ಬಿಜೆಪಿ ಭದ್ರಕೋಟೆಯಲ್ಲಿ ಸಚಿವ ಸುನಿಲ್ ಕುಮಾರ್‌ರನ್ನು ಮಣಿಸಲು ಚುನಾವಣಾ ಅಖಾಡಕ್ಕಿಳಿದ ಪ್ರಮೋದ್ ಮುತಾಲಿಕ್.
ಸುಭಾಶ್ಚಂದ್ರ ವಾಗ್ಳೆ
ಉಡುಪಿ(ಫೆ.17): ಪಶ್ಚಿಮಘಟ್ಟದ ತಪ್ಪಲು ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಪ್ರಸ್ತುತ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಮತ್ತೊಮ್ಮೆ ಬಿಜೆಪಿಯಿಂದ ಇಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರನ್ನು ತಮ್ಮ ಶಿಷ್ಯ ಎಂದೇ ಕರೆದುಕೊಳ್ಳುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಈ ಬಾರಿ ಕಾರ್ಕಳದಿಂದ ಸುನಿಲ್ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
undefined
ಕಾರ್ಕಳ ಈಗ ಬಿಜೆಪಿಯ ಭದ್ರಕೋಟೆ. ಹಿಂದುತ್ವ ಇಲ್ಲಿನ ವಾತಾವರಣದಲ್ಲಿಯೇ ಬೆರೆತುಕೊಂಡಿದೆ. ಅದಕ್ಕೆ ಸುನಿಲ್ ಅವರ ಪ್ರಖರ ಮಾತುಗಾರಿಕೆಯೇ ಕಾರಣ. ಅದೇ ಅವರನ್ನು ಇಲ್ಲಿ 3 ಬಾರಿ ಗೆಲ್ಲಿಸಿದೆ. ಆದರೆ, ಮುತಾಲಿಕ್ ಅವರು ಸುನಿಲ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿ, ದಾಖಲೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಗುರುವಿಗೆ ಗೌರವ ಕೊಟ್ಟು ಚುನಾವಣೆಯಿಂದ ಹಿಂದಕ್ಕೆ ಸರಿಯುವಂತೆ ಆಗ್ರಹಿಸುತ್ತಿದ್ದಾರೆ.
ದುಡ್ಡಿಗೋಸ್ಕರ ಕಾರ್ಕಳಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಪ್ರಮೋದ್ ಮುತಾಲಿಕ್
ಸುನಿಲ್ ಕುಮಾರ್ ಅವರು ಕಾರ್ಕಳದಲ್ಲಿ ಪಕ್ಷದಲ್ಲಿ ಬೇರೆ ನಾಯಕರನ್ನು ಬೆಳೆಯುವುದಕ್ಕೆ ಬಿಟ್ಟಿಲ್ಲ ಎನ್ನುವ ಆರೋಪವಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಸ್ಥಳೀಯ ಬಿಜೆಪಿ, ಹಿಂದು ಸಂಘಟನೆಗಳ ನಾಯಕರು ಮುತಾಲಿಕ್‌ಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ. ಇದು ಮುತಾಲಿಕ್‌ಗೆ ಒಂದಷ್ಟುಬಲ ನೀಡಿದ್ದು, ಅವರಿಲ್ಲಿ ಬಿಜೆಪಿಯ ಮತಬುಟ್ಟಿಗೆ ಕೈ ಹಾಕುತ್ತಿರುವುದಂತೂ ಸತ್ಯ. ಆದರೆ, ಎಷ್ಟುಮತ ಅವರ ಕೈಗೆ ಸಿಗುತ್ತವೆ ಎನ್ನುವುದೇ ಸದ್ಯದ ಚರ್ಚೆಯ ವಿಷಯ.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಕಾಂಗ್ರೆಸ್‌ನಿಂದ 4 ಬಾರಿ ಗೆದ್ದ ಕ್ಷೇತ್ರವಿದು. ನಂತರ, ಕಾಂಗ್ರೆಸ್‌ನ ಗೋಪಾಲ ಭಂಡಾರಿ 2 ಬಾರಿ ಗೆದ್ದಿದ್ದರು. ಇಂದು ಕಾಂಗ್ರೆಸ್‌ನ ಬಲಹೀನತೆಯೇ ಬಿಜೆಪಿ ಪ್ರಬಲವಾಗಲು ಕಾರಣವಾಗಿದೆ. ಸದ್ಯ ಕಾಂಗ್ರೆಸ್‌ನಿಂದ ಡಿ.ಆರ್.ರಾಜು, ಸುರೇಂದ್ರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿಮತ್ತು ಮಂಜುನಾಥ ಪೂಜಾರಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು, ಮೊಯ್ಲಿ ಅವರು ಮಗನನ್ನು ಕಾರ್ಕಳದಲ್ಲಿ ಕಣಕ್ಕಿಳಿಸುತ್ತಾರೆ ಎಂಬ ವದಂತಿಯನ್ನು ಅವರೇ ಅಲ್ಲಗಳೆದಿದ್ದಾರೆ.
