Asianet Suvarna News Asianet Suvarna News

ಬೆಳಗಾವಿ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು

ಬೆಳಗಾವಿ ಜಿಲ್ಲೆಯ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಯನ್ನು ಹಣದ ವಿಚಾರಕ್ಕಾಗಿ ಆಶ್ರಮದ ಭಕ್ತರೇ ಕರೆಂಟ್‌ ಶಾಕ್‌ ಕೊಟ್ಟು ಕೊಲೆ ಮಾಡಿದ್ದಾರೆ.

Belagavi Jain saint was kill by electric shock body was dismembered and thrown in field sat
Author
First Published Jul 8, 2023, 1:09 PM IST

ಬೆಳಗಾವಿ (ಜು.08): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಯನ್ನು ಹಣದ ವಿಚಾರಕ್ಕಾಗಿ ಆಶ್ರಮದ ಭಕ್ತರೇ ಕರೆಂಟ್‌ ಶಾಕ್‌ ಕೊಟ್ಟು ಕೊಲೆ ಮಾಡಿ ನಂತರ, ಅವರ ದೇಹವನ್ನು ತುಂಡರಿಸಿ ಭತ್ತದ ಗದ್ದೆ ಮತ್ತು ಬಾವಿಗೆ ದೇಹದ ತುಂಡುಗಳನ್ನು ಬೀಸಾಡಿದ್ದಾರೆ.

ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮುನಿಗಳ ಪೂರ್ವಾಶ್ರಮ ಸಂಬಂಧಿ ಪ್ರದೀಪ ನಂದಗಾಂವ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹಿರೇಕೊಡಿ ಆಶ್ರಮದಲ್ಲೇ ಮುನಿಗಳಿಗೆ ಕರೆಂಟ್ ಶಾಕ್ ಹಿಡಿಸಿ ಕೊಲೆ ಮಾಡಲಾಗಿದೆ. ಬಳಿಕ ದೇಹವನ್ನು ಕತ್ತರಿಸಿ, ಕಟಕಭಾವಿ ಗ್ರಾಮದ ಕೊಳವೆ ಬಾವಿಯಲ್ಲಿ ದೇಹ ಎಸೆಯಲಾಗಿದೆ. ಪೊಲೀಸರು ನೀಡಿದ ಮಾಹಿತಿ ತಿಳಿದು ನಮಗೂ ಶಾಕ್ ಆಯಿತು. ಕಾಮಕುಮಾರ ಮುನಿಗಳು ನಾಪತ್ತೆ ಆಗಿದ್ದಾಗ ಪ್ರಮುಖ ಆರೋಪಿ ನಮ್ಮ ಜೊತೆಗೆ ಹುಡುಕಾಟ ನಡೆಸಿದ್ದನು ಎಂದು ಹೇಳಿದ್ದಾರೆ.

Belagavi: ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯ ಬರ್ಬರ ಹತ್ಯೆ: ಕೊಲೆಯ ರಹಸ್ಯ ಬಯಲು

ಕೊಲೆ ಮಾಡಿದ ಆರೋಪಿ ಪೊಲೀಸರಿಗೆ ಕಥೆ ಕಟ್ಟಿದ್ದ: ಜೈನ ಮುನಿಯನ್ನು ಕೊಲೆ ಮಾಡಿದ ಆರೋಪಿಯನ್ನು ಆಶ್ರಮದ ಭಕ್ತ ನಾರಾಯಣ ಮಾಳಿ ಎಂದು ಗುರುತಿಸಲಾಗಿದೆ. ಇನ್ನು ಆಶ್ರಮದ ಕಾಮಕುಮಾರ ಮುನಿಗಳು ನಾಪತ್ತೆ ಆಗಿದ್ದಾಗ ಪ್ರಮುಖ ಆರೋಪಿ ನಮ್ಮ ಜೊತೆಗೆ ಹುಡುಕಾಟ ನಡೆಸಿದ್ದಾನೆ.  ಆಶ್ರಮದ ಸುತ್ತಮುತ್ತಲಿನ ಕಬ್ಬಿನ ಗದ್ದೆಗಳಲ್ಲಿ ಮುನಿಗಳು ಓಡಾಡಿದ್ದಾರೆಂದು ಕಥೆ ಕಟ್ಟಿದ್ದನು. ಆತನ ಹೇಳಿಕೆಗಳನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಕರೆಂಟ್‌ ಶಾಕ್‌ ಹೊಡೆಸಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ ಎಂದರು.

