ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ, ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಬೆಂಗಳೂರು (ಏ.02): ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ, ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯತ್ನಾಳ ವಿಚಾರದಲ್ಲಿ ಯಾರೂ ಮಾತನಾಡದಂತೆ ಕೇಂದ್ರ ನಾಯಕರು ಸೂಚನೆ ನೀಡಿದ್ದಾರೆ. ಹೀಗಾಗಿ, ಉಚ್ಚಾಟನೆ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವು ಒಳ್ಳೆಯ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಉಮಾಭಾರತಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಆರು ವರ್ಷದ ಬಳಿಕ ಪಕ್ಷಕ್ಕೆ ಹಿಂತಿರುಗಿದಾಗ ಅವರು ಸುಸ್ತಾಗಿದ್ದರು. ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಯತ್ನಾಳ ವಿಚಾರದಲ್ಲಿಯೂ ಮುಂದೆ ಈ ರೀತಿಯಾಗದಂತೆ ತೀರ್ಮಾನ ಕೈಗೊಳ್ಳಬೇಕಾಗಿದೆ. ಪಕ್ಷವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ. ಜೊತೆಗೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು.
ಪಕ್ಷವನ್ನು ಸಂಘಟಿಸಲು ವೈಯಕ್ತಿಕ ವಿಚಾರಗಳನ್ನು ತರಬಾರದು. ಪಕ್ಷದ ವಿಚಾರನೇ ಬೇರೆ, ವೈಯಕ್ತಿಕ ವಿಚಾರವೇ ಬೇರೆ. ಎರಡನ್ನೂ ಸೇರಿಸುವುದು ಶೋಭೆ ತರುವುದಿಲ್ಲ. ಒಡೆದ ಮನಸ್ಸುಗಳಿರಬಹುದು, ದೂರವಾಗಿರುವ ಮನಸ್ಸುಗಳಿರಬಹುದು. ಅವುಗಳನ್ನು ಒಗ್ಗೂಡಿಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಎಲ್ಲರನ್ನೂ ಸೇರಿಸಿಕೊಂಡು ಪಕ್ಷವನ್ನು ಕಟ್ಟಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದ್ದು, ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ಶ್ರೀರಾಮುಲು ತಿಳಿಸಿದರು.
ಶಾಸಕ ಯತ್ನಾಳ್ ಹೊಸ ರಾಜಕೀಯ ಪಕ್ಷ ಕಟ್ಟುವುದು ಊಹಾಪೋಹ: ಬಿ.ಶ್ರೀರಾಮುಲು
ಸಿಬಿಐ ತನಿಖೆ ಆಗಲಿ: ಹನಿಟ್ರ್ಯಾಪ್ ಪ್ರಕರಣದಿಂದ ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ. ಇದೊಂದು ಫ್ಯಾಶನ್- ಟ್ರೆಂಡ್ ಆಗಿದೆ. ಹನಿಟ್ರ್ಯಾಪ್‌ಗೆ ಯಾರು ಡೈರೆಕ್ಟರ್, ಯಾರು ಪ್ರೊಡ್ಯೂಸರ್ ಅನ್ನೋದು ಗೊತ್ತಾಗಬೇಕಾದರೆ ಸಿಬಿಐ ತನಿಖೆಯಾಗಲಿ ಎಂದು ಮಾಜಿ ಸಚಿವ ಶ್ರೀರಾಮುಲು ಆಗ್ರಹಿಸಿದ್ದಾರೆ. ಹನಿಟ್ರ್ಯಾಪ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಒಂದು ಫ್ಯಾಶನ್ ಆಗಿದೆ. ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ. ಯಾವುದೇ ಪಕ್ಷದವಿದ್ದರೂ ಈ ರೀತಿ ಹನಿಟ್ರ್ಯಾಪ್‌ನಿಂದ ಮುಜುಗರ ಆಗುತ್ತದೆ. ರಾಜಕಾರಣಿಗಳು ಹಲವು ವರ್ಷಗಳಿಂದ ಜನರ ಪ್ರೀತಿಗಳಿಸಿ ದೊಡ್ಡಮಟ್ಟದಲ್ಲಿ ಬೆಳೆದಿರುವಾಗ, ಇಂತಹ ಸಂದರ್ಭದಲ್ಲಿ ಹನಿಟ್ರ್ಯಾಪ್‌ನಿಂದ ಮನಸ್ಸಿಗೆ ನೋವು ಮಾಡುವ ಕೆಲಸವನ್ನು ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ. ಹನಿಟ್ರ್ಯಾಪ್ ಹಿಂದೆ ಯಾರ ಕೈವಾಡವಿದೆ ಎಂದು ತಿಳಿಯಲು ಸಿಬಿಐ ತನಿಖೆ ಆಗಬೇಕು ಎಂದರು.