ರಾಷ್ಟ್ರವಾದ ಮತ್ತು ಹಿಂದುತ್ವ ನಮ್ಮ ಸರಕಾರಿ ಕಾರ್ಯಕ್ರಮದ ಪ್ರಮುಖ ಅಜೆಂಡಾ: ವಿ.ಸುನೀಲ್ ಕುಮಾರ್
ಕ್ಷೇತ್ರ ಹಿನ್ನೆಲೆ:
ಹಿಂದೆ ಕಾರ್ಕಳ, ಕಾಂಗ್ರೆಸ್‌ನ ತವರಾಗಿತ್ತು. ಆದರೆ, ಇದೀಗ ಹಿಂದುತ್ವದ ನೆಲೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗುತ್ತಿದೆ. ಸಚಿವ ಸುನಿಲ್ ಕುಮಾರ್ 3 ಬಾರಿ ಇಲ್ಲಿ ಗೆದ್ದಿದ್ದಾರೆ. ಈ ಬಾರಿ ಮತ್ತೊಬ್ಬ ಹಿಂದುಪರ ಹೋರಾಟಗಾರ ಮುತಾಲಿಕ್ ಇಲ್ಲಿಂದ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ. ನಗಣ್ಯ ಎಂಬಷ್ಟುಜನಸಂಖ್ಯೆಯ ಶೇರಿಗಾರ್ (ಮಂಗಳವಾದ್ಯ ವಾದಕರ) ಜಾತಿಗೆ ಸೇರಿದ ವೀರಪ್ಪ ಮೊಯ್ಲಿ, ಇಲ್ಲಿ 22 ವರ್ಷ ಶಾಸಕರಾಗಿ, 4 ಬಾರಿ ಗೆದ್ದಿದ್ದರು. ರಾಜ್ಯದ ಮುಖ್ಯಮಂತ್ರಿಯೂ ಆದರು. ಆದರಿಂದು ಆ ಜಾತ್ಯತೀತ ವಾತಾವರಣ ಇಲ್ಲ. 3 ಬಾರಿ ಗೆದ್ದಿರುವ ಹಾಲಿ ಶಾಸಕ, ಬಿಜೆಪಿಯ ಸುನಿಲ್ ಕುಮಾರ್ ಅವರು ಬಿಲ್ಲವ ಜಾತಿಗೆ ಸೇರಿದವರು.
ಜಾತಿವಾರು ಲೆಕ್ಕಾಚಾರ:
ಸುಮಾರು 45 ಸಾವಿರದಷ್ಟಿರುವ ಬಿಲ್ಲವರೇ ಇಲ್ಲಿ ನಿರ್ಣಾಯಕರು. ಇನ್ನು, ಬಂಟರು 40 ಸಾವಿರ, ಕೊಂಕಣಿ ಮತ್ತು ಬ್ರಾಹ್ಮಣರು 35 ಸಾವಿರ, ಕ್ರೈಸ್ತರು 12 ಸಾವಿರ, ಮುಸ್ಲಿಮರು 10 ಸಾವಿರ, ಜೈನರು 6 ಸಾವಿರ, ಹಿಂದುಳಿದ ವರ್ಗದವರು 25 ಸಾವಿರ ಮತ್ತು ಪ.ಜಾ., ಪ.ಪಂಗಡದವರು 10 ಸಾವಿರದಷ್ಟಿದ್ದಾರೆ.