ರಾಜ್ಯದ ಜನರು ಕಾಂಗ್ರೆಸ್ ಪಕ್ಷದ 136 ಮಂದಿ ಶಾಸಕರನ್ನು ಚುನಾಯಿಸಿ ಕಳುಹಿಸಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಷಡ್ಯಂತ್ರ ನಡೆಸುತ್ತಿದ್ದಾರೆ. ಭ್ರಷ್ಟ ಬಿಜೆಪಿ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಒಪ್ಪುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಿನ ನಾಲ್ಕು ವರ್ಷವೂ ಸ್ವಚ್ಛ, ಜನಪರ ಆಡಳಿತ ನೀಡಲಿದೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ರಾಮನಗರ(ಆ.03): ರಾಜ್ಯದಲ್ಲಿ ಅಧಿಕಾರದಲ್ಲಿರುವ ಪ್ರಜಾಪ್ರಭುತ್ವ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದರು.
ಬಿಡದಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧ ಜನಾಂದೋಲನದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಕಾಂಗ್ರೆಸ್ ಪಕ್ಷದ 136 ಮಂದಿ ಶಾಸಕರನ್ನು ಚುನಾಯಿಸಿ ಕಳುಹಿಸಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಷಡ್ಯಂತ್ರ ನಡೆಸುತ್ತಿದ್ದಾರೆ. ಭ್ರಷ್ಟ ಬಿಜೆಪಿ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಒಪ್ಪುವುದಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಿನ ನಾಲ್ಕು ವರ್ಷವೂ ಸ್ವಚ್ಛ, ಜನಪರ ಆಡಳಿತ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೀಡಿರುವ ನೋಟಿಸ್ ಅಸಂವಿಧಾನಿಕವಾಗಿದ್ದು, ಮುಡಾ ಹಗರಣದ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಒಂದೇ ಒಂದು ಸಾಕ್ಷಿ ಇದ್ದರೆ ಕೊಡಿ ಎಂದು ಜಿ.ಪರಮೇಶ್ವರ್ ಸವಾಲು ಹಾಕಿದರು.
undefined
ಕೋವಿಡ್ ಕಾಲದಲ್ಲಿ ಮಾಸ್ಕ್ ನಲ್ಲಿಯೂ ಕೊಳ್ಳೆ ಹೊಡೆದಿರುವ ಬಿಜೆಪಿ, 4 ಸಾವಿರ ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆಸಿದೆ. ಎಪಿಎಂಸಿ ಹಗರಣ, ಕರಕುಶಲ ನಿಗಮದ ಹರಗಣ ಹೀಗೆ ಹತ್ತು ಹಲವು ಹರಗಣಗಳನ್ನು ನಡೆಸಿರುವ ಬಿಜೆಪಿ ಮುಡಾ ಹಗರಣದ ಬಗ್ಗೆ ಇನ್ನಿಲ್ಲದ ಆರೋಪ ಮಾಡುವ ಮೊದಲು ತಮ್ಮ ಕಾಲದಲ್ಲಿ ನಡೆದಿರುವ ಹಗರಣಗಳು ಸಾಕ್ಷಿ ಸಮೇತ ಬಯಲಾಗಿವೆ. ಅವುಗಳಿಗೆ ಮೊದಲು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಕೂಡಿಕೆ ಮದುವೆಗೆ ಆಯಸ್ಸಿಲ್ಲ:
ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಜೆಡಿಎಸ್-ಬಿಜೆಪಿ ಸಾಕಷ್ಟು ವ್ಯಂಗ್ಯವಾಡಿದ್ದರು. ಅವರಿಗೆ ಜನರೇ ಉತ್ತರ ನೀಡಿದ್ದಾರೆ. ಯೋಜನೆಗಳು ಜನಪರವಾಗಿದ್ದು, ಈ ಯೋಜನೆಗಳಿಗೆ ಮಸಿ ಬಳಿಯಲು ಬಿಜೆಪಿ-ಜೆಡಿಎಸ್ ಇನ್ನಿಲ್ಲದ ಆರೋಪ ಮಾಡುತ್ತಿವೆ. ಕಾಂಗ್ರೆಸ್ ಜೊತೆ ಸೇರಿಕೊಂಡಿದ್ದ ಕುಮಾರಸ್ವಾಮಿ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ. ಮುಂದೆ ಬಿಜೆಪಿಯವರಿಗೂ ಇದು ತಿಳಿಯಲಿದೆ. ಅವರಿಬ್ಬರದ್ದು ಕೂಡಿಕೆ ಮದುವೆಯಾಗಿದ್ದು ಇದರ ಆಯಸ್ಸು ಕಡಿಮೆ, ಸದ್ಯದಲ್ಲೇ ಬೇರ್ಪಡಲಿದ್ದಾರೆ ಎಂದು ಡಾ. ಪರಮೇಶ್ವರ್ ಭವಿಷ್ಯ ನುಡಿದರು.