ಜೈನ ಮುನಿಗಳನ್ನು ಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕು: ಕಾಮಕುಮಾರ ಮುನಿಗಳನ್ನು ಕೊಲೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಮುನಿಗಳ ಸಂಬಂಧಿ ಪ್ರದೀಪ ಆಗ್ರಹ ಮಾಡಿದ್ದಾರೆ. ಮುನಿಗಳ ಮೃತದೇಹ ಸಿಕ್ಕ ಬಳಿಕ ಆಶ್ರಮದಲ್ಲೇ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮುನಿಗಳ ಪೂರ್ವಾಶ್ರಮ ಸಂಬಂಧಿ ಪ್ರದೀಪ ಹೇಳಿಕೆ ನೀಡಿದ್ದಾರೆ. 

ಖಟಕಬಾವಿ ಗ್ರಾಮದ ಗದ್ದೆಯಲ್ಲಿ ಮೃತದೇಹಕ್ಕಾಗಿ ಶೋಧ: ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಅವರನ್ನು ಕೊಲೆ ಮಾಡಿ ದೇಹವನ್ನು ತುಂಡರಿಸಿ ಖಟಕಬಾವಿ ಗ್ರಾಮದ ಗದ್ದೆಯಲ್ಲಿ ಬೀಸಾಡಿದ್ದರು. ಪೊಲೀಸರಿಂದ ಜೈನಮುನಿಗಳ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಪೊಲೀಸರು ಜೆಸಿಬಿಗಳ ಸಹಾಯದಿಂದ ಶೋಧಕಾರ್ಯ ನಡೆಸುತ್ತಿದ್ದಾರೆ. ಖಟಕಬಾವಿ - ಮುಗಳಖೋಡ ರಸ್ತೆಯ ಪಕ್ಕದ ಗದ್ದೆಯಲ್ಲಿ ಮೃತದೇಹಕ್ಕಾಗಿ ಶೋಧ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮವಾಗಿದೆ.

ಕಾಣೆಯಾಗಿದ್ದ ಜೈನ ಮುನಿ ಬರ್ಬರ ಹತ್ಯೆ: ಇಬ್ಬರ ಬಂಧನ, ಸಿಗದ ಮೃತದೇಹ

ಮುನಿಗಳ ನಾಪತ್ತೆಯಾದ 2 ದಿನಗಳ ನಂತರ ಭಕ್ತರಿಂದ ದೂರು: ಜುಲೈ 5ರಿಂದ ನಾಪತ್ತೆಯಾಗಿದ್ದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿಮಹಾರಾಜರು, ಹಿರೇಕೋಡಿಯ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದರು. ನಿನ್ನೆ ಮಧ್ಯಾಹ್ನ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿ ನಾಪತ್ತೆ ಬಗ್ಗೆ ಭಕ್ತರಿಂದ ದೂರು ದಾಖಲಿಸಲಾಗಿದೆ. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಜೈನಮುನಿ ಹತ್ಯೆ ಪ್ರಕರಣ ಬಯಲು ಆಗಿದೆ. ಆರೋಪಿಗಳಿಗೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರು ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂಬ ಸತ್ಯ ಬಾಯಿ ಬಿಟ್ಟಿದ್ದರು.

Follow Us:
Download App:
  • android
  • ios