ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರು ಬಂಡಾಯವೆದ್ದು ಬಿಜೆಪಿ ಸೋಲಿಗೆ ಕಾರಣವಾಗಿದ್ದ ಪಕ್ಷೇತರ ಅಭ್ಯರ್ಥಿ, ಹಿಂದೂ ಫೈಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಭೇಟಿಯಾಗಿದ್ದಾರೆ
ಬೆಂಗಳೂರು (ಜು.8): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರು ಬಂಡಾಯವೆದ್ದು ಬಿಜೆಪಿ ಸೋಲಿಗೆ ಕಾರಣವಾಗಿದ್ದ ಪಕ್ಷೇತರ ಅಭ್ಯರ್ಥಿ, ಹಿಂದೂ ಫೈಯರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಭೇಟಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಲೋಕಸಭಾ ಚುನಾವಣೆ ಹತ್ತಿರವಿರುವಾಗಲೇ ಇವರಿಬ್ಬರ ಭೇಟಿ ದಕ್ಷಿಣ ಕನ್ನಡ ಮಾತ್ರವಲ್ಲ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಭೇಟಿ ಮಾಡಿರುವ ಇವರು ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ಮಲತಾಯಿ ಧೋರಣೆ: ಸಿಎಂ ಸಿದ್ದರಾಮಯ್ಯ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪುತ್ತಿಲ ಅವರಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬಂಡಾಯ ಅಭ್ಯರ್ಥಿಯಾಗಿ ಹಿಂದೂ ಮುಖಂಡರ ಬೃಹತ್ ಬೆಂಬಲದಿಂದ ಪುತ್ತಿಲ ಪಕ್ಷೇತರವಾಗಿ ಸ್ಪರ್ಧಿಸಿ ಸೋತರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗಿಂತ ಅಂತ್ಯತ ಹೆಚ್ಚು ಮತಗಳಿಂದ ಗೆಲುವು ಕಂಡಿದ್ದರು. ಇದು ಪಕ್ಷೇತರ ಅಭ್ಯರ್ಥಿಗೆ ಸಿಕ್ಕ ದಾಖಲೆಯ ಮತವಾಗಿತ್ತು. ಕಾಂಗ್ರೆಸ್ ನ ಅಶೋಕ್ ಕುಮಾರ್ ರೈ ಶಾಸಕರಾಗಿ ಆಯ್ಕೆಯಾಗಿದ್ದರು.
ಕಳೆದ ಜೂನ್ ತಿಂಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಸೇರಿ ಐವರ ಜೊತೆ ಬಿಎಲ್ ಸಂತೋಷ್ ಸಭೆ ನಡೆಸಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ಇದೀಗ ಪುತ್ತಿಲರನ್ನು ದೆಹಲಿಗೆ ಕರೆಸಿಕೊಂಡು ಸಭೆ ನಡೆಸಿದ್ದಾರೆ ಎನ್ನಲಾಗಿದೆ. ದೆಹಲಿಯ ಬಿಎಲ್ ಸಂತೋಷ್ ನಿವಾಸದಲ್ಲಿ ಈ ಸಭೆ ನಡೆದಿದ್ದು, ಅರುಣ್ ಕುಮಾರ್ ಪುತ್ತಿಲ, ಭಾಸ್ಕರ್ ಆಚಾರ್ಯ ಹಿಂದಾರು, ಪುತ್ತೂರಿನ ಖ್ಯಾತ ವೈದ್ಯ ಹಾಗೂ ಪುತ್ತಿಲ ಪರಿವಾರದ ಡಾ ಸುರೇಶ್ ಪುತ್ತೂರಾಯ, ಉದ್ಯಮಿ ಗಣೇಶ್ ಜೊತೆಗೆ ಚುನಾವಣೆಯಲ್ಲಿ ಪುತ್ತಿಲ ಪರ ಬ್ಯಾಟ್ ಬೀಸಿದ್ದ ರಾಜರಾಮ್ ಅವರು ಕೂಡ ಸಭೆಯಲ್ಲಿ ಇದ್ದರು ಎನ್ನಲಾಗಿದೆ.
ಬೆಳಗಾವಿ ಜೈನಮುನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು
ವಿಧಾನ ಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಪುತ್ತಿಲ ಅಭಿಮಾನಿಗಳು 2024ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದ್ದು, ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪುತ್ತಿಲ ಅವರಿಗೆ ಈ ಬಾರಿ ಟಿಕೆಟ್ ನೀಡಬೇಕೆಂಬುದು ಅವರ ಅಭಿಮಾನಿಗಳ ಆಸೆಯಾಗಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ದಿನದಿಂದಲೇ ಲೋಕಾ ಚುನಾವಣೆಯಲ್ಲಿ ಪುತ್ತಿಲಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.