ಗೌಡರ ಕುಟುಂಬ 48 ಸೈಟು ಪಡೆದಿದೆ:
ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿ, ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರದ್ದು ಎಷ್ಟು ನಿವೇಶನ ಇವೆ. 1986ರಲ್ಲಿ ಎಚ್.ಡಿ.ದೇವೇಗೌಡರ ಕುಟುಂಬ 48 ಸೈಟುಗಳನ್ನು ಪಡೆದುಕೊಂಡಿದೆ. ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡವರು ಯಾರು, ಭ್ರಷ್ಟಾಚಾರದಲ್ಲಿ ಮುಳುಗಿದ್ದವರು ಸ್ವಾರ್ಥಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳ ಪಾತ್ರ ಇಲ್ಲ:
ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಯಾವುದೇ ಪಾತ್ರ ಇಲ್ಲ. ದಾಖಲೆಗಳು ಸ್ಪಷ್ಟವಾಗಿದೆ. ವಾಲ್ಮಿಕಿ ನಿಗಮದ ಹಗರಣದಲ್ಲಿ ಏನೂ ಮಾಡಲಾಗಲಿಲ್ಲ ಎಂದು ಮುಡಾ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಸರ್ಕಾರದಲ್ಲಿ 13 ಸಚಿವರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿದ್ದರು. ಪಾದಯಾತ್ರೆ ಬಂದಾಗ ಇದನ್ನು ನೀವೆಲ್ಲರೂ ಪ್ರಶ್ನಿಸಬೇಕು ಎಂದರು.
ಜನಾಂದೋಲನಕ್ಕೂ ಮುನ್ನಾ ಬೈಕ್ ರ್‍ಯಾಲಿ
ಬಿಡದಿಯಲ್ಲಿ ನಡೆದ ಜನಾಂದೋಲನಕ್ಕೂ ಮುನ್ನಾ ಕಾಂಗ್ರೆಸ್ ಕಾರ್ಯಕರ್ತರು ಮಂಚನಾಯಕನಹಳ್ಳಿ ಬಳಿಯಿಂದ ಬಿಡದಿವರೆಗೆ ಬೈಕ್ ರ್ಯಾಲಿ ನಡೆಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹಿಂಬದಿ ಕೂರಿಸಿಕೊಂಡು ಶಾಸಕ ಬಾಲಕೃಷ್ಣ ಬೈಕ್ ರೈಡ್ ಮಾಡಿದರು. ಈ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಕೋವಿಡ್ ಅವಧಿಯಲ್ಲಿ ಬಿಜೆಪಿಯಲ್ಲಿ ಆಗಿರುವ ಅನ್ಯಾಯ, ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಬಗ್ಗೆ ಬಿಜೆಪಿ - ಜೆಡಿಎಸ್ ನಾಯಕರು ಪಾದಯಾತ್ರೆ ಮೂಲಕ ಊರಿಗೆ ಬಂದಾಗ ನೀವುಗಳೇ (ಜನರು) ಪ್ರಶ್ನಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಾಲಕ್ಕಾಣಿ ಕುಂಕುಮವನ್ನು ನಾನೂರು ಜನರಿಗೆ ಹಂಚಿಕೊಂಡು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಮುಡಾದಲ್ಲಿ ಅತಿಹೆಚ್ಚು ನಿವೇಶನಗಳನ್ನು ಕುಮಾರಸ್ವಾಮಿ ಮತ್ತವರ ಕುಟುಂಬದವರೇ ಹೊಂದಿದ್ದಾರೆ. ಇದೇ ಕಾರಣಕ್ಕೆ ಪಾದಯಾತ್ರೆಗೆ ಕುಮಾರಸ್ವಾಮಿ ಮೊದಲು ವಿರೋಧಿಸಿದ್ದರು. ಇವರನ್ನು ಸಮಾಧಾನ ಪಡಿಸಿ ಬಿಜೆಪಿಯವರು ಪಾದಯಾತ್ರೆಗೆ ಕರೆತರುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಹೇಳಿದ್ದಾರೆ.
