊಲೀಸರು ಭೇದಿಸುತ್ತಾರೆ: ಸಚಿವ ರಾಜಣ್ಣ ಪುತ್ರ, ಶಾಸಕ ರಾಜೇಂದ್ರ ಹತ್ಯೆ ಸುಪಾರಿ ವಿಚಾರವನ್ನು ಗೃಹ ಸಚಿವರು, ಪೊಲೀಸರು ನೋಡಿಕೊಳ್ಳುತ್ತಾರೆ. ಅವರು ಪ್ರಕರಣವನ್ನು ಬಯಲಿಗೆಳೆದೇ ಎಳೆಯುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹನಿಟ್ರ್ಯಾಪ್ ವಿಚಾರದಲ್ಲಿ ದೂರು ಏಕೆ ಕೊಟ್ಟಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಯಾವುದೇ ಒತ್ತಡ ಇಲ್ಲ. ದೂರು ಕೊಡೋದು ಅವರಿಗೆ ಬಿಟ್ಟ ವಿಚಾರ. ಯಾಕೆ ಏನು ಅನ್ನೋದನ್ನ ರಾಜಣ್ಣರಿಗೆ ಕೇಳಬೇಕು ಎಂದರು.
ಸಚಿವ ರಾಜಣ್ಣ ಹನಿಟ್ರ್ಯಾಪ್ ಕೇಸಿಗೆ ಸಿಐಡಿ ಎಂಟ್ರಿ: ವಿಚಾರಣೆ ಶುರು, ಶೀಘ್ರದಲ್ಲೇ ನೋಟಿಸ್!
ಸಂಪುಟ ಪುನರ್ ರಚನೆ ಕುರಿತು ಸಿಎಂ ನಿರಾಸಕ್ತಿ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾರು ಆಸಕ್ತಿ ಹೊಂದಿದ್ದಾರೋ, ಯಾರು ಹೊಂದಿಲ್ಲವೋ ಅವರನ್ನೇ ಕೇಳಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಮಾತನಾಡಿ, ಇದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಪಕ್ಷದ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ನಾವು ಮಾತನಾಡುವುದರಲ್ಲಿ ಅರ್ಥ ಇಲ್ಲ. ಎಲ್ಲರೂ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತಾರೆ. ಹೈಕಮಾಂಡ್ ಭೇಟಿ ಮಾಡಿ ಹೇಳೋದು - ಕೇಳೋದು ಇರುತ್ತೆ, ಅಭಿಪ್ರಾಯ, ಸಲಹೆ ಪಡೆಯೋದು ಇರುತ್ತೆ ಎಂದು ಹೇಳಿದರು.