ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು (ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಜಿಎಸ್‌ಟಿ ಪಾಲು ಕಡಿತ, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಕಡಿತ ಮತ್ತಿತರ ವಿಚಾರಕ್ಕೆ ಸಂಬಂಧಿಸಿ ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದರೆ, ಹಿಂದಿನ ರಾಜ್ಯ ಸರ್ಕಾರ ವಿವೇಚನಾರಹಿತವಾಗಿ ಕಾಮಗಾರಿಗಳಿಗೆ ನೀಡಿದ ಅನುಮೋದನೆಯಿಂದ 2022-23ರ ಅಂತ್ಯಕ್ಕೆ 2.55 ಲಕ್ಷ ಕೋಟಿ ಕಾಮಗಾರಿಗಳು ಬಾಕಿ ಉಳಿದಿದ್ದು, ಅದನ್ನು ಪೂರ್ಣಗೊಳಿಸಲು ಕನಿಷ್ಠ ಆರು ವರ್ಷವೇ ಬೇಕು ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಸಾಲು-ಸಾಲು ಉದಾಹರಣೆಗಳ ಮೂಲಕ ಬಜೆಟ್ ಭಾಷಣದುದ್ದಕ್ಕೂ ಪುಂಖಾನುಪುಂಖ ಟೀಕೆ ಮಾಡಿದ ಅವರು, 2020-21ರಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆಯಾಗಿದ್ದರಿಂದ 15ನೇ ಹಣಕಾಸು ಆಯೋಗವು 5,495 ಕೋಟಿ ರು. ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ನೀಡುವಂತೆ ಮಧ್ಯಂತರ ಶಿಫಾರಸು ಮಾಡಿತ್ತು. ಆದರೆ ಈ ಅನುದಾನ ನೀಡದೆ ಅನ್ಯಾಯ ಮಾಡಲಾಗಿದೆ. ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್‌ಚಾಜ್‌ರ್ ರಾಜ್ಯಗಳಿಗೆ ಹಂಚಿಕೆ ಮಾಡದಿರುವುದರಿಂದ ರಾಜ್ಯಕ್ಕೆ 7,780 ಕೋಟಿ ರು. ನಷ್ಟಆಗಿದೆ ಎಂದರು.
ಕುರಿ ಸತ್ತರೆ 5000, ಹಸು ಸತ್ತರೆ 10000 ಪರಿಹಾರ: ಗುಜರಾತ್‌ನ ಅಮುಲ್‌ನಲ್ಲಿ ನಂದಿನಿ ವಿಲೀನ ಇಲ್ಲ
ಶೇ.15.06ರಷ್ಟು ಬಡ್ಡಿ ಪಾವತಿಸಬೇಕು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ಹಿಂದಿನ ಸರ್ಕಾರ ಮಾಡಿರುವ ಸಾಲಗಳಿಂದಾಗಿದ್ದ ರಾಜಸ್ವ ಸ್ವೀಕೃತಿಯ ಶೇ.15.06 ರಷ್ಟು ಮೊತ್ತವನ್ನು ಬಡ್ಡಿ ರೂಪದಲ್ಲಿ ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ನಮ್ಮ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದು, ಬೃಹತ್ ಯೋಜನೆಗಳನ್ನು ರೂಪಿಸಲು ಅಡ್ಡಿಯಾಗುತ್ತಿದೆ ಎಂದಿದ್ದಾರೆ.
ಹಿಂದಿನ ಸರ್ಕಾರ ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿ ಪ್ರಮುಖ ಇಲಾಖೆಗಳಲ್ಲಿ ಭಾರೀ ಸಂಖ್ಯೆಯ ಕಾಮಗಾರಿಗಳಿಗೆ ಮಂಜೂರಾತಿ ನೀಡಿದೆ. ಹಿಂದಿನ ಸರ್ಕಾರ (2013-18) ತನ್ನ ಅಧಿಕಾರಾವಧಿಯಲ್ಲಿ .94,933 ಕೋಟಿ ಮೊತ್ತದ ಕಾಮಗಾರಿಗಳಿಗೆ ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಮತ್ತು ಇತರೆ ಇಲಾಖೆಗಳು ಅನುಮೋದಿಸಿವೆ. 2021-22ರ ಅಂತ್ಯಕ್ಕೆ .2.05 ಲಕ್ಷ ಕೋಟಿ ಗಳಷ್ಟುಮೊತ್ತದ ಬಾಕಿ ಕಾಮಗಾರಿಗಳನ್ನು ಸೃಷ್ಟಿಸಲಾಗಿದೆ. ಇದನ್ನು ಲೆಕ್ಕಿಸದೆ 2022-23ರಲ್ಲಿ .49,116 ಕೋಟಿ ಮೊತ್ತದ ಕಾಮಗಾರಿಗಳನ್ನು ವಿವೇಚನಾ ರಹಿತವಾಗಿ ಅನುಮೋದಿಸಲಾಗಿದ್ದು, ಒಟ್ಟು ಮೊತ್ತ .2.55 ಲಕ್ಷ ಕೋಟಿ ಮೊತ್ತದ ಕಾಮಗಾರಿ ಬಾಕಿ ಇವೆ. ಇನ್ನು ಇಂಧನ ಇಲಾಖೆಯಲ್ಲಿ ಈಗಾಗಲೇ .1 ಲಕ್ಷ ಕೋಟಿಗಳಷ್ಟುಬಾಕಿ ಇದೆ. ಈ ರೀತಿ ಪ್ರತಿ ಇಲಾಖೆಗಳನ್ನೂ ಆರ್ಥಿಕವಾಗಿ ಅಧೋಗತಿಗೆ ತಳ್ಳಲಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶವ್ಯಕ್ತಪಡಿಸಿದರು.
14 ಬಜೆಟ್‌ಗಳ ಪೈಕಿ ಮೊದಲ ಬಾರಿಗೆ ಕೊರತೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ
ಶೇ.8.70 ರಷ್ಟಿದ್ದ ಬೆಳವಣಿಗೆ ದರ ಶೇ.3.86ಕ್ಕೆ ಕುಸಿತ: 2013-18ರ ನಮ್ಮ ಸರ್ಕಾರ ಕೈಗಾರಿಕಾ ವಲಯದಲ್ಲಿ ಶೇ.8.70 ರಷ್ಟು ಬೆಳವಣಿಗೆ, ಸೇವಾ ವಲಯದಲ್ಲಿ ಶೇ.9.69 ರಷ್ಟುಬೆಳವಣಿಗೆ ದಾಖಲಿಸಿತ್ತು. ಆದರೆ 2022-23ರ ವೇಳೆಗೆ ಕೈಗಾರಿಕಾ ವಲಯದಲ್ಲಿ ಶೇ.3.86, ಸೇವಾ ವಲಯದಲ್ಲಿ ಶೇ.4.25 ರಷ್ಟಕ್ಕೆ ಕುಸಿದಿದೆ. ಇದು ಕೊರೋನಾದಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಿಂದಿನ ಸರ್ಕಾರ ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಆಯವ್ಯಯದಲ್ಲಿ ಹೇಳಲಾಗಿದೆ.