ಮುಡಾ ಹಗರಣವನ್ನು ಸಿಎಂ ಸಿದ್ದರಾಮಯ್ಯ ಅವರ ತಲೆಗೆ ಕಟ್ಟಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪಾದಯಾತ್ರೆ ನಡೆಸುತ್ತಿದ್ದಾರೆ. ಹಿಂದೆ ಐಟಿ, ಇಡಿ ಬಳಸಿಕೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. 40 ಪರ್ಸೆಂಟ್ ಕಮಿಷನ್ ಲೂಟಿ ಮಾಡಿದ, ಜಾತಿ ಧರ್ಮದ ನಡುವೆ ಕಂದಕ ಸೃಷ್ಟಿಸಿದ ಬಿಜೆಪಿಯವರು ಬುದ್ಧಿ ಹೇಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ಮನೆ ಹಾಳು ಐಡಿಯಾ ಮಾಡುತ್ತಿದೆ. ಸಿದ್ದರಾಮಯ್ಯನವರ ಪತ್ನಿ ಮನೆಯಿಂದಲೇ ಹೊರಗೆ ಬಂದವರಲ್ಲ, ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡಿದವರಲ್ಲ. ಅವರಿಗೆ ಬಂದ ಉಡುಗೊರೆಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಸ್.ರವಿ ಹೇಳಿದ್ದಾರೆ.
ರಾಮನಗರ ಜಿಲ್ಲೆ ಹೆಸರು ಮರು ಸ್ಥಾಪನೆ ಮಾಡೇ ಮಾಡ್ತೀವಿ; ಡಿಕೆಶಿಗೆ ಸವಾಲೆಸೆದ ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಅಧಿಕಾರದಲ್ಲಿದ್ದಾಗ ಸಾಕಷ್ಟು ಹಗರಣಗಳನ್ನು ಮಾಡಿದೆ. ಅಭಿವೃದ್ಧಿ ಕೆಲಸಗಳಿಗೆ ರಾಜ್ಯದೊಂದಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಇದೀಗ ಮುಡಾ ಹೆಸರನ್ನು ಮುಂದು ಮಾಡಿಕೊಂಡು ಪಾದಯಾತ್ರೆ ನಡೆಸಿ ತಮ್ಮ ಹುಳುಕು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸಕರ್ಾರದ ಅವಧಿಯಲ್ಲಿ 21 ಹಗರಣಗಳು ನಡೆದಿದ್ದು ಅವುಗಳಿಗೆ ಉತ್ತರ ನೀಡಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ತಿಳಿಸಿದ್ದಾರೆ.
ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಯಾವೊಂದು ಕೊಡುಗೆಯನ್ನೂ ನೀಡದ ಕೇಂದ್ರ ಸರ್ಕಾರ ಕರ್ನಾಟಕದ ಜನರ ಬಗ್ಗೆ ತಾರತಮ್ಯ ಮಾಡುತ್ತಿದೆ. ಕೇಂದ್ರದ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ಪಾದಯಾತ್ರೆ ನಡೆಸುತ್ತಿದ್ದಾರೆ. ವಾರಕ್ಕೊಮ್ಮೆ ರಾಜ್ಯಕ್ಕೆ ಬಂದು ಹೋಗುವ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಮಾತನಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.